Site icon TUNGATARANGA

ಜೆ.ಎನ್.ಎನ್.ಸಿ.ಇ : ಸುಸ್ಥಿರ ಶಕ್ತಿ ನಾವೀನ್ಯತೆ ಕುರಿತ ಅಂತರಾಷ್ಟ್ರೀಯ ಸಮ್ಮೇಳನ/ಸುಧಾರಿತ ಜೈವಿಕ ಇಂಧನದಿಂದ ಶೂನ್ಯ ಇಂಗಾಲ ವಾತಾವರಣ ಸಾಧ್ಯ:ಡಾ.ವೈ.ಬಿ.ರಾಮಕೃಷ್ಣ

ಶಿವಮೊಗ್ಗ : ಸುಧಾರಿತ ಜೈವಿಕ ಇಂಧನಗಳ ಬಳಕೆಯಿಂದ ಭಾರತದಲ್ಲಿ 2070 ರ ವೇಳೆಗೆ ಶೂನ್ಯ ಇಂಗಾಲ ಹೊರಸೂಸುವಿಕೆಯ ವಾತಾವರಣ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದು ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಬಯೋ ಡೀಸೆಲ್ ಕಾರ್ಯ ತಂಡದ ಸದಸ್ಯ ಡಾ.ವೈ.ಬಿ.ರಾಮಕೃಷ್ಣ ಹೇಳಿದರು.

ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜಿಲ್ಲಾ ಜೈವಿಕ ಇಂಧನ ಸಂಶೋಧನೆ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ, ಕಾಲೇಜಿನ ರಸಾಯನ ವಿಜ್ಞಾನ ವಿಭಾಗ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ  ಸುಸ್ಥಿರ ಶಕ್ತಿ ಮತ್ತು ವಸ್ತು ವಿಜ್ಞಾನದಲ್ಲಿ ನಾವೀನ್ಯತೆ ಕುರಿತ ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಸುಧಾರಿತ ಜೈವಿಕ ಇಂಧನಗಳಿಗಾಗಿ ಭಾರತದಲ್ಲಿ ಸುಸ್ಥಿರ ಶಕ್ತಿ ಮತ್ತು ಉದಯೋನ್ಮುಖ ಪರಿಸರ ನೀತಿಯುಳ್ಳ ವ್ಯವಸ್ಥೆ ಅತ್ಯವಶ್ಯಕವಾಗಿದೆ. ನಾವೀನ್ಯತೆಯ ಸಹಯೋಗದಲ್ಲಿ ಸುಧಾರಿತ ಜೈವಿಕ ಇಂಧನ ಕುರಿತು ಸಂಶೋಧನಾರ್ಥಿಗಳು ಹೆಚ್ಚು ಕೇಂದ್ರಿಕರಿಸಬೇಕಿದೆ ಎಂದು ಹೇಳಿದರು.

ಭಾರತವು ಪ್ರತಿ ವರ್ಷ ಸುಮಾರು ಶತಕೋಟಿ ಟನ್‌ಗಳಷ್ಟು ಕೃಷಿ ಅವಶೇಷಗಳನ್ನು ಉತ್ಪಾದಿಸುತ್ತಿದ್ದು, ಅದರಿಂದ ಎಥೆನಾಲ್, ಜೈವಿಕ ಡೀಸೆಲ್ ಮತ್ತು ಜೈವಿಕ ಅನಿಲವನ್ನು ಉತ್ಪಾದಿಸುವ ಮೂಲಕ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ.

ಪೆಟ್ರೋಲಿಯಂ ಸಚಿವಾಲಯವು ಸುಸ್ಥಿರ ಇಂಧನಗಳನ್ನು ಉತ್ಪಾದಿಸಲು 12 ಮೆಗಾ ವಾಣಿಜ್ಯ ಸ್ಥಾವರಗಳನ್ನು ಸ್ಥಾಪಿಸಿದ್ದು, ಮುಂದಿನ ದಿನಗಳಲ್ಲಿ ಜೈವಿಕ ಅನಿಲವನ್ನು ಉತ್ಪಾದಿಸಲು ಭಾರತದಾದ್ಯಂತ 5000 ವಾಣಿಜ್ಯ ಸ್ಥಾವರಗಳನ್ನು ಸ್ಥಾಪಿಸಲು ಯೋಜಿಸಿದೆ.

ಈ ಮೂಲಕ ಭಾರತವು ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ಸುಸ್ಥಿರ ಇಂಧನವನ್ನು ಉತ್ಪಾದಿಸುವ ಮತ್ತು ತೈಲ ಆಮದುಗಳನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಹಿರಿಯ ಅಭಿಯಂತರ ಅನಿಲ್.ಆರ್.ನಾಯಕ್ ಮಾತನಾಡಿ, ಸುಸ್ಥಿರ ಶಕ್ತಿ ಮತ್ತು ವಸ್ತು ವಿಜ್ಞಾನದಲ್ಲಿ ನವೀನ ತಂತ್ರಜ್ಞಾನಗಳ ಕುರಿತು ಹೆಚ್ಚೆಚ್ಚು ಯೋಜನೆಯ ಪ್ರಸ್ತಾವನೆಗಳನ್ನು ಮಂಡಳಿಗೆ ಸಲ್ಲಿಸಲು ಯುವ ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ತಿಳಿಸಿದರು. 

ಜೆ.ಎನ್.ಎನ್.ಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಹಿರಿಯ ಮಾರುಕಟ್ಟೆ ವ್ಯವಸ್ಥಾಪಕ ಡಾ.ದಯಾನಂದ‌ ಜಿ.ಎನ್, ರಾಷ್ಟ್ರೀಯ ಶಿಕ್ಷಣ ‌ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಹೆಚ್.ಮೊಯಿನುದ್ದಿನ್ ಖಾನ್, ಸಹ ಪ್ರಾಧ್ಯಾಪಕ ಡಾ.ಚೇತನ್.ಎಸ್.ಜಿ, ಡಾ.ಸಚಿನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಸಹ ಪ್ರಾಧ್ಯಾಪಕರಾದ ಬಿಂದು ಪವನ್ ಮತ್ತು ಲುಬನಾ ಅಫರೋಜ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ 110 ಕ್ಕು ಹೆಚ್ಚು ಸಂಶೋಧನಾ ಪ್ರಬಂಧಗಳು ಪ್ರಕಟಗೊಂಡವು.

ಇದೇ ವೇಳೆ ಜೆಎನ್‌ಎನ್‌ಸಿಇಯಲ್ಲಿ ಉತ್ಪಾದನೆಗೊಂಡ ಬಯೋ ಡಿಸೆಲ್ ಅನ್ನು ಮೋಟಾರು ಕಾರಿಗೆ ಇಂಧನವಾಗಿ ಸೇರಿಸಲು ಅತಿಥಿಗಳು ಕೈಜೋಡಿಸಿದರು. 

Exit mobile version