ಹೊಸನಗರ : ಮಹಿಳೆಯರನ್ನು ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಸಮಾಜದಲ್ಲಿ ಮುಂಚೂಣಿಗೆ ತರಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ಕಟಿಬದ್ದವಾಗಿದೆ. ಈ ಹಿನ್ನಲೆಯಲ್ಲಿ ಮಹಿಳೆಯರ ಸಮಗ್ರ ಅಭಿವೃದ್ದಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸುವ ಜೊತೆಯಲ್ಲಿ ರಾಜಕೀಯವಾಗಿ ಶೇ 33 ಮೀಸಲಾತಿ ಕಲ್ಪಿಸಲು ಕೇಂದ್ರ ಸರ್ಕಾರ ಮುಂಬರುವ ದಿನಗಳಲ್ಲಿ ಕ್ರಮಕೈಗೊಳ್ಳಲಿದೆ ಎಂದು ತೀರ್ಥಹಳ್ಳಿ ಕ್ಷೇತ್ರದ ಶಾಸಕ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಪಟ್ಟಣದ ಗಾಯತ್ರಿ ಮಂದಿರದಲ್ಲಿ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಆಯೋಜಿಸಿದ್ದ ನಾರಿಶಕ್ತಿ ವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸಮಾಜದಲ್ಲಿ ಗಂಡಿನಷ್ಟೇ ಹೆಣ್ಣು ಸರಿಸಮಾನಳಾಗಿ ವಿವಿಧ ಕ್ಷೇತ್ರಗಳಿಲ್ಲಿ ಸಾಧನೆ ಮಾಡುವ ಮೂಲಕ ಆರ್ಥಿಕ ಸಬಲತೆ ಕಂಡುಕೊಂಡು ಕುಟುಂಬ ನಿರ್ವಹಣೆಗೆ ತನ್ನದೇ ಕೊಡುಗೆ ನೀಡುತ್ತಿದ್ದಾಳೆ. ಮೋದಿ ದೇಶದ ಪ್ರಧಾನಿ ಆದ ಬಳಿಕ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಪುರುಷಗಿಂತ ಹೆಚ್ಚಿನ ಸಾಧನೆ ಸಾಧಿಸುತ್ತಿದ್ದಾರೆ. ಮಹಿಳೆಯರು ಸೇನೆಯಲ್ಲಿ, ವಿಮಾನದ ಪೈಲೆಟ್ ಆಗಿ, ವೈದ್ಯಕೀಯ, ತಂತ್ರಜ್ಞಾನ ಕ್ಷೇತ್ರಗಳಲ್ಲೂ ಸಹ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಈಗಾಗಲೇ ಶೇ.10 ಮಹಿಳೆಯರು ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಇದು ಶೇ. 25ಕ್ಕೆ ಏರಿಕೆ ಆಗಲಿದೆ ಎಂದರು.
ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರದಲ್ಲಿ ಮಹಿಳಾ ವಿತ್ತ ಸಚಿವರಾಗಿ ನಿರ್ಮಲ ಸೀತಾರಾಮನ್ ಅವರು ಆರ್ಥಿಕ ವಲಯದಲ್ಲಿ ಸಾಕಷ್ಟು ಬೆಳವಣಿಗೆಗೆ ಕಾರಣರಾಗಿದ್ದು, ವಿಶ್ವದ ಆರ್ಥಿಕತೆಯಲ್ಲಿ ಬಹುದೊಡ್ಡ ಸಾಧನೆಯ ಮೂಲಕ ಭಾರತ ಇಂದು 5ನೇ ಸ್ಥಾನದಲ್ಲಿರುವುದು ಶ್ಲಾಘನೀಯ ಸಂಗತಿ ಆಗಿದೆ ಎಂದರು.
ಮಹಿಳೆಯರು ಸಣ್ಣ ಸಣ್ಣ ಗೃಹ ಉದ್ಯಮಗಳ ಸ್ಥಾಪನೆಯಿಂದ ಆರ್ಥಿಕವಾಗಿ ಸಬಲತೆ ಕಾಣಲು ಕೇಂದ್ರದ ಬಿಜೆಪಿ ಸರ್ಕಾರ ಶೇ. 50 ಧನಸಹಾಯ ನೀಡು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆಯುವಂತೆ ಶಾಸಕ ಆರಗ ವಿನಂತಿಸಿದರು.
ವೇದಿಕೆಯಲ್ಲಿ ಜಿ.ಪಂ. ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಹಿರಿಯ ಬಿಜೆಪಿ ಮುಖಂಡ ಆರ್. ಟಿ.ಗೋಪಾಲ, ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ಆಶಾ ರವೀಂದ್ರ, ಕಾರ್ಯದರ್ಶಿ ಸುಮಾ ಸುರೇಶ್, ಪ.ಪಂ. ಉಪಾಧ್ಯಕ್ಷೆ ಕೃಷ್ಣವೇಣಿ, ತಾ.ಪಂ. ಮಾಜಿ ಅಧ್ಯಕ್ಷೆ ನಾಗರತ್ನ ದೇವರಾಜ್, ಪದ್ಮ ಸುರೇಶ್ ಮೊದಲಾದವರು ಇದ್ದರು.