ಶಿವಮೊಗ್ಗ,ಡಿ.30:
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ
ಸಿ.ಎಸ್.ಷಡಾಕ್ಷರಿ ಬಣಕ್ಕೆ ಭರ್ಜರಿ ಗೆಲುವು ದೊರೆತಿದೆ.
ಮಾಜಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ತಂಡಕ್ಕೆ ಸೋಲು ಕಂಡಿದೆ. ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವನ್ನು ಅವಿರೋಧವಾಗಿ ಆಯ್ಕೆ ಮಾಡಿದ ಹೆಗ್ಗಳಿಕೆ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಸಲ್ಲುತ್ತದೆ.
ಶಿವಮೊಗ್ಗ ಜಿಲ್ಲೆಯ ಶಿಕ್ಷಕರ ಪ್ರತಿಷ್ಠೆಯ ಚುನಾವಣೆ ಎನಿಸಿದ್ದ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಶಾಖಾ ಪದಾಧಿಕಾರಿಗಳ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಅವರ ಬಣ ಸೋಲು ಅನುಭವಿಸಿದೆ. ಸಿ.ಎಸ್.ಷಡಾಕ್ಷರಿ ಅವರ ನೇತೃತ್ವದ ಡಿ ಬಿ ರುದ್ರಪ್ಪರವರ ಬಣ ಜಯಭೇರಿ ಸಾಧಿಸಿದೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಶಾಖೆಯ ಪದಾಧಿಕಾರಿಗಳ ಆಯ್ಕೆಗೆ ಇಂದು ನಡೆದ ಚುನಾವಣೆಯಲ್ಲಿ ವಿದ್ಯಾನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಡಿ.ಬಿ.ರುದ್ರಪ್ಪ ಅವರು ಅಧ್ಯಕ್ಷ ಸ್ಥಾನಕ್ಕೆ ಜಯಶಾಲಿಯಾದರು. ಇವರೊಂದಿಗೆ ಉಪಾಧ್ಯಕ್ಷರಾಗಿ ಪ್ರಕಾಶ್ ಮಡ್ಲೂರು, ಶ್ರೀಮತಿ ಚಿತ್ರಾ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಧರಗೌಡ ವೈ.ಎನ್., ಸಹಕಾರ್ಯದರ್ಶಿಗಳಾಗಿ ಜಗನ್ನಾಥ್ ಕೆ., ಅನುಪಮ ಬಿ.ಕೆ., ಕೋಶಾಧ್ಯಕ್ಷರಾಗಿ ಮಂಜುನಾಥ ಎಂ.ಸಿ. ಸೇರಿದಂತೆ 9 ಜನರ ತಂಡ ಚುನಾವಣೆಯಲ್ಲಿ ಆಯ್ಕೆಗೊಂಡಿದ್ದಾರೆ.
ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಡಿ.ಬಿ.ರುದ್ರಪ್ಪ ಮಾತನಾಡಿ, ಈ ಹಿಂದಿನ ಅವಧಿಯಲ್ಲಿ ನಿಷ್ಕ್ರಿಯವಾಗಿದ್ದ ಆಧ್ಯಕ್ಷರ ಕಾರ್ಯವೈಖರಿಯಿಂದ ಬೇಸತ್ತ ಶಿಕ್ಷಕರು ರಾಜ್ಯ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರ ಕಾರ್ಯವೈಖರಿಯನ್ನು ಮೆಚ್ಚಿ ಅವರ ನೇತೃತ್ವದ ಬಣವನ್ನು ಬೆಂಬಲಿಸಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ನಿಷ್ಕ್ರಿಯವಾಗಿ ಸಂಘದ ಚಟುವಟಿಕೆಗಳಿಗೆ ಚಾಲನೆ ನೀಡಲಾಗುವುದು. ಅಲ್ಲದೇ ಶಿಕ್ಷಕರ ಸಮಸ್ಯೆ, ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಾಮಾಣಿಕವಾಗಿ ಯತ್ನಿಸಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಗುರುಭವನ ನಿರ್ಮಾಣ, ಎಲ್ಲಾ ತಾಲೂಕುಗಳಲ್ಲಿನ ಗುರುಭವನ ನಿರ್ಮಾಣ ಮತ್ತು ನವೀಕರಣ, ಎನ್.ಪಿ.ಎಸ್.ರದ್ದತಿ, ಕೇಂದ್ರಕ್ಕೆ ಸಮಾನವೇತನ, ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ, ಶಿಕ್ಷಕರ ವರ್ಗಾವಣೆ ಕಾಯಿದೆ ಮುಂತಾದ ವಿಷಯಗಳ ಕುರಿತು ರಾಜ್ಯಾಧ್ಯಕ್ಷರೊಂದಿಗೆ ಸಮನ್ವಯತೆ ಸಾಧಿಸಿ ಕಾರ್ಯಾನುಷ್ಠಾನಕ್ಕೆ ಯತ್ನಿಸಲಾಗುವುದು ಎಂದರು.
ಕಳೆದ ಆರು ವರ್ಷಗಳಿಂದ ಜಿಲ್ಲಾ ಶಿಕ್ಷಕರ ಸಂಘವನ್ನು ನಿಷ್ಕ್ರಿಯಗೊಳಿಸಿ ಹಾಗೂ ಹಣದಿಂದ ಎಲ್ಲವನ್ನು ಗೆಲ್ಲಬಹುದೆಂದು ಹೊರಟಿದ್ದ ಮಾಜಿ ಆಧ್ಯಕ್ಷರಿಗೆ ಸೋಲಿನ ರುಚಿ ತೋರಿಸಿ, ಶಿಕ್ಷಕರು ಸತ್ಯ, ನ್ಯಾಯಕ್ಕೆ ಮತವನ್ನು ನೀಡಿ ಗೆಲ್ಲಿಸಿದ್ದಾರೆ. ಅವರೆಲ್ಲರಿಗೂ ಅಭಿನಂದನೆಗಳು ಹಾಗೂ ಅವರ ನಿರೀಕ್ಷೆಯನ್ನು ಈಡೇರಿಸುತ್ತೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದ್ದಾರೆ.