– ಎಫ್‌ಕೆಸಿಸಿಐ ಮಂಥನ್ ಕಾರ್ಯಕ್ರಮಕ್ಕೆ ಚಾಲನೆ
ಬೆಂಗಳೂರು ಮಾ. 05: ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಉದ್ಯೋಗ ಸೃಷ್ಟಿ ಹಾಗೂ ವಿದ್ಯಾರ್ಥಿಗಳು ತಮ್ಮ ಕಲಿಕೆಯ ವೇಳೆಯಲ್ಲೇ ಉದ್ಯೋಗಾವಕಾಶಕ್ಕೆ ಸಜ್ಜಾಗುವಂತೆ ಮಾಡುವ ನಿಟ್ಟಿನಲ್ಲಿ ತರಬೇತಿ ನೀಡುವಂತಹ ಕಾರ್ಯದಲ್ಲಿ ರಾಜ್ಯದ ಕೈಗಾರಿಕೋದ್ಯಮಿಗಳು ಸರಕಾರದೊಂದಿಗೆ ಕೈಜೋಡಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ಕರೆ ನೀಡಿದರು.
ಇಂದು ಎಫ್.ಕೆ.ಸಿ.ಸಿ.ಐ ನಲ್ಲಿ ಏರ್ಪಡಿಸಿದ್ದ “ಮಂಥನ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೈಗಾರಿಕೆಗಳಿಗೆ ಅವಶ್ಯಕವಿರುವ ಕೌಶಲ್ಯಾಧಾರಿತ ಪಠ್ಯಕ್ರಮಗಳನ್ನು ಅಳವಡಿಸಿ ಕೊಳ್ಳಲು ಈಗಾಗಲೇ ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ವಾದ್ವಾನಿ ಫೌಂಡೇಶನ್, ಟೊಯೋಟಾ ಕಿರ್ಲೋಸ್ಕರ್, ಸೇರಿದಂತೆ ಹಲವಾರು ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಕೈಗಾರಿಕೆಗಳು ಸಹಕಾರ ನೀಡಿದರೆ ಅವರಿಗೆ ಅಗತ್ಯವಿರುವಂತಹ ಕೌಶಲ್ಯಾಧಾರಿತ ಅನುಭವ ಹೊಂದಿದ ವಿದ್ಯಾರ್ಥಿಗಳನ್ನು ಉದ್ಯೋಗಿಯಾಗಿ ಸುಲಭವಾಗಿ ಪಡೆಯಬಹುದಾದ ವಿಸ್ತಾರವಾದ ಕಾರ್ಯಕ್ರಮಗಳನ್ನು ಸರಕಾರದ ವತಿಯಿಂದ ಹಮ್ಮಿಕೊಂಡಿದ್ದೇವೆ ಎಂದರು.
ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಖಾಸಗಿ ಶಿಕ್ಷಣದಲ್ಲಿನ ಉದ್ಯೋಗಾವಕಾಶಗಳು ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ. ಈ ತಾರತಮ್ಯವನ್ನು ತಗೆದು ಹಾಕುವ ನಿಟ್ಟಿನಲ್ಲಿ ಸರ್ಕಾರಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಹಾಗೂ ಸಾಮಾನ್ಯ ಪದವಿ ಕಾಲೇಜುಗಳನ್ನು ಉನ್ನತ ದರ್ಜೆಗೇರಿಸಲು ಸಜ್ಜಾಗಿದ್ದೇವೆ. ಕೈಗಾರಿಕೆಗಳಲ್ಲಿ ಕೆಲಸ ನೀಡುವಾಗ ಅನುಭವ ಕೇಳುತ್ತಾರೆ ಈ ಅನುಭವವನ್ನು ನಾವೀಗ ವಿದ್ಯಾರ್ಥಿ ದೆಸೆಯಲ್ಲೆ ಶಿಕ್ಷಣ ಮತ್ತು ಕೈಗಾರಿಕೆಗಳೊಂದಿಗಿನ ಒಡಂಬಡಿಕೆಯೊಂದಿಗೆ ತರಬೇತಿಗೊಳಿಸಿ ಉದ್ಯೋಗ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಕೈಗಾರಿಕೋದ್ಯಮಗಳು ಸರ್ಕಾರದೊಂದಿಗೆ ಕೈ ಜೋಡಿಸಬೇಕು. ವಿದ್ಯಾರ್ಥಿಗಳಿಗೆ ತಮ್ಮ ಕೈಗಾರಿಕೆಗಳಲ್ಲಿ ತರಬೇತಿಗೆ ಅವಕಾಶ ಮಾಡಿಕೊಡಬೇಕು ಎಂದು ಸುಧಾಕರ್ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷರಾದ ರಮೇಶ್ ಚಂದ್ರ ಲಹೋಟಿ, ಮಂಥನ್ – 2024 ರ ಅಧ್ಯಕ್ಷರಾದ ಕೀರ್ತನ್ ಕುಮಾರ್ ಎಂ, ಉಪಾಧ್ಯಕ್ಷರಾದ ಉಮಾ ರೆಡ್ಡಿ, ಹಿರಿಯ ಉಪಾಧ್ಯಕ್ಷರಾದ ಎಂ. ಜಿ ಬಾಲಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.