Site icon TUNGATARANGA

ವರ್ತಮಾನದಲ್ಲಿ ಮಾದರಿ ಎನ್ನುವ ವ್ಯಕ್ತಿಗಳು ಇಲ್ಲದಂತಾಗಿದ್ದು/ ಯೋಗ್ಯ ಗುರುವಿಲ್ಲದೆ ವಿದ್ಯಾರ್ಥಿಗಳಿಗೆ ಸರಿದಾರಿ ಇಲ್ಲದಂತಾಗಿದೆ:ಡಿ.ಮಂಜುನಾಥ್

ಶಿವಮೊಗ್ಗ: ವರ್ತಮಾನದಲ್ಲಿ ಮಾದರಿ ಎನ್ನುವ ವ್ಯಕ್ತಿಗಳು ಇಲ್ಲದಂತಾಗಿದ್ದು ಯೋಗ್ಯ ಗುರುವಿಲ್ಲದೆ ವಿದ್ಯಾರ್ಥಿಗಳಿಗೆ ಸರಿ ದಾರಿ ಇಲ್ಲದಂತಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ್ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸ್ವಾಮಿ ವಿವೇಕಾನಂದ ಬಡಾವಣೆಯ ಶ್ರೀ‌ ನಾಗಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ಏರ್ಪಡಿಸಿದ್ದ ದತ್ತಿ ಉಪನ್ಯಾಸ‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದು ದತ್ತಿಗೆ ಇಟ್ಟ ಹಣದಿಂದ ಬರುವ ಬಡ್ಡಿಯು ಕಾರ್ಯಕ್ರಮ ನಡೆಸಲು ಸಾಕಾಗುತ್ತಿಲ್ಲ. ಹಾಗಾಗಿ ಎರಡೂ ಮೂರು ದತ್ತಿ ಸೇರಿಸಿ ವಿಶೇಷ ಕಾರ್ಯಕ್ರಮ ಮಾಡುತ್ತೇವೆ. ಪ್ರಸ್ತುತ 150 ಕ್ಕೂ ಹೆಚ್ಚು ದತ್ತಿಗಳು ಶಿವಮೊಗ್ಗ ಜಿಲ್ಲಾ ಕಸಾಪದಲ್ಲಿ ಸ್ಥಾಪಿತವಾಗಿದೆ ಎಂದು ಹೇಳಿದರು.

ಸಂದೇಶ ಉಪಾಧ್ಯ ಅವರು ತಮ್ಮ ತಂದೆ ಶಂಕರನಾರಾಯಣ ಉಪಾಧ್ಯ ಅವರ ಸ್ಮರಣೆಗಾಗಿ ನೀಡಿರುವ ದತ್ತಿಯ ಆಶಯದಂತೆ ಸಮಾಜ ಸೇವೆಯ ಸಾರ್ಥಕತೆ ವಿಚಾರವಾಗಿ ನ್ಯಾಯವಾದಿ ಪರಿಮಳ.ಆರ್. ಹಸೂಡಿ ಮಾತನಾಡಿ, ಇಂದು ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ನ್ಯಾಯ, ಆರೋಗ್ಯ ಸೌಲಭ್ಯಗಳು ಉಚಿತವಾಗಿ ದೊರೆಯುತ್ತಿದೆ. ಬೇರೆ ಬೇರೆ ಸಂಸ್ಥೆಗಳು ಫೌಂಡೇಷನ್ ಗಳ ಮೂಲಕ ಉಚಿತ ಸೇವೆ ನೀಡುವ ಮೂಲಕ ಸಮಾಜ ಸೇವೆಯ ಸಾರ್ಥಕತೆಯ ಪಡೆಯುವಲ್ಲಿ ಸಫಲರಾಗಿದ್ದಾರೆ ಎಂದು ಹೇಳಿದರು.

ಎಚ್ಚಪ್ಪರ ಎಚ್ಚಜ್ಜ ಮತ್ತು ಎಚ್ಚಪ್ಪರ ಹನುಮಮ್ಮ ದತ್ತಿನಿಧಿ ಆಶಯದಂತೆ ವಚನ ಸಾಹಿತ್ಯಕ್ಕೆ ಅಕ್ಕಮಹಾದೇವಿ ಕೊಡುಗೆ ಕುರಿತು ಸಾಹಿತಿಗಳಾದ ಡಾ.ಬಿ.ಎನ್.ತಂಬೂಳಿ ಮಾತನಾಡಿ, ಅಕ್ಕಮಹಾದೇವಿ ಕನ್ನಡದ ಮೊದಲ ವಚನಗಾರ್ತಿಯಾಗಿದ್ದು ಮೃದು ಮಧುರವಾದ ವಚನಗಳ ಮೂಲಕ ನೈತಿಕ‌ ಮತ್ತು ಆಧ್ಯಾತ್ಮಿಕ ಜೀವನ ನಡೆಸಿದರು. ಆಸೆಯ ಕುರಿತಾಗಿ ಹೇಳುತ್ತಾ ಆಸೆ ಎಂಬುದು ಜೇಡರ ಬಲೆ ಇದ್ದಂತೆ ನಮ್ಮನ್ನು ಸುತ್ತಿ ಸಾಯಿಸುತ್ತದೆ ಎಂದಿದ್ದಾರೆ. ಒಟ್ಟಿನಲ್ಲಿ ಕನ್ನಡ ಸಾಹಿತ್ಯಕ್ಕೆ ಅಕ್ಕಮಹಾದೇವಿ ಕೊಡುಗೆ ಬಹಳ ದೊಡ್ಡದು ಎಂದರು. 

ಕಾರ್ಯಕ್ರಮದಲ್ಲಿ ನಾಗಸುಬ್ರಹ್ಮಣ್ಯ ಸೇವಾ ಸಮಿತಿ ಅಧ್ಯಕ್ಷರಾದ ರಾಮಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಕಸಾಪ ಅಧ್ಯಕ್ಷರಾದ ಮಹಾದೇವಿ, ಜಿಲ್ಲಾ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಪ್ರಧಾನ ಕಾರ್ಯದರ್ಶಿ ಶಿವಪ್ಪಗೌಡ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಕೆ.ಜಿ.ವೆಂಕಟೇಶ್, ವಿಜಯಲಕ್ಷ್ಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Exit mobile version