ಶಿವಮೊಗ್ಗ,ಮಾ.೧: ಕೋಟೆ ರಸ್ತೆಯಲ್ಲಿರುವ ವಾಸವಿ ಪಬ್ಲಿಕ್ ಶಾಲೆ ವತಿಯಿಂದ ಶಾಲೆಯ ಮಕ್ಕಳಿಗಾಗಿ ವಿಭಿನ್ನ ಹಾಗೂ ವಿಶೇಷ ಕಾರ್ಯಕ್ರಮವಾದ “ವಾಸವಿ ಚಿಣ್ಣರ ಸಂತೆ”ನ್ನು ಮಾ.೦೩ರ ಸಂಜೆ ೪ರಿಂದ ೬ರವರೆಗೆ ಶಾಲೆಯ ಆವರಣದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಶಾಲೆಯ ಕಾರ್ಯದರ್ಶಿ ಎಸ್.ಕೆ. ಶೇಷಾಚಲ ತಿಳಿಸಿದರು.
ಅವರು ಇಂದು ಶಾಲೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಿಣ್ಣರ ಸಂತೆಯ ತುಂಬೆಲ್ಲ ಮಕ್ಕಳದ್ದೆ ಕಲರವವಾಗಿರುತ್ತದೆ. ತರಕಾರಿ, ಹಣ್ಣು ಹಾಗೂ ತಿಂಡಿ ತಿನಿಸುಗಳನ್ನು ಮಕ್ಕಳೇ ಮಾರಾಟ ಮಾಡುತ್ತಾರೆ. ಜನರ ನಡುವೆ ವಹಿವಾಟಿನಲ್ಲಿ ತೊಡಗಿಸಿಕೊಂಡರೆ ಸಂವಾಹನ ಕೌಶಲ್ಯ ವೃದ್ಧಿಯಾಗುತ್ತದೆ. ಮತ್ತು ಆತ್ಮವಿಶ್ವಾಸವು ಬೆಳೆಯುತ್ತದೆ. ಲಾಭ-ನಷ್ಟದ ಬಗ್ಗೆಯೂ ತಿಳಿಯಲಿದೆ ಎಂದರು.
೨೦ ಮಳಿಗೆಗಳಲ್ಲಿ ೭ರಿಂದ ೯ನೇ ತರಗತಿಯ ೨೦೦ ವಿದ್ಯಾರ್ಥಿಗಳು ವಹಿವಾಟಿನಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಮಕ್ಕಳಲ್ಲಿ ವಿಷಯಗಳ ಜ್ಞಾನದ ಜೊತೆಗೆ ವ್ಯವಹಾರಿಕ ಜ್ಞಾನ ಮತ್ತು ದುಡಿಮೆಯ ಮಹತ್ವ ತಿಳಿಸುವ ನಿಟ್ಟಿನಲ್ಲಿ ಚಿಣ್ಣರ ಸಂತೆಯನ್ನು ಆಯೋಜಿಸಲಾಗಿದೆ ಎಂದ ಅವರು ಚಿಣ್ಣರ ಸಂತೆಯಲ್ಲಿ ೨೦ಮಕ್ಕಳ ತಂಡ ತರಕಾರಿ ಹಣ್ಣು ಮತ್ತು ತಿಂಡಿ ತಿನಿಸು ಮಾರಾಟ ಮಾಡುತ್ತದೆ. ಒಟ್ಟು ೫೦ ಸಾವಿರ ರೂ.
ವಹಿವಾಟು ನಡೆಯುವ ಸಾಧ್ಯತೆ ಇದೆ.ಈ ಸಂತೆಯಲ್ಲಿ ಪೋಷಕರು ಹಾಗೂ ಶಾಲೆಯ ಅಕ್ಕಪಕ್ಕದ ನಿವಾಸಿಗಳೆಲ್ಲ ಗ್ರಾಹಕರಾಗಿರುತ್ತಾರೆ ಎಂದರು.
ವಾಸವಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ, ಬಿಪಿಎಲ್ ಕಾರ್ಡ್ ಹೊಂದಿರುವ ಪೋಷಕರ ಮಕ್ಕಳಿಗೆ ಎಲ್‌ಕೆಜಿ, ಯುಕೆಜಿಯಲ್ಲಿ ವಾರ್ಷಿಕ ೧೦,೦೦೦ ಶುಲ್ಕ, ೧ಮತ್ತು೨ನೇ ತರಗತಿಯ ಮಕ್ಕಳಿಗೆ ೧೫,೦೦೦ ರೂ. , ೩ ಮತ್ತು೪ನೇ ತರಗತಿಯ ಮಕ್ಕಳಿಗೆ ೨೦,೦೦೦ ಸಂಗ್ರಹಿಸಲಾಗುವುದು. ಇದು ನಮ್ಮ ಶಾಲಾ ಶುಲ್ಕವಾದ ಶೇ.೬೦ರಷ್ಟು ರಿಯಾಯಿತಿ ದೊರೆಯುತ್ತದೆ.
ಸತತ ೪ನೇ ವರ್ಷದಲ್ಲಿ ಈ ಯೋಜನೆ ಜಾರಿಯಲ್ಲಿದ್ದು, ಪ್ರಸ್ತುತ ೬೦ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದರು.
ಅರ್ಜಿ ಸಲ್ಲಿಸಲು ಮಾ.೧೮ ಕೊನೆಯ ದಿನವಾಗಿದ್ದು, ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಮಾ.೨೦ರ ಬೆಳಿಗ್ಗೆ ೧೧ ಗಂಟೆಗೆ ಪೋಷಕರ ಸಮ್ಮುಖದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು ಎಂದರು.
೨೦೨೫ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಜಿಲ್ಲೆ ಪ್ರಥಮ ಸ್ಥಾನ ಪಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ನಮ್ಮ ಶಾಲೆಯ ವತಿಯಿಂದ ಮಕ್ಕಳಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳು ಪ್ರಯತ್ನ ನಡೆಯುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಲೆಯ ಅಧ್ಯಕ್ಷ ಶ್ಯಾಮ್‌ಸುಂದರ್, ಖಜಾಂಚಿ ಎಚ್.ಮಂಜುನಾಥ್, ಪ್ರಾಂಶುಪಾಲ ಮನುಬೇಸ್ ಎನ್.ಸಿ. ಉಪಸ್ಥಿತರಿದ್ದರು.