Site icon TUNGATARANGA

ಬಲು ಅಪರೂಪದ, ನಾಡಿನ ಸೌಹಾರ್ಧ ಸಂಕೇತದ ಜೋಡಿ/ ವಕೀಲ ಶ್ರೀಪಾಲ್ ರ ಮನದಾಳದ ಮಾತು

ಈ ಜೋಡಿ ನಾಡಿನ ಸೌರ್ಹಾದದ ಸಂಕೇತ, ಸಿರಾಜಿನ್ ಬಾಷ್ ಮತ್ತು ಕೆ.ಎನ್ ಬಾಲರಾಜ್, ಇವರಿಬ್ಬರದು 50 ವರ್ಷಗಳ ಗೆಳೆತನ, ಇವರು ಎರಡೂ ದೇಹ ಒಂದೇ ಜೀವ. ಇವರಿಬ್ಬರ ಜೋಡಿ ವಕೀಲಿವೃತ್ತಿಗೆ 40 ವರ್ಷವಾಗಿದೆ, ವಿದ್ಯಾರ್ಥಿ ದೆಸೆಯಿಂದಲೆ ಗೆಳೆಯರಾದ ಇವರಿಬ್ಬರು ಬೆಳಿಗ್ಗೆ ಎದ್ದ ತಕ್ಷಣ ಒಟ್ಟಾಗಿ ವಾಕ್ ಮಾಡುತ್ತಾರೆ, ನಂತರ ಮನೆಗೆ ಬಂದಾಗ ಕಚೇರಿಗೆ ಹೊರಡುವ ಮುಂಚೆ ಮತ್ತೆ ಪೋನ್ ನಲ್ಲಿ ಮಾತ‌ನಾಡಿಕೊಳ್ಳುತ್ತಾರೆ,

ನಂತರ ಮತ್ತೆ ಕಚೇರಿಯಲ್ಲಿ ಒಟ್ಟಾಗಿ ಇರುತ್ತಾರೆ, ಕೋರ್ಟ್ ನಲ್ಲಿ ಒಟ್ಟಾಗಿ ಇರುತ್ತಾರೆ, ಕಾಪಿ ತಿಂಡಿ ಊಟಕ್ಕೆ ಒಟ್ಟಿಗೆ ಹೋಗುವ ಇವರು ಸದಾ ತಮಾಷೆ ಮಾಡುತ್ತ ಮಾತನಾಡಿಕೊಳ್ಳುತ್ತಿರುತ್ತಾರೆ, ಒಬ್ಬರು ಸಿರಿ ಎಂದರೆ ಇನ್ನೊಬ್ಬರು ಬಾಲು ಎನ್ನುವ ಇವರು ಒಬ್ಬರನೊಬ್ಬರು ಕರೆದು ಕೊಳ್ಳುವ ದಾಟಿಯೇ ನೋಡಲು ವಿಶೇಷವಾಗಿರುತ್ತೆ.
ಇಬ್ಬರು ಮೊದಲು ಶಿವಮೊಗ್ಗದಲ್ಲಿ ವಕೀಲರಾಗಿದ್ದವರು ಸಿರಾಜಿನ್ ಬಾಷರವರು ಮೂಲತಹ ತೀರ್ಥಹಳ್ಳಿಯವರು ಕಮ್ಯುನಿಸ್ಟ್ ಸಿದ್ದಾಂತ ಹೊಂದಿದವರು, ಬೀಡಿ ಕಾರ್ಮಿಕರ ಹೋರಾಟವನ್ನು ಬೆಂಬಲಿಸಿಕೊಂಡು ಬಂದವರು, ಬಾಲರಾಜ್ ರವರು ಎನ್ ಆರ್ ಪುರ ತಾಲ್ಲೂಕಿನವರು ಇವರು ಎನ್ ಡಿ ಸುಂದರೇಶ್ ರವರ ಕಾಲದಲ್ಲಿ ರೈತ ಸಂಘದಲ್ಲಿ ಗುರುತಿಸಿಕೊಂಡವರು,
ಇಬ್ಬರು ಸೇರಿ ಪತ್ರಿಕೋದ್ಯಮವನ್ನು ಸಹ ನಡೆಸಿದವರು.


ನಾನು 1999 ರಲ್ಲಿ LLB ಮುಗಿಸಿ ಬಂದಾಗ ಗೆಳೆಯ ಈಸೂರು ಲೋಕೇಶ್ ರವರು ನನ್ನನ್ನು ಬಾಲರಾಜ್ ಸಾರ್ ಆಪೀಸ್ ಗೆ ಸೇರಿಸಿದ್ದರು ಆಗ ನನಗೆ ಈ ಹಿಂದೂ ಮುಸ್ಲಿಂ ಜೋಡಿ ನೋಡಿ ಇವರಿಬ್ಬರು ಅಣ್ಣಾ ತಮ್ಮಂದಿರು ಅಂತ ಮಾಡಿದ್ದೆ, ಸಿರಿ ಸಿರಿ ಅನ್ನುವುದು ನೋಡಿ ಶ್ರೀದರ್ ಅಂತ ಹೆಸರಿರಬೇಕು ಶಾರ್ಟಗಿ ಸಿರಿ ಅನ್ನು ತ್ತಾರೆ ಅಂತ ತಿಳಿದಿದ್ದೆ ಕೊನೆಗೆ ಗೊತ್ರಾಯಿತು ಸಿರಿ ಅಂದರೆ ಶ್ರೀದರ್ ಅಲ್ಲಾ ಸಿರಾಜಿನ್ ಬಾಷ ಅಂತ.

  ನಮ್ಮೆಲ್ಲಾ ಸಾಮಾಜಿಕ ಚಳುವಳಿಗೆ  ಮಾರ್ಗದರ್ಶನ ನೀಡಿ  ಆತ್ಮಸ್ಥೈರ್ಯ ತುಂಬಿದ  ಈ ಜೋಡಿ  2007-08 ರಲ್ಲಿ   ಶಿವಮೊಗ್ಗ ದಿಂದ ತಮ್ಮ ವೃತ್ತಿಯನ್ನು  ಬೆಂಗಳೂರಿಗೆ ವರ್ಗಾಯಿಸಿಕೊಂಡರು,  ಅಲ್ಲಿ  ಇಬ್ಬರದ್ದು ಜಂಟಿ ಆಪೀಸ್.   ಈ ಜೋಡಿ  ನಂತರ ಭ್ರಷ್ಟಾಚಾರದ ವಿರುದ್ದ  ಲೋಕಾಯುಕ್ತ ನ್ಯಾಯಾಲಯದಲ್ಲಿ  ಸಲ್ಲಿಸಿದ ದೂರಿಗೆ  ಮಾಜಿ ಮುಖ್ಯ ಮಂತ್ರಿಯೇ ಜೈಲಿಗೆ ಹೋಗಬೇಕಾಯಿತು,   ಪ್ರಕರಣದಲ್ಲಿನ  ಪೂರ್ವಾನುಮತಿಯ ವಿಷಯದಲ್ಲಿ   ಪ್ರಕರಣಗಳು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ   ತಡೆ ಸಿಕ್ಕು  ನಂತರ ಪ್ರಕರಣಗಳು    ವಜಾಗೊಂಡಾಗ   ಈ ಜೋಡಿ ಸುಪ್ರೀಂ ಕೋರ್ಟ್ ವರೆಗೂ  ಪ್ರಕರಣವನ್ನು  ನಡೆಸಿದರು   ಮೊದ ಮೊದಲು  ಕೆಲವರು ಬೆಂಬಲ ಸೂಚಿಸಿದಂತೆ ಕಂಡವರೆಲ್ಲ  ಆರ್ಥಿಕ ಸಹಾಯವನ್ನು ಯಾರು ಸಹ ಮಾಡಲಿಲ್ಲ, ಕೊನೆಗೆ  ಸಿರಾಜಿನ್ ಬಾಷರವರು ನಿವೇಶನ ಮಾರಾಟ ಮಾಡಿ  ಕೊನೆ ಹಂತದವರೆಗೂ   ಹೋರಾಟ ನಡೆಸಿದರು.



   ಪ್ರಸ್ತುತ ನಡೆಯುತ್ತಿರುವ ದರ್ಮದಂಗಲ್ಲ್ ಗಳಿಗೆ ಅಪವಾದ ವೆಂಬಂತೆ  ಈ ಜೋಡಿ ಸೌರ್ಹಾದದ ಸಂಕೇತವಾಗಿದ್ದಾರೆ.   ಇತ್ತೀಚಿಗೆ  ಅವಿದ್ಯಾವಂತರಿಗಿಂತ ವಿದ್ಯಾವಂತರೆ ಹೆಚ್ಚು  ಧರ್ಮ ದ್ವೇಷ ಹೊಂದಿರುವುದು  ನೋವಿನ ಸಂಗತಿ.   ನಮ್ಮ ನಡುವಿನ ಎಲ್ಲರೂ  ಸಿರಾಜಿನ್ ಭಾಷಾ  ಮತ್ತು ಬಾಲರಾಜ್ ರವರ  ರೀತಿ  ಗೆಳೆಯರಾದಲ್ಲಿ   ಜಾತ್ಯಾತೀತ ಸಮಾಜಕ್ಕೆ  ನಿಜವಾದ ಅರ್ಥಬರುತ್ತೆ,   ಜೊತೆಗೆ ಸಂವಿಧಾನದ ಆಶಯಗಳು ಸಹ ಈಡೇರುತ್ತವೆ.

ಕೆ.ಪಿ‌.ಶ್ರೀಪಾಲ್,
ವಕೀಲರು, 
ಪ್ರಗತಿಪರ ಹೋರಾಟಗಾರರು, ಶಿವಮೊಗ್ಗ

  
Exit mobile version