ಶಿವಮೊಗ್ಗ: ದೇಶದಲ್ಲಿ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದು 18 ವರ್ಷಗಳಾದರೂ ಇನ್ನೂ ಸಾಗುವಳಿ ಮಾಡಿದ ರೈತರಿಗೆ ಹಕ್ಕುಪತ್ರ ನೀಡುತ್ತಿಲ್ಲ. ಕೂಡಲೇ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಸೊರಬ ತಾಲೂಕು ಬೊಮ್ಮನಹಳ್ಳಿ ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ 3 ಲಕ್ಷ ರೈತರ ಅರ್ಜಿಗಳನ್ನು ಕಾನೂನು ಬಾಹಿರವಾಗಿ ವಜಾ ಮಾಡಲಾಗಿತ್ತು. ವಜಾ ಮಾಡಿದ್ದು ಸಿಂಧುವಲ್ಲ ಎಂದು ಸಿದ್ಧರಾಮಯ್ಯ ಅವರು ಆದೇಶ ಹೊರಡಿಸಿದ್ದರು. ಮತ್ತೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಸುಪ್ರೀಂ ಕೋರ್ಟ್ ಆದೇಶದಂತೆ ಅರಣ್ಯ ಹಕ್ಕು ಕಾಯ್ದೆ ಉಲ್ಲಂಘನೆ ಎಂದು ಮತ್ತೆ ಕೆಲವು ಅರ್ಜಿಗಳನ್ನು ವಜಾಗೊಳಿಸಲಾಯಿತು ಎಂದರು.
ರಾಜ್ಯ ಸರ್ಕಾರ, ತಾಪಂ, ಜಿಪಂ ಚುನಾಯಿತ ಸದಸ್ಯರು, ಉಪ ವಿಭಾಗ ಮಟ್ಟದ ಸಮಿತಿ ಜಿಲ್ಲಾಧಿಕಾರಿ ಮಟ್ಟದ ಸಮಿತಿ ಸದಸ್ಯರು ಭಾಗಿಯಾಗದೇ ಅರಣ್ಯ ಹಕ್ಕು ಅರ್ಜಿಗಳನ್ನು ವಜಾ ಮಾಡುವುದು ಸಿಂಧುವಲ್ಲ. ಆದ್ದರಿಂದ ರಾಜ್ಯ ಸರ್ಕಾರ ಈ ಸಮಿತಿಗಳ ರಚನೆಗೆ ಒಂದು ವರ್ಷದ ಅವಧಿ ಕೇಳಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲಿಸಿತ್ತು. ಈ ನಡುವೆ ರೈತರು ಹಕ್ಕುಪತ್ರಕ್ಕೆ ಸಲ್ಲಿಸಿದ್ದ ಅರ್ಜಿಗಳನ್ನು ಸಾಗರ ಉಪ ವಿಭಾಗಾಧಿಕಾರಿಗಳು ಕಾನೂನು ಬಾಹಿರವಾಗಿ ವಜಾ ಮಾಡಿದ್ದಾರೆ. ಇದನ್ನು ಪರಿಶೀಲಿಸಿ ರೈತರ ಅರ್ಜಿ ಮಾನ್ಯ ಮಾಡಿ ಕೂಡಲೇ ಹಕ್ಕು ಪತ್ರ ನೀಡಬೇಕೆಂದು ಮಲೆನಾಡು ರೈತ ಹೋರಾಟ ಸಮಿತಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ತೀ.ನಾ. ಶ್ರೀನಿವಾಸ್, ಸಂತೋಷ್, ಕೃಷ್ಣಪ್ಪ ದ್ಯಾವಪ್ಪ, ಮಂಜಪ್ಪ, ದತ್ತಪ್ಪ ಚಿನ್ನಪ್ಪ, ನಾರಾಯಣ್, ನಾಗರಾಜ್ ಮತ್ತಿತರರು ಇದ್ದರು.