ಶಿವಮೊಗ್ಗ,ಮಾ.2: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಇವರ ಸಂಯುಕ್ತಾಶ್ರಯದಲ್ಲಿ 2023-24ನೇ ಸಾಲಿನ ಶಿವಮೊಗ್ಗ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾ ಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳು ಮಾ.4 ಮತ್ತು 5ರಂದು ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕ್ರೀಡಾಕೂಟ ನೆಹರೂ ಕ್ರೀಡಾಂಗಣದಲ್ಲಿ ನಡೆದರೆ, ಸಾಂಸ್ಕøತಿಕ ಸ್ಪರ್ಧೆಗಳು ಸರ್ಕಾರಿ ನೌಕರರ ಭವನ ಹಾಗೂ ಕುವೆಂಪು ರಂಗಮಂದಿರದಲ್ಲಿ ನಡೆಯಲಿವೆ. ಜಿಲ್ಲೆಯ ಸುಮಾರು 3500ಕ್ಕೂ ಹೆಚ್ಚು ನೌಕರರು ಭಾಗವಹಿಸಲಿದ್ದಾರೆ
ಎಂದು ಸಂಘದ ರಾಜ್ಯಾಧ್ಯಕ್ಷರು ಆದ ಜಿಲ್ಲಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಬಾರಿಯ ಕ್ರೀಡಾಕೂಟದಲ್ಲಿ ಖೋ-ಖೋ ಮತ್ತು ಯೋಗ ಸ್ಪರ್ಧೆ ಸೇರ್ಪಡೆಗೊಳಿಸಲಾಗಿದೆ. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಚಿಸುವ ಸರ್ಕಾರದ ಖಾಯಂ ನೌಕರರು ಮಾ.4ರ ಬೆಳಿಗ್ಗೆ ಸ್ಥಳದಲ್ಲೇ ನೋಂದಾಣಿ ಮಾಡಿಕೊಳ್ಳಬಹುದು. ಕ್ರೀಡಾಕೂಟದಲ್ಲಿ ಭಾಗವಹಿಸುವ ಜಿಲ್ಲೆಯ ಸರ್ಕಾರಿ ನೌಕರರಿಗೆ 2ದಿನದ ಸಾಂದರ್ಭಿಕ ರಜೆ ಸೌಲಭ್ಯವಿದೆ ಎಂದರು.
ಮಾ.4ರ ಬೆಳಿಗ್ಗೆ 10ಕ್ಕೆ ಕ್ರೀಡಾಕೂಟವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಉದ್ಘಾಟಿಸಲಿದ್ದು, ಕ್ರೀಡಾ ಸಚಿವ ಬಿ.ನಾಗೇಂದ್ರ ಕ್ರೀಡಾ ಜ್ಯೋತಿ ಸ್ವೀಕರಿಸುವರು. ಸಂಸದ ಬಿ.ವೈ.ರಾಘವೇಂದ್ರ ಧ್ವಜಾರೋಹಣ ನೆರವೇರಿಸುವರು. ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್ ಉಪಸ್ಥಿತರಿರುವರು ಎಂದರು.
ಮುಖ್ಯ ಅತಿಥಿಯಾಗಿ ವಿವಿಧ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಬಿ.ಕೆ. ಸಂಗಮೇಶ್ವರ್, ಗೋಪಾಲಕೃಷ್ಣ ಬೇಳೂರು, ಶಾಸಕರಾದ ಆರಗಜ್ಞಾನೇಂದ್ರ, ಶಾರದಪೂರ್ಯನಾಯ್ಕ್, ಬಿ.ವೈ.ವಿಜಯೇಂದ್ರ, ಎಸ್.ಎಲ್. ಬೋಜೇಗೌಡ, ಎಸ್.ರುದ್ರೇಗೌಡ, ಭಾರತಿ ಶೆಟ್ಟಿ, ಡಿ.ಎಸ್.ಅರುಣ್, ಎಂ.ಐ.ಡಿ.ಬಿ. ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಕಾಡಾ ಅಧ್ಯಕ್ಷ ಡಾ. ಅಂಶುಮಂತ್, ಸಾಂಬಾರು ಮಂಡಳಿ ಅಧ್ಯಕ್ಷೆ ಜಿ. ಪಲ್ಲವಿ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಎಸ್.ಎನ್. ಚೆನ್ನಬಸಪ್ಪ ವಹಿಸಲಿದ್ದಾರೆ ಎಂದರು.
ಹಲವು ವರ್ಷಗಳ ಹಿಂದೆ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟವು ಶಿವಮೊಗ್ಗದಲ್ಲಿ ನಡೆದಿತ್ತು. ಈ ಬಾರಿ ಮೇನಲ್ಲಿ ಶಿವಮೊಗ್ಗದಲ್ಲಿ ನಡೆಸುವ ಬಗ್ಗೆ ಚಿಂತನೆ ನಡೆದಿದೆ ಎಂದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಮಹಾಸಮ್ಮೇಳನ ಯಶಸ್ವಿಯಾಗಿದ್ದು, ಸುಮಾರು 2.50ಲಕ್ಷ ಕ್ಕೂ ಹೆಚ್ಚು ಭಾಗವಹಿಸಿದ್ದರು. ಶಿವಮೊಗ್ಗ ಜಿಲ್ಲೆಯಿಂದ ಸುಮಾರು 15 ಸಾವಿರಕ್ಕೂ ಹೆಚ್ಚು ನೌಕರರು ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಿರುವುದಕ್ಕೆ ನೌಕರರಿಗೆ ಕೃತಜ್ಞತೆ ಸಲ್ಲಿಸಿದರು.
ರಾಜ್ಯ ಸರ್ಕಾರಿ ನೌಕರರ 7ನೇ ವೇತನ ಆಯೋಗದ ವರದಿಯನ್ನು ಆಯೋಗದ ಅಧ್ಯಕ್ಷರು ಕೂಡಲೇ ಸಲ್ಲಿಸಬೇಕು. ಈಗಾಗಲೇ ಈ ವರದಿ ಸಲ್ಲಿಸುವ ದಿನಾಂಕಗಳನ್ನು ಮುಂದೂಡತ್ತಲೇ ಬರಲಾಗಿದೆ, ಇದರಿಂದಾಗಿ ನೌಕರರಲ್ಲಿ ಅಸಮಧಾನವಿದೆ. 7ನೇ ವೇತನ ಆಯೋಗದ ವರದಿ ಜಾರಿಯಾದಲ್ಲಿ 12.50ಲಕ್ಷಕ್ಕೂ ಹೆಚ್ಚು ನೌಕರರು ಹಾಗೂ ನಿವೃತ್ತ ನೌಕರರಿಗೆ ಇದರಿಂದ ಅನುಕೂಲವಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಶಾಖೆಯ ಪದಾಧಿಕಾರಿಗಳಾದ ಆರ್.ಮೋಹನ್ಕುಮಾರ್, ಡಿ.ಟಿ. ಕೃಷ್ಣಮೂರ್ತಿ, ಆರ್.ಪಾಪಣ್ಣ, ದಿನೇಶ್, ರಾಜಪ್ಪ ಇನ್ನಿತರರು ಉಪಸ್ಥಿತರಿದ್ದರು.