Site icon TUNGATARANGA

ನಿಷ್ಪಕ್ಷಪಾತ ಮತ್ತು ಪಾರದರ್ಶಕತೆಯಿಂದ ಯಶಸ್ವಿಯಾಗಿ ಚುನಾವಣಾ ಕರ್ತವ್ಯ ನಿರ್ವಹಿಸೋಣ : ಜಿಲ್ಲಾಧಿಕಾರಿ ಗುರುದತ್ತ ಹೆಗಡೆ


ಶಿವಮೊಗ್ಗ,ಫೆಬ್ರವರಿ 6,
        ಮುಂಬರುವ ಲೋಕಸಭಾ ಚುನಾವಣೆಯನ್ನು ಎಲ್ಲರೂ ಒಂದು ತಂಡವಾಗಿ ನಿಷ್ಪಕ್ಷಪಾತ, ಪಾರದರ್ಶಕತೆ ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಯಶಸ್ವಿಗೊಳಿಸೋಣ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಚುನಾವಣಾಧಿಕಾರಿಗಳಿಗೆ ತಿಳಿಸಿದರು.
   ಇಂದು ಅಂಬೇಡ್ಕರ್ ಭವನದಲ್ಲಿ ಎಫ್‍ಎಸ್‍ಟಿ, ಎಸ್‍ಎಸ್‍ಟಿ, ವಿವಿಟಿ, ಇಇಓ, ವಿಎಸ್‍ಟಿ ಚುನಾವಣಾ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

     ಚುನಾವಣೆಗಳನ್ನು ನಡೆಸುವ ಅವಕಾಶ ಎಲ್ಲರಿಗೂ ಲಭಿಸುವುದಿಲ್ಲ. ಸರ್ಕಾರಿ ಅಧಿಕಾರಿ/ನೌಕರರಾದ ನಮಗೆ ಈ ಸದವಕಾಶ ಲಭಿಸಿದ್ದು, ಇದನ್ನು ದೇವರ ಕೆಲಸವೆಂದು ಎಲ್ಲರೂ ಅತ್ಯಂತ ನಿಷ್ಪಕ್ಷವಾಗಿ ಮತ್ತು ಪಾರದರ್ಶಕವಾಗಿ ನಿರ್ವಹಿಸೋಣವೆಂದು ಕರೆ ನೀಡಿದರು.
    ಎಫ್‍ಎಸ್‍ಟಿ, ಎಸ್‍ಎಸ್‍ಟಿ, ವಿವಿಟಿ, ಇಇಓ, ವಿಎಸ್‍ಟಿ ಯಾವುದೇ ತಂಡಗಳು ತಮ್ಮ ಕರ್ತವ್ಯಕ್ಕೆ ಸರಿಯಾದ ಸಮಯಕ್ಕೆ ಹಾಜರಾಗಬೇಕು. ವಾಹನಗಳು ಸೇರಿದಂತೆ ಕರ್ತವ್ಯದಲ್ಲಿ ಆದಷ್ಟು ಹೆಚ್ಚಾಗಿ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲಾಗುವುದು. ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು.


    ತಾವು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಜಿ.ಪಂ ಸಿಇಓ ಯವರೊಂದಿಗೆ ಖುದ್ದಾಗಿ ಎಲ್ಲ ಚೆಕ್‍ಪೋಸ್ಟ್‍ಗಳಿಗೆ ಭೇಟಿ ನೀಡುವೆವು. ಚುನಾವಣಾ ಸಮಯದಲ್ಲಿ ಚೆಕ್‍ಪೋಸ್ಟ್‍ಗಳಲ್ಲಿ ಸ್ವಲ್ಪ ಟ್ರಾಫಿಕ್ ಸಮಸ್ಯೆಯಾಗುತ್ತದೆ. ಅದನ್ನು ನಿರ್ವಹಿಸಬೇಕು. ಚೆಕ್‍ಪೋಸ್ಟ್‍ಗಳಲ್ಲಿ ಬಸ್‍ಗಳನ್ನು ಸಹ ತಪಾಸಣೆ ಮಾಡಬೇಕು ಎಂದರು.


      ತಹಶೀಲ್ದಾರರು ತಮ್ಮ ತಮ್ಮ ಚುನಾವಣಾ ಅಧಿಕಾರಿ/ಸಿಬ್ಬಂದಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು. ತಂಡವಾಗಿ ಉತ್ತಮ ಕಾರ್ಯನಿರ್ವಹಿಸಲು ಪ್ರೇರೇಪಿಸಬೇಕು. ಕ್ಷೇತ್ರದಲ್ಲಿ ಅಥವಾ ಯಾವುದೇ ರೀತಿಯಲ್ಲಿ ಅವರಿಗೆ ಸಮಸ್ಯೆಗಳು ಎದುರಾದಲ್ಲಿ ಶೀಘ್ರವಾಗಿ ಮತ್ತು ಸಮರ್ಪಕವಾಗಿ ನಿರ್ವಹಿಸಬೇಕು ಎದು ಸೂಚಿಸಿದ ಅವರು  ಸಾಕಷ್ಟು ಸೇವಾನುಭವವುಳ್ಳವರನ್ನೇ ಎಂಸಿಸಿ ಇತರೆ ತಂಡಗಳಿಗೆ ನೇಮಕ ಮಾಡಲಾಗಿದೆ ಎಂದರು.


         ಯಾವುದೇ ಕಾರಣಕ್ಕೂ ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸುವುದನ್ನು ಸಹಿಸುವುದಿಲ್ಲ. ತಮ್ಮ ಜವಾಬ್ದಾರಿಯಿಂದ ಹಿಂಜರಿಯದೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಕೆಲಸ ನಿರ್ವಹಣೆ ವೇಳೆ ಮೂಲಭೂತ ಸೌಕರ್ಯ, ಭದ್ರತೆ ಸೇರಿದಂತೆ ಯಾವುದೇ ರೀತಿಯ ಸಮಸ್ಯೆಗಳಿದ್ದರೆ ಸಂಬಂಧಿಸಿದ ತಹಶೀಲ್ದಾರ್ ಅಥವಾ ತಮ್ಮ ಗಮನಕ್ಕೆ ತಂದಲ್ಲಿ ಸರಿಪಡಿಸುವುದಾಗಿ ತಿಳಿಸಿದರು.


    ತಮ್ಮ ಚುನಾವಣಾ ಪಾತ್ರದ ಕರ್ತವ್ಯಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಗೊಂದಲಗಳು, ಸ್ಪಷ್ಟೀಕರಣಗಳಿದ್ದಲ್ಲಿ ತರಬೇತಿ ಕಾರ್ಯಕ್ರಮದಲ್ಲಿ ಮಾಸ್ಟರ್ ಟ್ರೈನರ್ ಬಳಿ ಕೇಳಿ ಸ್ಪಷ್ಟಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
    ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಮಾಸ್ಟರ್ ಟ್ರೈನರ್ ಗಳಾದ ಶಿವಕುಮಾರ್, ರವಿಚಂದ್ರ ನಾಯ್ಕ್, ಹಾಜರಿದ್ದರು.

Exit mobile version