Site icon TUNGATARANGA

ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಗೋಪಿನಾಥ್ ಹಾಗೂ ಕಂಪ್ಯೂಟರ್ ಅಪರೇಟರ್ ಉಷಾ ವಿರುದ್ದ ಏನಿದು ಭಾರೀ ಭ್ರಷ್ಟಚಾರದ ಅರೋಪ/ಕೂಡಲೇ ಕೆಲಸದಿಂದ ವಜಾಮಾಡಲು ಒತ್ತಾಯಿಸಿದ್ದೇಕೆ ?

ಶಿವಮೊಗ್ಗ,ಫೆ.08: ಭಾರೀ ಭ್ರಷ್ಟಚಾರ ನಡೆಸಿರುವ ಸಮಾಜ ಕಲ್ಯಾಣ ಇಲಾಖೆ ಸಮಾಜ ನಿರ್ದೇಶಕ ಗೋಪಿನಾಥ್ ಹಾಗೂ ಕಂಪ್ಯೂಟರ್ ಅಪÀರೇಟರ್ ಉಷಾ ಅವರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಆರ್.ಶಿವಣ್ಣ ಒತ್ತಾಯಿಸಿದರು.

ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೋಪಿನಾಥ್ ಎಂಬುವವರು ಭ್ರಷ್ಟಚಾರದಲ್ಲಿ ತೊಡಗಿದ್ದು, ಕಾನೂನು ಬಾಹಿರವಾಗಿ ಅವರ ಸಹೋದರಿ ಸೆಲ್ವರಾಜ್ ಶರ್ಮಿಳಾ ಅವರ ಹೆಸರಿನಲ್ಲಿ ಪ್ರಕೃತಿ ಟ್ರೇರ‍್ಸ್ ಎಂಬ ಸಂಸ್ಥೆ ಸ್ಥಾಪಿಸಿಕೊಂಡು ಅದರ ಮೂಲಕ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಿಗೆ ಬೇಕಾದ ಸಾಮಾಗ್ರಿಗಳನ್ನು ಹಾಗೂ ಇನ್ನಿತರ ವಸ್ತುಗಳನ್ನು ಪೂರೈಸಿದ್ದಾರೆ ಎಂದು ಆರೋಪಿಸಿದರು. 

ಹಾಗೂ ಇದೇ ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ಉಷಾ ಅವರು ಕುಂಸಿಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಅಡಿಗೆಯ ಕೆಲಸ ನಿರ್ವಹಿಸಬೇಕಾಗಿತ್ತು. ಆದರೆ ಇವರನ್ನು ಅನಧಿಕೃತವಾಗಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಹೇಗೆ ನೇಮಕ ಮಾಡಿಕೊಂಡರು ಎಂದು ಪ್ರಶ್ನೆ ಮಾಡಿದರು.

ಅಲ್ಲದೇ ಉಷಾ ಅವರ ತಾಯಿ ಗಿರಿಜಮ್ಮ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೋರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಅಡಿಗೆ ಕೆಲಸಕ್ಕೆ ಹೊರಗುತ್ತಿಗೆ ನೌಕರರಾಗಿ ನೇಮಕವಾಗಿದ್ದಾರೆ. ಈ ಗಿರಿಜಮ್ಮ ಹೆಸರಿನಲ್ಲಿ ಎಸ್.ಜೆ. ಎಂಟರ್‌ಪ್ರೆöÊಸಸ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದು, ಈ ಸಂಸ್ಥೆಗೆ ಉಷಾ ಅವರು ತನ್ನ ತಾಯಿಯ ಸಂಸ್ಥೆಗೆ ಅನುಕೂಲವಾಗುವಂತೆ ವಿದ್ಯಾರ್ಥಿನಿಲಯಗಳಿಗೆ ಆಹಾರ ಸಾಮಾಗ್ರಿ ಸೇರಿದಂತೆ ಇತರ ವಸ್ತುಗಳ ಸರಬರಾಜು ಮಾಡುವ ಟೆಂಡರ್‌ದಾರರ ಮಾಹಿತಿ ಪಡೆದು ತನ್ನ ತಾಯಿಯ ಸಂಸ್ಥೆಗೆ ಅನುಕೂಲ ಮಾಡುತ್ತ ಬಂದಿದ್ದಾರೆ ಎಂದು ಆರೋಪಿಸಿದರು.

ಎಸ್.ಜೆ. ಎಂಟರ್‌ಪ್ರೆöÊಸಸ್ ಮೂಲಕ ಸಮಾಜ ಕಲ್ಯಾಣ ಇಲಾಖೆಗೆ ವ್ಯಾಪ್ತಿಗೆ ಬರುವ ರಾಗಿಗುಡ್ಡದ ಅಂಬೇಡ್ಕರ್ ವಸತಿ ಶಾಲೆ ತ್ಯಾವರೆಕೊಪ್ಪದ ನಿರಾಶ್ರಿತರ ಪರಿಹಾರ ಕೇಂದ್ರ ಹೊಸನಗರ, ಸೊರಬ, ತೀರ್ಥಹಳ್ಳಿ ಹಾಗೂ ಜಗಳೂರು ತಾಲ್ಲೂಕಿನ ವಿದ್ಯಾರ್ಥಿ ನಿಲಯಗಳಿಗೆ ಆಹಾರ ಸಾಮಾಗ್ರಿ ಮತ್ತು ಇತರೆ ವಸ್ತುಗಳ ಸರಬರಾಜನ ಟೆಂಡರ್‌ಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿದರು.

ಗೋಪಿನಾಥ್, ಉಷಾ ಈ ಇಬ್ಬರು ಸೇರಿದಕೊಂಡು ಸಾಮಾಗ್ರಿಗಳ ಪೂರೈಕೆಯ ಗುತ್ತಿಗೆಯನ್ನು ತಮ್ಮದೇ ಸಂಸ್ಥೆಗಳಿಗೆ ಪಡೆದಿದ್ದಾರೆ. ಮತ್ತು ಕಡಿಮೆ ಇರುವ ವಸ್ತುಗಳ ಬೆಲೆಯನ್ನು 5-6 ಪಟ್ಟು ಹೆಚ್ಚಿಗೆ ನೀಡಿದ್ದಾರೆ. ಉದಾಹರಣೆಗೆ 3*4 ಅಳತೆಯ ಡಾ.ಅಂಬೇಡ್ಕರ್, ಡಾ.ಬಾಬುಜಗಜೀವನ್‌ರಾಮ್ ಅವರ ಪೋಟೋಕ್ಕೆ 11,500 ಬಿಲ್ ಡ್ರಾ ಮಾಡಿದ್ದಾರೆ ಎಂದರು.

ಇದಲ್ಲದೆ ಶಿವಮೊಗ್ಗ ಹಾಗೂ ಭದ್ರಾವತಿ ಸಮಾಜ ಕಲ್ಯಾಣ ಇಲಾಖೆಯ ಕಚೇರಿಗಳಿಗೆ ಯಾವ ಸಾಮಾಗ್ರಿಗಳನ್ನು ಪೂರೈಸದೆ ಸುಮಾರು 70ಲಕ್ಷ ರೂ. ಮೌಲ್ಯದ ವಸ್ತುಗಳ ಬಿಲ್ ಪಡೆದಿದ್ದಾರೆ. ಇದು ಉಪವಿಭಾಗಾಧಿಕಾರಿಯ ಭೇಟಿ ಸಂದರ್ಭದಲ್ಲಿ ತಿಳಿದುಬಂದಿದೆ. ಟಿವಿ, ಟ್ರಂಕ್ ಸೇರಿದಂತೆ ಹಲವು ಸಾಮಾಗ್ರಿಗಳಿಗೆ 5-6 ಪಟ್ಟು ಹೆಚ್ಚಿಗೆ ಬಿಲ್ ಪಡೆದಿದ್ದಾರೆ. ಕೆಲವು ಕಡೆ ಸಾಮಾಗ್ರಿಗಳನ್ನು ಪೂರೈಸದೇ ಬಿಲ್ ಪಡೆದಿದ್ದಾರೆ ಎಂದು ದೂರಿದರು.

ಈ ಎಲ್ಲ ಅವ್ಯವಹಾರಗಳು ಬಿಜೆಪಿ ಸರ್ಕಾರ ಆಡಳಿತದಲ್ಲಿ ಇದ್ದಾಗಲೇ ಆಗಿತ್ತು. ಈಗ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಈಗಾಗಲೇ ನಾವು ಜಿಲ್ಲಾಧಿಕಾರಿಗಳಿಗೆ, ಸಮಾಜ ಕಲ್ಯಾಣದ ಉನ್ನತಾಧಿಕಾರಿಗಳಿಗೆ ಹಾಗೂ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಕೂಡ ತಿಳಿಸಿದ್ದೇನೆ. ಆದ್ದರಿಂದ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಈ ಇಬ್ಬರು ಭ್ರಷ್ಟರನ್ನು ಸೇವೆಯಿಂದ ವಜಾಗೊಳಿಸಬೇಕು. ಮತ್ತು ಟೆಂಡರ್ ಪಡೆದಿರುವ 3 ಸಂಸ್ಥೆಗಳನ್ನು ಶಾಶ್ವತವಾಗಿ ಕಪ್ಪು ಪಟ್ಟಿಗೆ ಸೇರಿಸಬೇಕು. ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹಾಲೇಶ್ ಬಾಬು, ಅಣ್ಣಪ್ಪ, ಸೂಲಯ್ಯ, ತಿಪ್ಪೇಸ್ವಾಮಿ, ಪಡುವಳ್ಳಿ ಹರ್ಷೇಂದ್ರಕುಮಾರ್, ವೆಂಕಟೇಶ್, ಬಿದರೆ ಗಣೇಶ್, ಅನಿಲ್, ರಾಜೇಂದ್ರ ಮುಂತಾದವರು ಇದ್ದರು.

Exit mobile version