Site icon TUNGATARANGA

ಸಿಹಿಮೊಗೆ ಕೋಟೆಮಾರಿಕಾಂಭಾ ಜಾತ್ರೆಗಿಂದು ಅಧಿಕೃತ ಪ್ರಚಾರ(ಸಾರು) ಆರಂಭ/ ಮಾ. 12 ರಿಂದ ವೈಭವದ ಜಾತ್ರೆ ಆರಂಭ ಮಾ. 15 ರಿಂದ ರಾಜ್ಯ ಮಟ್ಟದ ಬಯಲುಕುಸ್ತಿ ಪಂದ್ಯಾವಳಿ

ಶಿವಮೊಗ್ಗ,ಮಾ.5: ಇತಿಹಾಸ ಪ್ರಸಿದ್ಧವಾದ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆಯು ಮಾ.12ರಿಂದ 17ರವರೆಗೆ 5 ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಎಂದು ಕೋಟೆ ಶ್ರೀಮಾರಿಕಾಂಬ ಸೇವಾ ಸಮಿತಿಯ ಅಧ್ಯಕ್ಷ ಎಸ್.ಕೆ. ಮರಿಯಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಶಿವಮೊಗ್ಗದ ಮಾರಿಕಾಂಬ ಜಾತ್ರೆಯು ಅತ್ಯಂತ ಪ್ರಸಿದ್ಧವಾದ್ದು, ಸಾಗರ, ಶಿರಸಿಯನ್ನು ಬಿಟ್ಟರೆ ಜಿಲ್ಲಾ ಕೇಂದ್ರವಾದ ಶಿವಮೊಗ್ಗದಲ್ಲಿ ನಡೆಯುತ್ತಿರುವ ಅತ್ಯಂತ ದೊಡ್ಡ ಜಾತ್ರೆಯಾಗಿದೆ. ಈ ಜಾತ್ರೆಗೆ ಸುಮಾರು 500 ವರ್ಷಗಳ ಇತಿಹಾಸವಿದೆ ಎಂದರು.
ಇದು ಶ್ರೀ ಶ್ರೀಧರ ಸ್ವಾಮಿಗಳ ಶಕ್ತಿ ಪೀಠವಾಗಿದ್ದು, ಈ ಮಹಾ ತಾಯಿಗೆ ನೆರಳು ಮಾಡಿ ಎಂದು ಊರಿನ ಪುರಪಿತೃಗಳಿಗೆ ತಿಳಿಸಿ ಸಾಗರದ ಕಡೆಗೆ ಪಯಾಣ ಬೆಳೆಸಿದರು ಎಂಬ ಇತಿಹಾಸವಿದೆ.
ಕಾಲಕ್ರಮೇಣ ಕಾರ್ಯಪ್ರವೃತರಾದ ನಗರದಲ್ಲಿನ ಅನೇಕ ಗಣ್ಯರುಗಳು ಸೇರಿ ಸಮಿತಿಯೊಂದನ್ನು ರಚಿಸಿಕೊಂಡು ದೇವಾಲಯದ ಅಭಿವೃದ್ಧಿ ಕಾರ್ಯಗಳನ್ನು ಕಾಲ ಕಾಲಕ್ಕೆ ನಡೆಸಿಕೊಂಡು ಬರುತ್ತಿದ್ದಾರೆ. ನೂರಾರು ವರ್ಷಗಳಿಂದ ಎರಡು ವರ್ಷಕೊಮ್ಮೆ ನಡೆಯುವ ಶ್ರೀ ಮಾರಿಕಾಂಬೆ ಜಾತ್ರೆಯನ್ನು ಇತ್ತೀಚಿನ ವರ್ಷಗಳಿಂದ ಸಂಪ್ರದಾಯ ಮತ್ತು ಅರ್ಥಪೂರ್ಣವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಈ ಬಾರಿ ಮಾರ್ಚ್ 12 ರ ಮಂಗಳವಾರ ಬೆಳಗಿನ ಜಾವ ೫ ಗಂಟೆಗೆ ಸಮಿತಿ ವತಿಯಿಂದ ಮಂಗಳವಾದ್ಯದೊಂದಿಗೆ ಬಿ.ಬಿ.ರಸ್ತೆಯಲ್ಲಿನ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬದವರನ್ನು ಪೂಜೆಗೆ ಆಹ್ವಾನಿಸಲಾಗುತ್ತದೆ ಆ ಕುಟುಂಬದ ಮುತ್ತೈದೆಯರು ಮಂಗಳದ್ರವ್ಯಾದಿಗಳೊಂದಿಗೆ ಮೆರವಣಿಗೆಯಲ್ಲಿ ಬಾಸಿಂಗದೊಂದಿಗೆ ಗಾಂಧಿಬಜಾರಿನ ತವರು ಮನೆಯಲ್ಲಿರುವ ಶ್ರೀ ಮಾರಿಕಾಂಬೆಗೆ ಉಡಿ ತುಂಬಿ, ಪೂಜೆ ಸಲ್ಲಿಸುತ್ತಾರೆ. ತದ ನಂತರ ವಿಶ್ವಕರ್ಮ ಸಮಾಜದವರು ಸಾರ್ವಜನಿಕವಾಗಿ ಪೂಜೆಯನ್ನು ಆರಂಭಿಸುತ್ತಾರೆ ಮಂಗಳವಾರ ರಾತ್ರಿ 10 ಗಂಟೆಯವರೆಗೂ ಲಕ್ಷಾಂತರ ಮುತ್ತೈದೆಯರು ಶ್ರೀ ಮಾರಿಕಾಂಬೆಗೆ ಮಡ್ಲಕ್ಕಿ ಸಲ್ಲಿಸುತ್ತಾರೆ ಎಂದರು.
ಇದೆ ದಿನದಿಂದು ಮಾರಿ ಗದ್ದುಗೆಯಲ್ಲಿ ಬೆಳಿಗ್ಗೆ ರಿಂದ ಎಡೆ ಪೂಜೆ ಆರಂಭವಾಗುತ್ತದೆ. ಮಂಗಳವಾರ ರಾತ್ರಿ 9 ಗಂಟೆ ನಂತರ ಮಾರಿಕಾಂಬೆಯನ್ನು ರಥದಲ್ಲಿ ಕೂರಿಸಿ ಮೆರವಣಿಗೆಯಲ್ಲಿ ಉಪ್ಪಾರ ಸಮಾಜ ಬಾಂಧವರು ಗದ್ದಿಗೆಗೆ ತಂದು ಪ್ರತಿಷ್ಠಾಪಿಸುತ್ತಾರೆ. ಈ ಮಧ್ಯೆ ಗಂಗಾಪರಮೇಶ್ವರಿ ದೇವಸ್ಥಾನದಿಂದ ಗಂಗೆ ಪೂಜೆಯೊಂದಿಗೆ ಅಮ್ಮನವರನ್ನು ಮಂಗಳವಾದ್ಯದೊಂದಿಗೆ ಎದುರುಗೊಂಡು ಗಂಗಾಮತಸ್ಥ ಸಮಾಜದವರು ಪೂಜೆ ಸಲ್ಲಿಸುತ್ತಾರೆ ಎಂದರು.
ಮಾ.13ರ ಬುಧವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ವಿದ್ಯಾನಗರದ ಕರ್ಲಹಟ್ಟಿಯ ಹರಿಜನ ಸಮಾಜ ಬಾಂಧವರು ಬೇವಿನುಡುಗೆಯೊಂದಿಗೆ ಆಗಮಿಸಿ ಶ್ರೀ ಮಾರಿಕಾಂಬೆಗೆ ಪೂಜೆ ಸಲ್ಲಿಸಿದ ನಂತರ ಅಮ್ಮನವರನ್ನು ಗದ್ದುಗೆಗೆ ಪ್ರತಿಷ್ಠಾಪಿಸಲಾಗುತ್ತದೆ ಎಂದು ತಿಳಿಸಿದರು.
ತದನಂತರ ಕುರುಬ ಜನಾಂಗದ ಗುತ್ಯಮ್ಮ ದೇವಾಲಯದ ಅರ್ಚಕರಾದ ಚೌಡಿಕೆ ಕುಟುಂಬದವರು ನೈವೇದ್ಯ ಮಾಡಿ ಪೂಜೆ ಸಲ್ಲಿಸುತ್ತಾರೆ. ಬುಧವಾರ ಬೆಳಿಗ್ಗೆ 6 ರಿಂದ ಮಧ್ಯಾಹ್ನ 10 ಗಂಟೆಯವರೆಗೆ ವಾಲ್ಮೀಕಿ ಸಮಾಜದವರು, 10ರಿಂದ 2 ಗಂಟೆಯವರೆಗೆ ಉಪ್ಪಾರ ಸಮಾಜದವರು, ತದನಂತರ ರಾತ್ರಿ 11 ಗಂಟೆ ವರೆಗೆ ಮಡಿವಾಳ ಸಮಾಜದವರು ಸರದಿಯಂತೆ 4 ದಿನಗಳ ಕಾಲ ಗದ್ದಗೆಯಲ್ಲಿ ಅಮ್ಮನವರಿಗೆ ಪೂಜೆಯನ್ನು ಸಲ್ಲಿಸುತ್ತಾರೆ ಎಂದರು.
ಮಾರ್ಚ್ 16 ರ ಶನಿವಾರ ರಾತ್ರಿ 7 ಗಂಟೆಗೆ ಸಮಿತಿ ವತಿಯಿಂದ ದೇವಿಗೆ ಮಹಾಮಂಗಳಾರತಿ ಸಲ್ಲಿಸಿದ್ದ ನಂತರ ಶ್ರೀ ಮಾರಿಕಾಂಬೆಯ ಉತ್ಸವ ವಿವಿಧ ಜಾನಪದ ತಂಡಗಳ ಮೆರುಗಿನೊಂದಿಗೆ ಲಕ್ಷಾಂತರ ಮಂದಿ ಭಕ್ತಾದಿಗಳು ಅತ್ಯಂತ ಸಂಭ್ರಮದಿಂದ ಅಮ್ಮನವರನ್ನು ವನ ಪ್ರವೇಶಕ್ಕೆ ಕಳಿಸಿಕೊಡುವ ಮೂಲಕ ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ತೆರೆ ಎಳೆಯಲಾಗುತ್ತದೆ ಎಂದರು.
ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಮಾತನಾಡಿ, ಶ್ರೀ ಕೋಟೆ ಮಾರಿಕಾಂಬಾ ಜಾತ್ರೆಯ ಅಂಗವಾಗಿ ಸುಮಾರು 18ಕ್ಕು ಹೆಚ್ಚು ಉಪಸಮಿತಿಗಳನ್ನು ರಚಿಸಲಾಗಿದೆ. ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತದೆ. ಗಾಂಧಿಬಜಾರಿನ ಮುಖ್ಯದ್ವಾರದಲ್ಲಿ ಸುಮಾರು 44 ಅಡಿ ಎತ್ತರದಲ್ಲಿ ಚಾಮುಂಡಿ ವಿಗ್ರಹವನ್ನು ನಿರ್ಮಿಸಲಾಗುತ್ತದೆ. ಇದು ಚಲಿಸುವ ಸ್ಥಿತಿಯಲ್ಲಿರುತ್ತದೆ ಎಂದರು.
ಇಡೀ ನಗರಕ್ಕೆ ವಿದ್ಯುತ್ ಅಲಂಕಾರ ಮಾಡಲಾಗುವುದು. ವಿಶೇಷವಾಗಿ ಹೂವಿನ ಅಲಂಕಾರವನ್ನು ಎಂ.ಶ್ರೀಕಾಂತ್‌ರವರು ವಹಿಸಿಕೊಂಡಿದ್ದು, ಇದಕ್ಕಾಗಿ ಬೆಂಗಳೂರಿನಿಂದ 40 ಜನರು ಆಗಮಿಸಲಿದ್ದಾರೆ ಎಂದರು.
ಮಹಾನಗರ ಪಾಲಿಕೆ ಸುಮಾರು 10 ಲಕ್ಷ ರೂ. ನೀಡಿದೆ. ಅದನ್ನು ಬಿಟ್ಟರೆ ನಾವು ಯಾರ ಬಳಿಯೂ ಚಂದ ಎತ್ತುವುದಿಲ್ಲ. ಇದೊಂದು ಸರ್ವಜನಾಂಗದ ಹಬ್ಬವಾಗಿದೆ. ಅತಿ ಹೆಚ್ಚು ಬಾಬುದಾರರಿದ್ದಾರೆ. ಸುಮಾರು ೮ಕ್ಕೂ ಹೆಚ್ಚು ಜನಾಂಗದವರು ಈ ಜಾತ್ರೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.
ಗಾಂಧಿಬಜಾರಿನಲ್ಲಿ ಪ್ರತಿಷ್ಠಾಪಿಸುವ ಅಮ್ಮನವರ ದರ್ಶನಕ್ಕಾಗಿ ವಿಕಲಚೇತನರಿಗೆ ವಿಶೇಷ ಅವಕಾಶ ಕಲ್ಪಿಸಲಾಗುವುದು. ಜನಜಂಗುಳಿಯ ಒತ್ತಡ ಆಗದಂತೆ ದೇವಿಯ ದರ್ಶನಕ್ಕೆ ಸರಾಗ ವ್ಯವಸ್ಥೆ ಮಾಡಲಾಗುವುದು. ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು. ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಕೂಡ ನಡೆಸಲಾಗುವುದು ಎಂದರು.
ಪ್ರತಿನಿತ್ಯ ಬೆಳಿಗ್ಗೆ7ರಿಂದ ವಿಶೇಷ ಪೂಜೆಗಳು ನಡೆಯಲಿದ್ದು, ಪ್ರಸಾದ ವಿನಿಯೋಗ ನಿರಂತರವಾಗಿ ನಡೆಯುತ್ತದೆ. ಮಾ.13ರ ಬೆಳಿಗ್ಗೆ ಮಾರಿಗದ್ದುಗೆಯಲ್ಲಿ ಎಡೆಪೂಜೆ ಆರಂಭವಾಗುತ್ತದೆ. ಆದರೆ ಸಾರ್ವಜನಿಕರು ಎಡೆಯನ್ನು ಗದ್ದುಗೆಗೆ ಹಾಕಿ ಹಾಗೆ ಹೋಗಬಾರದು. ಆ ಎಡೆಯನ್ನು ತೆಗೆದುಕೊಂಡು ಸಾರ್ವಜನಿಕರಿಗೆ ವಿತರಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಎನ್. ಉಮಾಪತಿ, ಎಸ್. ಹನುಮಂತಪ್ಪ, ಡಿ.ಎಂ.ರಾಮಯ್ಯ, ಎಸ್.ಸಿ. ಲೋಕೇಶ್, ಎ.ಎಚ್.ಸುನೀಲ್, ಸೀತಾರಾಮಾನಾಯ್ಕ್, ಟಿ.ಎಚ್.ಚಂದ್ರಶೇಖರ್, ಸತ್ಯನಾರಾಯಣ್, ಪ್ರಭಾಕರ ಗೌಡ, ಹೆಚ್.ಡಿ.ಪ್ರಕಾಶ್, ತುಕ್ಕೋಜಿರಾವ್, ಎನ್.ರವಿಕುಮಾರ್ ಸೇರಿದಂತೆ ಹಲವರಿದ್ದರು.

ಶಿವಮೊಗ್ಗ,ಮಾ.5: ಕೋಟೆ ಶ್ರೀ ಮಾರಿಕಾಂಬಾ ಜಾತ್ರೆಯ ಅಂಗವಾಗಿ ಮಾರ್ಚ್ 15 ರಿಂದ 17 ರ ವರೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಬಯಲುಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.


ಈ ಪಂದ್ಯಾವಳಿಯಲ್ಲಿ ರಾಜ್ಯವಲ್ಲದೇ ಇತರ ರಾಜ್ಯಗಳಿಂದ ಕುಸ್ತಿ ಪೈಲ್ವಾನರು ಆಗಮಿಸುತ್ತಿದ್ದಾರೆ. ಪೈಲ್ವಾನರುಗಳಿಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ರಾಜ್ಯ – ಅಂತರರಾಜ್ಯದ ಹೆಸರಾಂತ ಪೈಲ್ವಾನರುಗಳಿಂದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯನ್ನು ನಡೆಸಲಾಗುತ್ತದೆ.
ಮಾ. 15ರಂದು 3 ಗಂಟೆಗೆ ಶಾಸಕ ಎಸ್.ಎನ್.ಚನ್ನಬಸಪ್ಪ ಕುಸ್ತಿಪಂದ್ಯಾವಳಿಯನ್ನು ಉದ್ಘಾಟಿಸುವರು. ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್ ಬಹುಮಾನ ವಿತರಿಸುವರು. ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್ ಆಗಮಿಸುವರು.


ಮಾ.೧೬ರ ಮಧ್ಯಾಹ್ನ ೩ಗಂಟೆಗೆ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ, ಕೆ.ಎಸ್.ಈಶ್ವರಪ್ಪ, ಶಾಸಕರಾದ ಶಾರದ ಪೂರ‍್ಯನಾಯ್ಕ್, ರುದ್ರೇಗೌಡರು, ಮಾಜಿ ಶಾಸಕ ಆರ್.ಕೆ.ಸಿದ್ರಾಮಣ್ಣ ಭಾಗವಹಿಸುವರು.


ಮಾ.೧೭ರಂದು ಕೂಡ ಪಂದ್ಯಾವಳಿಯಲ್ಲಿ ಗೆದ್ದ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಈ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಉದ್ಘಾಟಿಸುವರು. ಎಂಐಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥ್‌ಗೌಡ, ಮಾಜಿ ಸಂಸದ ಆಯನೂರು ಮಂಜುನಾಥ್, ಮಾಜಿ ಶಾಸಕ ಆರ್.ಪ್ರಸನ್ನಕುಮಾರ್, ಕೆ.ಬಿ.ಪ್ರಸನ್ನಕುಮಾರ್, ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಭಾಗವಹಿಸಲಿದ್ದಾರೆ.
ಅಖಾಡದ ಕೊನೆಯ ಕುಸ್ತಿ ಗೆದ್ದ ಪೈಲ್ವಾನರಿಗೆ ಬೆಳ್ಳಿ ಗದೆ ಮತ್ತು ೫೦ ಸಾವಿರ ನಗದು ಬಹುಮಾನ ನೀಡಲಾಗುತ್ತದೆ.


ಹಾಗೆಯೇ ದೇವಸ್ಥಾನದ ಆವರಣದಲ್ಲಿ ಮಾ.೧೪ರಿಂದ ೧೬ರವರೆಗೆ ಪ್ರತಿದಿನ ಸಂಜೆ ೬ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ೧೪ರಂದು ಭರತನಾಟ್ಯ, ೧೫ರಂದು ಸುಗಮ ಸಂಗೀತ, ೧೬ರಂದು ಸಂಗೀತ ಸಂಜೆ ನಡೆಯಲಿದೆ.

Exit mobile version