Site icon TUNGATARANGA

ಭಾರತ ವಿಶ್ವದ ಆಧ್ಯಾತ್ಮಿಕತೆಯ ಗುರುವಾಗಿದ್ದು, ಭಾರತೀಯರು ದೇಹಕ್ಕಿಂತ ಹೆಚ್ಚಾಗಿ ದೇವರನ್ನು ಪೂಜಿಸುತ್ತಾರೆ/ಅತಿರುದ್ರ ಮಹಾಯಾಗದ ಪೂರ್ಣಾಹುತಿ ಧರ್ಮಸಭೆಯಲ್ಲಿ:ಶ್ರೀ ಉಜ್ಜಯಿನಿ ಮಹಾಪೀಠದ ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿ

ಶಿವಮೊಗ್ಗ: ಭಾರತ ವಿಶ್ವದ ಆಧ್ಯಾತ್ಮಿಕತೆಯ ಗುರುವಾಗಿದ್ದು, ಭಾರತೀಯರು ದೇಹಕ್ಕಿಂತ ಹೆಚ್ಚಾಗಿ ದೇವರನ್ನು ಪೂಜಿಸುತ್ತಾರೆ. ಮಾತೃಭೂಮಿಗೆ ಹೆತ್ತ ತಾಯಿಗಿಂತ ಹೆಚ್ಚಿನ ಗೌರವ ನೀಡುತ್ತಾರೆ. ಭಾರತದ ಸಂಸ್ಕಾರ, ಸಂಸ್ಕೃತಿ, ಆಚಾರ -ವಿಚಾರವನ್ನು ಎಲ್ಲರೂ ಉಳಿಸಬೇಕು ಎಂದು ಶ್ರೀ ಉಜ್ಜಯಿನಿ ಮಹಾಪೀಠದ ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳು ಹೇಳಿದ್ದಾರೆ.


ಅವರು ಇಂದು ವಿನೋಬನಗರದ ಶಿವಾಲಯದ ಆವರಣದಲ್ಲಿ ಲೋಕ ಕಲ್ಯಾಣಾರ್ಥಕ್ಕಾಗಿ ಮಹಾನಾಯಕ ಮೋದಿ ಜೀ ಅವರು ಮತ್ತೊಮ್ಮೆ ಪ್ರಧಾನಿಯಾಗಲು ಶಿವಮೊಗ್ಗ ಜಿಲ್ಲಾ ವೀರಶೈವ ಜಂಗಮ ಅರ್ಚಕ, ಪುರೋಹಿತರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಹಮ್ಮಿಕೊಂಡಿದ್ದ ಅತಿರುದ್ರ ಮಹಾಯಾಗದ ಪೂರ್ಣಾಹುತಿ ನೆರವೇರಿಸಿ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.


ಪ್ರಕೃತಿ ಮತ್ತು ಭೂತಾಯಿಯನ್ನು ನಮ್ಮ ಪೂರ್ವಜರು ದೇವರ ಸ್ವರೂಪ ನೀಡಿ ಪೂಜಿಸುತ್ತಾ ಬಂದಿದ್ದಾರೆ. ಆಹಾರಕ್ಕೆ ಅನ್ನಪೂರ್ಣೆಯ ರೂಪ ನೀಡಿದ್ದಾರೆ. ಅತಿರುದ್ರ ಮಹಾಯಾಗದಿಂದ ದೇಶಕ್ಕೆ ಉಂಟಾದ ಬರ, ಇನ್ನಿತರ ಕ್ಷೆಭೆಗಳು ಸಂಪೂರ್ಣವಾಗಿ ನಾಶವಾಗುತ್ತದೆ. ರುದ್ರ ಎಂದರೆ ರೋಧನೆಯನ್ನು ದೂರ ಮಾಡುವವನು. ಅರಿಯದೇ ಮಾಡಿದ ಪೂಜೆಯಿಂದಲೂ ಪ್ರಸನ್ನನಾಗಿ ಫಲ ನೀಡುವ ಏಕೈಕ ದೇವರೆಂದರೆ ಶಿವನೊಬ್ಬನೇ ಎಂದರು.


ವೀರಶೈವ ಪರಂಪರೆಯ ಪಂಚ ಪೀಠಗಳು ಕೂಡ ಸಮನ್ವಯತೆಗೆ ತಮ್ಮ ಕೊಡುಗೆ ನೀಡುತ್ತಾ ಬಂದಿದ್ದಾರೆ. ಹಿಂದಿನ ಕಾಲದಲ್ಲಿ ಎಲ್ಲಾ ರಾಜರುಗಳಿಗೆ ರಾಜಗುರುಗಳು ಸಲಹೆ, ಸೂಚನೆ ನೀಡುತ್ತಿದ್ದರು. ಮತ್ತು ರಾಜರು ಅದನ್ನು ಪಾಲಿಸುತ್ತಿದ್ದರು. ಈಗ ರಾಜಕಾರಣಿಗಳೇ ರಾಜರು. ನಾಡನ್ನು ಅಭಿವೃದ್ಧಿಪಡಿಸುವುದು ಅವರ ಕರ್ತವ್ಯ. ಗುರುಗಳು ಅವರಿಗೆ ಮಾರ್ಗದರ್ಶನ ಮಾಡಿದ್ದನ್ನು ಅವರು ಪಾಲಿಸಬೇಕು. ಸಂಸದ ಬಿ.ವೈ. ರಾಘವೇಂದ್ರ ದೇಶದಲ್ಲೇ ಎರಡನೇ ಅತ್ಯುತ್ತಮ ಸಂಸದರಾಗಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿ ಜನ ಮನದಲ್ಲಿ ನೆಲೆಸಿದ್ದಾರೆ ಎಂದರು.


ಲೋಕ ಕಲ್ಯಾಣಾರ್ಥಕ್ಕಾಗಿ ನಾವೆಲ್ಲರೂ ಒಳಿತನ್ನು ಬಯಸೋಣ. ಕಾಶಿಯಲ್ಲ್ಲಿ ಒಂದು ಸಂದರ್ಭದಲ್ಲಿ ಪಂಚಪೀಠದ ಮೂವರು ಶ್ರೀಗಳು ಭಾಗವಹಿಸಿದ ಒಂದು ಕಾರ್ಯಕ್ರಮದಲ್ಲಿ ಪ್ರಧಾನಿಯವರು ಸಂಕಲ್ಪ ಮಾಡುವ ಸಂದರ್ಭದಲ್ಲಿ ಇಡೀ ದೇಶದ ಜನರ ಹೆಸರಲ್ಲಿ ಸಂಕಲ್ಪ ಮಾಡುವಂತೆ ವಿನಂತಿಸಿದರು. ಇಡೀ ತಮ್ಮ ಜೀವನವನ್ನೇ ದೇಶದ ಜನರಿಗಾಗಿ ಮುಡಿಪಾಗಿಟ್ಟ ವಿಶ್ವ ಗುರು ಎನಿಸಿಕೊಂಡ ಪ್ರಧಾನಿ ಮೋದಿ ನಮಗೆಲ್ಲರಿಗೂ ಸಿಕ್ಕಿದ್ದೇ ಒಂದು ಅದೃಷ್ಟವಾಗಿದೆ ಅವರನ್ನು ಪ್ರಧಾನಿಯನ್ನಾಗಿಸಿ ಅವರಿಗೆ ಬಲ ನೀಡುವುದರಿಂದ ದೇಶದ ಸನಾತನ ಧರ್ಮದ ಪ್ರತೀಕವಾದ ಹಲವಾರು ಕ್ಷೇತ್ರಗಳು ಅಭಿವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ. ಜೊತೆಗೆ ದೇಶದ ಪ್ರತಿಯೊಬ್ಬ ಸಾಮಾನ್ಯ ಪ್ರಜೆಯ ಮನಸಿನಲ್ಲೂ ಸ್ಥಾನ ಗಳಿಸಿದ್ದಾರೆ. ನಾಯಕ ಎಂದು ಎನಿಸಿಕೊಳ್ಳಬೇಕಾದರೆ ಆತನ ಹತ್ತಾರು ಜನರನ್ನು ಬೆಳೆಸುವವನಾಗಿರಬೇಕು. ಹಿಂದೂ ಸನಾತನ ಪರಂಪರೆ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ದೇಶದ ಎಲ್ಲಾ ಸಂತ ಮಹಾಂತರ ಗುರು ಪೀಠಗಳ ಬೆಂಬಲ ಸನಾತನ ಧರ್ಮ ಉಳಿಸುವ ನಾಯಕನಿಗಿದೆ ಎಂದರು.


ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಸಂಸತ್ ನಲ್ಲಿ ಚರ್ಚೆ ಮಾಡಿ ಬಗೆಹರಿಸುವಂತಹ ಅಭಿವೃದ್ಧಿ ಮಾಡುವಂತಹ ಸಂಸದರನ್ನು ನೀವೆಲ್ಲರೂ ಆಯ್ಕೆ ಮಾಡಬೇಕು ಎಂದರು.
ಆರ್.ಎಸ್.ಎಸ್. ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್ ಮಾತನಾಡಿ, ಕಲಿಯುಗದಲ್ಲಿ ಧರ್ಮ ಕರ್ಮ ಸಂಯೋಗ ಇರಬೇಕು. ಪರಮಾರ್ಥ, ಪುರುಷಾರ್ಥ ಎರಡೂ ಇರಬೇಕು. ದೇಶಕ್ಕೆ ಮೊದಲ ಪ್ರಧಾನಿ ನಮಗೆ ನಾಸ್ತಿಕರೊಬ್ಬರು ಸಿಕ್ಕಿದ್ದರು. ವಾಜಪೇಯಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ನಂತರ ಈಗ ನರೇಂದ್ರ ಮೋದಿ ನಮಗೆ ಸಿಕ್ಕಿದ್ದಾರೆ. ಭಗವಂತನನ್ನು ಬಿಟ್ಟು ಬೇರೆ ಯೋಚನೆ ಮಾಡದೇ ಕಳೆದ ೧೦ ವರ್ಷದಲ್ಲಿ ಆಧ್ಯಾತ್ಮಕ ಚಿಂತನೆಯುಳ್ಳ ಭಾರತೀಯತೆಯನ್ನು ವಿಶ್ವಕ್ಕೆ ಪರಿಚಯಿಸಿದ ಅರ್ಚಕ ರೂಪದಲ್ಲಿ, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಪಾರಮಾರ್ಥಿಕ ಶಕ್ತಿ ಇರುವ ಒಬ್ಬ ಮಹಾನ್ ವ್ಯಕ್ತಿ ಪ್ರಧಾನಿಯಾಗಿ ಸಿಕ್ಕಿದ್ದಾರೆ. ಭಾರತ ಉಳಿದರೆ ವಿಶ್ವ ಉಳಿಯುತ್ತದೆ. ಭಾರತ ಉಳಿಯಬೇಕಾದರೆ ಸನಾತನ ಧರ್ಮ ಉಳಿಯಬೇಕು. ಅತಿರುದ್ರ ಮಹಾಯಾಗದಿಂದ ದೇಶಕ್ಕೆ ಸುಭೀಕ್ಷವಾಗಲಿದೆ. ಉತ್ತಮ ನಾಯಕತ್ವ ಲಭಿಸಲಿದೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಒಬ್ಬ ಸಂಸದನಿಗೆ ೫ ಕೋಟಿ ರೂ. ವಾರ್ಷಿಕ ಅನುದಾನ ಸಿಗುತ್ತದೆ. ನಿಮ್ಮೆಲ್ಲರ ಆಶೀರ್ವಾದಿಂದ ಆ ಅನುದಾನವನ್ನು ಸಂಪೂರ್ಣವಾಗಿ ಜಿಲ್ಲೆಯ ಅಭಿವೃದ್ಧಿಗೆ ಉಪಯೋಗಿಸಿದ್ದೇನೆ. ನಾನು ಮಾಡಿದ ಅಳಿಲು ಸೇವೆಗೆ ನಿಮ್ಮ ಆಶೀರ್ವಾದವೇ ಕಾರಣ. ಪೂರ್ವಜನ್ಮದ ಪುಣ್ಯದ ಫಲದಿಂದ ಗುರುಗಳ ಸಾನಿಧ್ಯದಲ್ಲಿ ಯಾಗದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ. ಈ ಬಾರಿಯ ಚುನಾವಣೆ ರಾಷ್ಟ್ರೀಯತೆಯ ಚುನಾವಣೆಯಾಗಿದೆ. ಅನೇಕ ಅಭಿವೃದ್ಧಿಗಳು ಜಿಲ್ಲೆಯಲ್ಲಿ ಆಗಿವೆ. ೩ ಸಾವಿರ ಕೋಟಿ ರಊ. ವೆಚ್ಚದಲ್ಲಿ ಆಗುಂಬೆ ಘಾಟಿಯಲ್ಲಿ ೧೬ ಕಿ.ಮೀ. ಉದ್ದದ ಸುರಂಗ ಮಾರ್ಗ ಯೋಜನೆಗೂ ಕೂಡ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದು, ನೀತಿ ಸಂಹಿತೆ ಜಾರಿಯಾಗುವುದರೊಳಗೆ ಅದು ಕೂಡ ಮಂಜೂರಾಗುವ ಸಾಧ್ಯತೆ ಇದೆ ಎಂದರು.
ದೇಶದಲ್ಲಿ ೧೦ ಕೋಟಿ ಕುಟುಂಬಗಳಿಗೆ ಅಡುಗೆ ಅನಿಲ ನೀಡಲಾಗಿದೆ. ೧.೨೫ ಲಕ್ಷ ರೂ. ಭಾಗ್ಯಲಕ್ಷ್ಮಿ ಬಾಂಡ್ ಹಣ ಜಿಲ್ಲೆಯಲ್ಲಿ ಸುಮಾರು ೨೫ ಸಾವಿರ ತಾಯಂದಿರಿಗೆ ಲಭಿಸಿದೆ. ದೇಶದ ಎಲ್ಲಾ ಸ್ತ್ರೀ ಶಕ್ತಿ ಸಂಘಗಳಿಗೆ ಬಡ್ಡಿರಹಿತ ೫ ಲಕ್ಷ ರೂ. ಸಾಲವನ್ನು ಮೋದಿ ಸರ್ಕಾರ ಘೋಷಿಸಿದೆ. ಮಹಿಳೆಯರಿಗೆ ಶೇ. ೩೪ ರಷ್ಟು ಮೀಸಲಾತಿ ಕೂಡ ನೀಡಿದ್ದು ಸಂಸತ್ ನಲ್ಲಿ ಮುಂದಿನ ಬಾರಿ ೧೮೦ ಮಹಿಳಾ ಸದಸ್ಯರು ಇರಲಿದ್ದಾರೆ. ಸಾಕಷ್ಟು ಅಭಿವೃದ್ಧಿ ಈಗಾಗಲೇ ಮಾಡಿದ್ದೇನೆ. ಆಶೀರ್ವಾದ ಮಾಡಿ ಎಂದರು.
ಕಾರ್ಯಕ್ರಮದಲ್ಲಿ ತಾವರೆಕೆರೆ ಶ್ರೀಗಳು, ಬಿಳಕಿ ಶ್ರೀಗಳು, ಕವಲೇದುರ್ಗ ಶ್ರೀಗಳು, ಕೋಣಂದೂರು ಶ್ರೀಗಳು, ತೊಗರ್ಸಿ ಶ್ರೀಗಳು, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಎಸ್. ರುದ್ರೇಗೌಡ, ವೀರಶೈವ ಸಮಾಜದ ಅಧ್ಯಕ್ಷರಾದ ಎಸ್.ಎಸ್. ಜ್ಯೋತಿಪ್ರಕಾಶ್, ಪ್ರಮುಖರಾದ ಎನ್.ಜೆ. ರಾಜಶೇಖರ್, ಧನಂಜಯ ಸರ್ಜಿ, ಮಹಾಲಿಂಗ ಶಾಸ್ತ್ರಿ, ಕೆ.ಇ. ಕಾಂತೇಶ್, ಸಂತೋಷ್ ಬಳ್ಳೆಕೆರೆ, ಮಹೇಶ್ ಮೂರ್ತಿ, ಇ. ವಿಶ್ವಾಶ್, ಅನಿತ ರವಿಶಂಕರ್, ಹರ್ಷ ಕಾಮತ್, ಮೋಹನ್ ರೆಡ್ಡಿ, ಮೋಹನ್ ಬಾಳೆಕಾಯಿ, ದಿವಾಕರ ಶೆಟ್ಟಿ ಮೊದಲಾದವರು ಇದ್ದರು.

Exit mobile version