ಶಿವಮೊಗ್ಗ,ಫೆ.೨೯: ತುಂಗಭದ್ರಾ ಸಕ್ಕರೆ ಕಾರ್ಖಾನೆಯ ರೈತರು, ಕಾರ್ಮಿಕರು ಮತ್ತು ನಿವಾಸಿಗಳು ತಮ್ಮ ಹಕ್ಕುಪತ್ರಕ್ಕಾಗಿ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದರು.
ಈ ಪ್ರತಿಭಟನೆಯು ಮಲವಗೊಪ್ಪದಿಂದ ಪ್ರಾರಂಭವಾಗಿ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ತಲುಪಿತು. ರೈತರು ಮತ್ತು ನಿವಾಸಿಗಳು ತಮ್ಮ ಟ್ರ್ಯಾಕ್ಟರ್‌ಗಳು ಎತ್ತಿನ ಗಾಡಿಗಳ ಸಮೇತ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಕಳೆದ ಸುಮಾರು ೫೦-೬೦ ವರ್ಷಗಳಿಂದ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದೇವೆ. ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದೇವೆ. ಸುಮಾರು ೧೦ ಸಾವಿರ ಕುಟುಂಬಗಳು ಇಲ್ಲಿವೆ. ಈಗ ಸಕ್ಕರೆ ಮಾಲೀಕನೆಂದು ಹೇಳಿಕೊಂಡು ನಮಗೆಲ್ಲ ತೊಂದರೆ ಕೊಡುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಮಲವಗೊಪ್ಪ, ತೊಪ್ಪಿನಗಟ್ಟ, ಹರಿಗೆ, ನಿಧಿಗೆ, ಹಕ್ಕಿಪಿಕ್ಕಿ ಕ್ಯಾಂಪ್, ಚಿಕ್ಕಮರಡಿ, ಹಾರೋಬೆನವಳ್ಳಿ, ತರಂಗನಹಳ್ಳಿ, ಪಿಳ್ಳಂಗೆರೆ, ಬಿ.ಬೀರನಹಳ್ಳಿ, ಎರಗನಾಳ್, ಹಾತೀಗಟ್ಟೆ ಹೀಗೆ ಸುಮಾರು ೧೪ ಗ್ರಾಮಗಳಲ್ಲಿ
ಸಾವಿರಾರು ಕುಟುಂಬಗಳು ಸರ್ಕಾರಿ ಪಡ ಮತ್ತು ಜಮೀನಿನಲ್ಲಿ ಕಳೆದ ೫೦ ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ.
ಈಗಾಗಲೇ ಫಾರಂ ನಂ.೫೦, ೫೩,೫೭ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮನೆಗಳಿಗೆ ೯೪ ಸಿಸಿ,೯೪ ಡಿಡಿ ಅರ್ಜಿ ಸಲ್ಲಿಸಿದ್ದಾರೆ. ಕೆಲವರಿಗೆ ಹಕ್ಕು ಪತ್ರಗಳು ಕೂಡ ನೀಡಲಾಗಿದೆ. ಸರ್ಕಾರದಿಂದ ಮೂಲ ಸೌಕರ್ಯ ಕೂಡ ನೀಡಿದ್ದಾರೆ. ಆದರೆ ಈಗ ಸಕ್ಕರೆ ಕಾರ್ಖಾನೆ ಕಂಪನಿಯವರು ನಮ್ಮದು ಜಾಗ ಎಂದು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸಕ್ಕರೆ ಕಾರ್ಖಾನೆಯ ನಕಲಿ ಮಾಲೀಕರ ಮಾಲೀಕತ್ವದ ಬಗ್ಗೆ ತನಿಖೆ ನಡೆಸಬೇಕು. ಸಾಗುವಳಿ ಮಾಡಿಕೊಂಡು ಬರುತ್ತಿರುವ ಎಲ್ಲಾ ರೈತರಿಗೆ ಮತ್ತು ನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕು. ನಕಲಿ ಮಾಲೀಕ ಮತ್ತು ಗೂಂಡಾಗಳ ಸಹಾಯದಿಂದ ನೂರಾರು ಕಾರ್ಮಿಕರನ್ನು ಒಕ್ಕಲೆಬ್ಬಿಸಿ ಮನೆಗಳನ್ನು ಡೆಮಾಲಿಶ್ ಮಾಡಿದ್ದು, ನಕಲಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶಾಸಕಿ ಶಾರದ ಪೂರ‍್ಯಾನಾಯ್ಕ, ರೈತ ಮುಖಂಡ ಕೆ.ಟಿ. ಗಂಗಾಧರ್, ಭೂ ಹಕ್ಕು ಹೋರಾಟ ಸಮಿತಿಯ ಪ್ರಮುಖರಾದ ಎಂ.ಬಿ.ಕೃಷ್ಣಪ್ಪ, ಕುಮಾರ್, ದೇವರಾಜ್, ರಂಗಪ್ಪ, ರಾಮೇಗೌಡ, ಭಾಗ್ಯ, ರಾಮಕೃಷ್ಣ ಮಂಜುನಾಥ್, ಗಿರೀಶ್, ನಾಗೇಂದ್ರ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು