ಬೆಂಗಳೂರು, ಫೆ, ೨೫; ಸಂಚಾರಿ ಒತ್ತಡದಿಂದ ನಲುಗಿರುವ ಬೆಂಗಳೂರು ನಗರದಲ್ಲಿ ನಾಗರಿಕರ ಸುರಕ್ಷತೆಗಾಗಿ ನಮ್ಮ ಯಾತ್ರಿ ತಂಡ ಅವಿರತವಾಗಿ ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರು ನಗರ ಪೊಲೀಸ್ ಸಹಭಾಗಿತ್ವದಲ್ಲಿ,
“ನಮ್ಮ ಸಾರಥಿ ಸಂಗಮ” ಎಂಬ ವಿಶಿಷ್ಟ ಮತ್ತು ಹೃದಯಸ್ಪರ್ಶಿ ಸಮಾರಂಭ ಆಯೋಜಿಸಲಾಗಿತ್ತು.
ನಗರದ ರಿಚ್ ಮಂಡ್ ಸರ್ಕಲ್ ನಲ್ಲಿರುವ ಬಾಲ್ಡಿವಿನ್ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಟೋ ಚಾಲಕರೇ ವಿಶೇಷ ಅತಿಥಿಗಳಾಗಿದ್ದರು.
ನಗರದ ಚಲನಶೀಲತೆಯನ್ನು ಸುಧಾರಿಸಲು ಉತ್ತಮ ಸೇವೆ ನೀಡಿದ 500 ಚಾಲಕರನ್ನು ಒಟ್ಟುಸೇರಿಸಿ ಚಾಲಕರ ಸುರಕ್ಷತೆ ಮತ್ತು ಗ್ರಾಹಕ ಸೇವಾ ಮಾನದಂಡಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಚಾಲಕರು “ನಮ್ಮ ಆಟೋ, ಸೂಪರ್-ಸೇಫ್ಟಿ; ಸಕತ್-ಸೇವೆ, ನಮ್ಮ ಕರ್ತವ್ಯ” ಎಂಬ ಪ್ರತಿಜ್ಞೆ ಕೈಗೊಂಡರು. ತಮ್ಮ ಆಟೋಗಳಲ್ಲಿ ಪ್ರತಿಜ್ಞಾ ಪತ್ರವನ್ನು ಅಂಟಿಸುವುದರೊಂದಿಗೆ ಸಮುದಾಯದ ಪಾಲ್ಗೊಳ್ಳುವಿಕೆ, ಸುರಕ್ಷಿತ ಮತ್ತು ಸಂಚಾರಿ ನಿಯಮಗಳ ಪಾಲನೆ ಮಾಡುವ ಬೆಂಗಳೂರನ್ನು ರಚಿಸುವ ತಮ್ಮ ಬದ್ಧತೆಯನ್ನು ಪ್ರಕಟಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ, ನಗರದ ಸಂಚಾರಿ ವ್ಯವಸ್ಥೆಯಲ್ಲಿ ಅವಿಭಾಜ್ಯ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಚಾಲಕ ಸೇವೆಗೆ ಅಭಿನಂದನೆ ಸಲ್ಲಿಸಿದರು.
ರಾಜ್ಯಸಭೆಯ ಮಾಜಿ ಸದಸ್ಯ ಮತ್ತು ರಾಜ್ಯ ಎಸ್.ಐ.ಟಿ.ಕೆ ಉಪಾಧ್ಯಕ್ಷ ಪ್ರೊ. ರಾಜೀವ್ ಗೌಡ, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಮತ್ತಿತರರು ಉಪಸ್ಥಿತರಿದ್ದರು.