Site icon TUNGATARANGA

ಜೆಜೆಎಂ ಕಾಮಗಾರಿಗೆ ಅರಣ್ಯ ಇಲಾಖೆ ತಡೆ/ಮುಂದಿನ ದಿನಗಳಲ್ಲಿ ಹೊಸನಗರ ತಾಲ್ಲೂಕಿನ ನೀರಿಗೆ ಬರ ಗ್ಯಾರಂಟಿ

ಹೊಸನಗರ: ದೇಶದ ಪ್ರತಿ ಮನೆಗೂ ನಲ್ಲಿ ನೀರು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಜಾರಿಗೊಳಿಸಿರುವ ಯೋಜನೆಯಾಗಿರುವ ಜಲಜೀವನ್ ಮಿಷನ್‌ ಕಾಮಗಾರಿ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ. ಇಲಾಖೆಗಳ ನಡುವಿನ ಹೊಂದಾಣಿಕೆ, ಅರಣ್ಯ ಇಲಾಖೆಯ ಬಿಗಿ ಕಾನೂನು ಮಹತ್ವಾಕಾಂಕ್ಷಿ ಯೋಜನೆಯ ಜಾರಿಗೆ ಅಡ್ಡಿಯಾಗಿ ಪರಿಣಮಿಸಿದೆ.

ಹೊಸನಗರ ತಾಲೂಕಿನ ಸುಮಾರು 65ಕ್ಕೂ ಹೆಚ್ಚು ಕಾಮಗಾರಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ. ವಿಚಿತ್ರವೆಂದರೆ ಲಕ್ಷಾಂತರ ರೂ. ವೆಚ್ಚದ ಓಎಚ್‌ಟಿ (ನೀರಿನ ಟ್ಯಾಂಕ್) ನಿರ್ಮಾಣ ಕಾರ್ಯ ಆರಂಭಗೊಂಡ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಕಾಮಗಾರಿಯನ್ನು ತಡೆ ಹಿಡಿದಿದ್ದಾರೆ. ಅರಣ್ಯ ಪ್ರದೇಶದಲ್ಲಿ ಕೊಳವೆಬಾವಿ, ಪೈಪ್‌ಲೈನ್ ನಿರ್ಮಾಣ ಕಾರ್ಯಕ್ಕೂ ಅರಣ್ಯ ಸಂರಕ್ಷಣಾ ಕಾಯಿದೆಯಿಂದ ತೊಡಕುಂಟಾಗಿದೆ.

ಮಾರುತಿಪುರದಲ್ಲಿ 5, ಹರಿದ್ರಾವತಿಯಲ್ಲಿ 1, ಮುಂಬಾರಿನಲ್ಲಿ 2, ಅಮೃತದಲ್ಲಿ 2, ಕೋಡೂರಿನಲ್ಲಿ 2, ಬೆಳ್ಳೂರಿನಲ್ಲಿ 16, ಅರಮನೆಕೊಪ್ಪದಲ್ಲಿ 7, ಅರಸಾಳು 10, ಹೆದ್ದಾರಿಪುರದಲ್ಲಿ 8 ಹಾಗೂ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 7 ಕಾಮಗಾರಿಗಳು ಅರಣ್ಯ ಇಲಾಖೆಯ ಆಕ್ಷೇಪಣೆಯಿಂದಾಗಿ ಸ್ಥಗಿತಗೊಂಡಿವೆ. 

ನೀರಿನ ಹರಿವು ಸರಾಗವಾಗಿ ಆಗುವಂತಹ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಟ್ಯಾಂಕ್, ಕೊಳವೆಬಾವಿ ಹಾಗೂ ಪೈಪ್‌ಲೈನ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು. ಆದರೆ ಫಾರೆಸ್ಟ್ ಕ್ಲಿಯರೆನ್ಸ್ ಪಡೆಯದ ಕಾಮಗಾರಿ ಕೈಗೊಳ್ಳಲು ಈಗ ಅನುಮತಿ ನಿರಾಕರಿಸಲಾಗಿದೆ.

ಗರ್ತಿಕೆರೆ ಸಮೀಪದ ಶಿವಪುರದಲ್ಲಿ ಟ್ಯಾಂಕ್ ನಿರ್ಮಾಣದ ತಳಪಾಯದ ಗುಂಡಿಯನ್ನೇ ಮುಚ್ಚಲಾಗಿದೆ. ಗುಳ್ಳೆಕೊಪ್ಪ, ಅಡ್ಡಾಳಕೊಪ್ಪ, ಕಂಕನಬೈಲು ಹಳ್ಳಿಗಳಲ್ಲಿ ಕಾಮಗಾರಿಯ ಪ್ರಗತಿ ಹಂತದಲ್ಲಿರುವಾಗ ನಿಲ್ಲಿಸಲಾಗಿದೆ.

ಜೆಜೆಎಂ ಅಡಿಯಲ್ಲಿ ತಾಲೂಕಿನಲ್ಲಿ 140 ಕೋಟಿ ರೂ. ಅಂದಾಜು ಮೊತ್ತದ ಒಟ್ಟು 320 ಕಾಮಗಾರಿಗಳು ಚಾಲನೆಯಲ್ಲಿವೆ. ಹಲವು ಕಡೆಗಳಲ್ಲಿ ಇಷ್ಟರಲ್ಲಿಯೇ ಕಾಮಗಾರಿಗೆ ಚಾಲನೆ ದೊರೆಯಲಿದೆ.‌ ಇಲ್ಲಿಯೂ ಅರಣ್ಯ ಪ್ರದೇಶದಲ್ಲಿ ಪೈಪ್‌ಲೈನ್ ಹಾಗೂ ಟ್ಯಾಂಕ್ ನಿರ್ಮಾಣ ಕಾರ್ಯ ನಡೆಯುವಲ್ಲಿ ಅರಣ್ಯ ಇಲಾಖೆಯ ಅನುಮತಿ ಕಡ್ಡಾಯವಾಗಲಿದೆ. 

ಫಾರೆಸ್ಟ್ ಕ್ಲಿಯರೆನ್ಸ್ ಪಡೆದಿಲ್ಲ:

ಅರಣ್ಯ ಸಂರಕ್ಷಣಾ ಕಾಯಿದೆಯಡಿ ಅರಣ್ಯ ಭೂಮಿಯಲ್ಲಿ ಕಾಮಗಾರಿ ಅನುಷ್ಠಾನಗೊಳಿಸುವ ಮುನ್ನ ಫಾರೆಸ್ಟ್ ಕ್ಲಿಯರೆನ್ಸ್  ಪಡೆಯುವುದು ಅನಿವಾರ್ಯವಾಗಿದೆ. ಆದರೆ ಕಾಮಗಾರಿ ಕೈಗೊಳ್ಳುವ ಮುನ್ನ ಅರಣ್ಯ ಇಲಾಖೆಯ ಪೂರ್ವಾನುಮತಿ ಪಡೆಯಲು ಮುಂದಾಗದಿರುವುದು ಈಗ ಸಮಸ್ಯೆಯಾಗಿದೆ. ಕಾಮಗಾರಿ ಅನುಷ್ಠಾನಕ್ಕೆ ಪೂರ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆದ ವಿವಿಧ ಇಲಾಖೆಗಳ ಸಭೆಯಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಹಾ ಭಾಗಿಯಾಗಿದ್ದರು. ಒಂದು ಹಂತದಲ್ಲಿ ಅರಣ್ಯ ಇಲಾಖೆ ಸಹಾ ಕುಡಿವ ನೀರಿನ ಕಾಮಗಾರಿ ಎನ್ನುವ ಕಾರಣಕ್ಕೆ ಆಕ್ಷೇಪಿಸದೇ ಮೃದು ಧೋರಣೆ ಅನುಸರಿಸಿತ್ತು. ಆದರೆ ಅರಣ್ಯ ಪ್ರದೇಶದಲ್ಲಿ ಕಾಮಗಾರಿ ನಿರ್ವಹಿಸುವುದಕ್ಕೆ ಆಕ್ಷೇಪಿಸಿ ಸಾರ್ವಜನಿಕರಿಂದ ಒಂದೆರಡು ದೂರು ಬಂದ ಬಳಿಕ ಅರಣ್ಯಾಧಿಕಾರಿಗಳು ಬಿಗಿ ನಿಲುವು ತಳೆದಿದ್ದಾರೆ.

ನೀರಿಗೆ ತತ್ವಾರ:

ಒಂದೆಡೆ ಮುಂಗಾರು ವೈಫಲ್ಯದಿಂದ ಅಂತರ್ಜಲ ಕುಸಿತವಾಗಿದ್ದು, ಕುಡಿವ ನೀರಿನ ಸಮಸ್ಯೆ ದಿನೇ ದಿನೇ ಬಿಗಡಾಯಿಸುತ್ತಿದೆ. ಈಗಾಗಲೇ ಹಲವು ಕಡೆಗಳಲ್ಲಿ ನೀರಿನ ತೀವ್ರ ಕೊರತೆ ಕಂಡುಬಂದಿದೆ. ಜಲಜೀವನ್ ಮಿಷನ್‌ ಯೋಜನೆಯಡಿಯಲ್ಲಿ ನೂತನ ಕೊಳವೆಬಾವಿ, ಟ್ಯಾಂಕ್, ಪೈಪ್‌ಲೈನ್‌ ಆದಲ್ಲಿ ನೀರಿನ ಸಮಸ್ಯೆ ಬಗೆ ಹರಿಯಬಹುದೆನ್ನುವ ನಿರೀಕ್ಷೆ ಕಾಮಗಾರಿ ವಿಳಂಬದಿಂದಾಗಿ ಹುಸಿಯಾಗಿದೆ.

Exit mobile version