ಹುಡುಕಾಟದ ವರದಿ
ಶಿವಮೊಗ್ಗ, ಮಾ.07:
ಶಿವಮೊಗ್ಗ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿರುವ ಹಿಂದಿನ ಅಂದರೆ ಸುಮಾರು 15 ವರ್ಷಗಳಿಂದ ಇರುವ ಪ್ರಕರಣಗಳ ಅಂತಿಮ ಹಂತದ ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿರುವುದು ಸರಿಯಷ್ಟೆ.
ಸಾಕಷ್ಟು ಪ್ರಕರಣಗಳು ಈಗಲೂ ಬಾಕಿ ಉಳಿದಿದ್ದು, ಅವುಗಳ ಇತ್ಯರ್ಥಕ್ಕೆ ಮುಂದಾಗಿರುವ ಕ್ರಮ ಒಳ್ಳೆಯದೇ. ಆದರೆ ಅದರ ಹೆಸರಲ್ಲಿ ಪೊಲೀಸ್ ಠಾಣೆಯಲ್ಲಿರುವ ಕೆಲ ಹೆಡ್ ಕಾನ್ಸ್ಟೇಬಲ್ ಹಾಗೂ ಎಎಸ್ಐಗಳ ಮೇಲೆ ಸಾಕಷ್ಟು ಒತ್ತಡ ಹಾಕುತ್ತಿರುವುದು ಸದ್ದಿಲ್ಲದೆ ಸುದ್ದಿಯಾಗುತ್ತಿರುವ ಸಂಗತಿ.
ಸುಮಾರು 2010 ರಿಂದ ಇಂದಿನವರೆಗೆ ಇರುವ ಪ್ರಕರಣಗಳ ಅಂಕಿ ಅಂಶಗಳ ಆಧಾರದಲ್ಲಿ ಸಾಕಷ್ಟು ಪ್ರಕರಣಗಳು ಕೆಲ ಪ್ರಕರಣಗಳಲ್ಲಿ ನೈಜ ಆರೋಪಿ ಸಿಗದ ಹಾಗೂ ತಪ್ಪು ಮಾಡಿದವ ತಪ್ಪಿಸಿಕೊಂಡ ಕಾರಣದ ಹಿನ್ನೆಲೆಯಲ್ಲಿ ಬಗೆ ಹರಿಯದ ಪ್ರಕರಣಗಳನ್ನು ಈಗ ಮುಗಿಸುವ ತುಡಿತ ಇಲಾಖೆಗೆ ಬಂದಿರುವುದು ಸರಿ. ಪ್ರತಿ ಪೊಲೀಸ್ ಠಾಣೆಗಳಲ್ಲಿ ಕನಿಷ್ಠ 2ರಿಂದ 4 ಜನ ಎಸ್ಐ ಗಳು ಇರುತ್ತಾರೆ. ಪಿಎಸ್ಐ ಗಳು ಈ ಕರ್ತವ್ಯದಲ್ಲಿ ಏಕೆ ಭಾಗಿಯಾಗುತ್ತಿಲ್ಲ. ಅಂತೆಯೇ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹೊಸದಾಗಿ ಬಂದಿರುವ ಪೊಲೀಸ್ ಇನ್ಸ್ಪೆಕ್ಟರ್ ಗಳಿಗೆ ಈ ಬಗ್ಗೆ ಗಂಧ ಗಾಳಿಯೂ ಗೊತ್ತಿಲ್ಲ. ಈಗ ಅದೆಲ್ಲವನ್ನು ಬಿಟ್ಟು ಎಎಸ್ಐ ಹಾಗೂ ಹೆಡ್ ಕಾನ್ಸ್ಟೇಬಲ್ ಗಳಿಗೆ ಈ ಪ್ರಕರಣವನ್ನು ಬಗೆಹರಿಸಲು ಸಖತ್ ಒತ್ತಾಯಿಸುತ್ತಿದ್ದರೆ, ಆ ಪೊಲೀಸರೇನು ಮಾಡಬೇಕು.
ಅದೆಷ್ಟೋ ವರ್ಷಗಳಿಂದ ಪತ್ತೆಯಾಗದ ಪ್ರಕರಣವನ್ನು ಹೇಗೆ ತಾನೇ ದಿಢೀರನೆ ಕಂಡುಹಿಡಿಯುತ್ತಾರೆ. ಇನ್ನೊಂದು ದುರಂತದ ವಿಷಯವೆಂದರೆ ಪೊಲೀಸರಿಗೆ ಹಂಚಿರುವ ಈ ಕೆಲಸ ಸಮರ್ಪಕವಾಗಿ ನಡೆಯದಿದ್ದರೆ, ಅವರನ್ನು ಪೊಲೀಸ್ ಪೇರೆಂಟ್ ಮೈದಾನಕ್ಕೆ ಕರೆದು ವಾರ್ನಿಂಗ್ ನೀಡುವ ಮೂಲಕ ದೈಹಿಕ ಶ್ರಮ ವಹಿಸುವ ಕಾರ್ಯವನ್ನು ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ ಎಂಬುದು ನೊಂದ ಪೊಲೀಸರ ಅಳವಷ್ಟೇ ಅಲ್ಲ ಶಿವಮೊಗ್ಗ ಜಿಲ್ಲೆಯ ಬಹಳಷ್ಟು ಪೊಲೀಸ್ ಇಲಾಖೆಯ ಹಿರಿಯ, ಕಿರಿಯ ಪೊಲೀಸರ ನೋವಿನ ಮಾತು.
ಇತ್ತ ಒಮ್ಮೆ ಪೊಲೀಸ ಇಲಾಖೆ ಗಮನಿಸುವುದು ಒಳ್ಳೆಯದು. ಏಕೆಂದರೆ ದಿಡೀರನೆ ಪ್ರಕರಣವನ್ನು ಹೇಗೆ ತಾನೇ ಬಗೆಹರಿಸಲು ಸಾಧ್ಯ? ಪ್ರೀತಿಯಿಂದ ನಿರಂತರ ಕೆಲಸದ ಮೂಲಕ ಒಟ್ಟಾರೆ ತಂಡದ ಮೂಲಕ ಇಡೀ ಎಲ್ಲ ಪ್ರಕರಣಗಳನ್ನು ಬಗೆಹರಿಸುವ ಪ್ರೀತಿಯ ಸೌದವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಹಿರಿಯ ಪೊಲೀಸ ಅಧಿಕಾರಿಗಳು ಮುಂದಾಗ ಬೇಕಿದೆ ಎಂಬುದು ಆತ್ಮೀಯರ ಪ್ರೀತಿಯ ಒತ್ತಾಯ.