ಶಿವಮೊಗ್ಗ ನಗರದ ಗೋಪಾಳಗೌಡ ಬಡಾವಣೆಯ ಮನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಈ ವೇಳೆ ಮನೆಯ ಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಿಸಿದೆ. ಇದರಿಂದ ಮನೆಯೊಳಗಿದ್ದ ವಸ್ತುಗಳೆಲ್ಲ
ಚೆಲ್ಲಾಪಿಲ್ಲಿಯಾಗಿದ್ದು, ಬೆಂಕಿ ನಂದಿಸುತ್ತಿದ್ದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.ಗೋಪಾಳಗೌಡ ಬಡಾವಣೆ ಕೃಷ್ಣಮಠದ ಬಳಿ ದುರಂತ ಸಂಭವಿಸಿದೆ. ಬ್ಯಾಂಕ್ ವೊಂದರ ಉದ್ಯೋಗಿ ಕೃಷ್ಣಪ್ಪ ಎಂಬುವರಿಗೆ ಮನೆ ಸೇರಿದ್ದಾಗಿದೆ. ಅಗ್ನಿ ಅವಘಡ ಸಂಭವಿಸಿದ ವೇಳೆ ಮನೆಯಲ್ಲಿ ಯಾರು ಇರಲಿಲ್ಲ. ಮನೆಯ ಒಳಗಡೆಯಿಂದ ಹೊಗೆ
ಬರುತ್ತಿರುವುದನ್ನು ಗಮನಿಸಿದ ಸುತ್ತಮುತ್ತಲಿನ ನಿವಾಸಿಗಳು, ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದ ವೇಳೆಯೇ, ಗ್ಯಾಸ್ ಸಿಲಿಂಡರ್‌ವೊಂದು ಸ್ಫೋಟಿಸಿದೆ. ಪವಾಡ ಸದೃಶ್ಯ ರೀತಿಯಲ್ಲಿ ಸಿಬ್ಬಂದಿಗಳು ಅಪಾಯದಿಂದ ಪಾರಾಗಿದ್ದಾರೆ.
ಮತ್ತೊಂದೆಡೆ, ಮನೆಯೊಳಗಿದ್ದ ಮತ್ತೆರೆಡು ಸಿಲಿಂಡರ್ ಗಳನ್ನು ಹೊರ ತರುವಲ್ಲಿ ಸಫಲರಾಗಿದ್ದಾರೆ. ಸಿಲಿಂಡರ್ ಸ್ಫೋಟದಿಂದ ಮನೆಯ ಗೋಡೆಯೊಂದು ಛಿದ್ರಛಿದ್ರವಾಗಿದೆ. ಜೊತೆಗೆ ವಸ್ತುಗಳೆಲ್ಲ ಸುಟ್ಟು ಕರಕಲಾಗಿವೆ.
ಸಿಲಿಂಡರ್‌ನಲ್ಲಿನ ಗ್ಯಾಸ್ ಸೋರಿಕೆಯಿಂದ ಅವಘಡ ಸಂಭವಿಸಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದ್ದು, ಘಟನೆ ಸ್ಪಷ್ಟ ಕಾರಣವೇನು? ಹಾನಿಗೀಡಾದ ವಸ್ತುಗಳ ಮೌಲ್ಯವೆಷ್ಟು? ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.
ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಮಹಾಲಿಂಗಪ್ಪ, ಪ್ರಾದೇಶಿಕ ಅಧಿಕಾರಿ ರಾಜು, ಸಿಬ್ಬಂದಿಗಳಾದ ಸುನೀಲ್, ಲೋಹಿತ್ ಕುಮಾರ್, ಮಂಜುನಾಥ್, ಶಶಿಕುಮಾರ್, ವೆಂಕಟೇಶ್, ನರೇಂದ್ರ ಮೊದಲಾದವರು ಬೆಂಕಿ ನಂದಿಸುವ ಕಾರ್ಯದಲ್ಲಿ ಭಾಗಿಯಾಗಿದ್ದರು.