Site icon TUNGATARANGA

ಶಾಲಾವರಣದಲ್ಲೇ ಎಸ್‌ಡಿಎಂಸಿ ಸದಸ್ಯನ ಮೇಲೆ ಅಧ್ಯಕ್ಷನಿಂದ ಹಲ್ಲೆ ! ದೂರು ಪ್ರತಿದೂರು ದಾಖಲು

ಹೊಸನಗರ : ಶಾಲಾ ಶತಮಾನೋತ್ಸವ ಆಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಸದಸ್ಯನೋರ್ವನ ಮೇಲೆ ಹಲ್ಲೆ ನಡೆಸಿದ ಘಟನೆ ಇಲ್ಲಿನ ಶಾಸಕರ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದಿದೆ.

ಶಾಲೆಯು ನೂರು ವರ್ಷ ಪೂರೈಸಿದ್ದು, ಶತಮಾನೋತ್ಸವ ಕಾರ್ಯಕ್ರಮ ಆಚರಿಸಲು ಶಾಲಾಡಳಿತ ತೀರ್ಮಾನಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರನ್ನು ಒಳಗೊಂಡ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಸದಸ್ಯ ನೇರಲೆ ರಮೇಶ್ ಎಂಬುವವರು ಶಾಲೆ ನೂರು ವರ್ಷ ಪೂರ್ಣಗೊಳಿಸಿರುವುದರ ಕುರಿತು ಅನುಮಾನಗಳಿವೆ. ನೂರು ವರ್ಷ ಪೂರೈಸಿದ ಕುರಿತು ದಾಖಲೆಗಳು ಶಾಲೆಯಲ್ಲಿ ಇವೆಯೇ ಎಂದು ಪ್ರಶ್ನಿಸಿದ್ದರು. ಸಭೆ ಮುಗಿದ ಬಳಿಕ ಶಾಲಾವರಣದಲ್ಲಿ ಮತ್ತೆ ಪ್ರಸ್ತಾಪವಾಗಿ, ಶಾಲಾಸಮಿತಿ ಅಧ್ಯಕ್ಷ ಅಶ್ವಿನಿಕುಮಾರ್ ಹಾಗೂ ಸದಸ್ಯ ರಮೇಶ್ ನಡುವೆ ಮಾತಿನ ಚಕಮಕಿ ನಡೆಯಿತು. ಅಶ್ವಿನಿಕುಮಾರ್, ರಮೇಶ್ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ರಮೇಶ್ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ ಮೇಲೆ ನಡೆದ ಹಲ್ಲೆ ನಡೆಸಿದ ಆರೋಪಿ ಶಾಲಾ ಸಮಿತಿ ಅಧ್ಯಕ್ಷ ಅಶ್ವಿನಿಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. 

ಪ್ರತಿದೂರು: 

ರಮೇಶ್ ಎಂಬುವವರು ಸಭೆಗೆ ಮದ್ಯಪಾನ ಮಾಡಿ ಬಂದಿದ್ದು, ಸಭೆಯಿಂದ ಹೊರ ನಡೆಯುವಂತೆ ತಿಳಿಸಿದ್ದೆ. ಇದಕ್ಕೆ ಒಪ್ಪದೇ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಶ್ವಿನಿಕುಮಾರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. 

ಆರೋಗ್ಯ ವಿಚಾರಣೆ:

ಪ್ರತಿಷ್ಠಿತ ಸರಕಾರಿ ಶಾಲೆಯಲ್ಲಿ ಶಿಕ್ಷಕರು, ಮಕ್ಕಳು ಹಾಗೂ ಪೋಷಕರ ಎದುರೇ ಇಂತಹ ಘಟನೆ ನಡೆದಿರುವುದು ದುರದೃಷ್ಠಕರವಾಗಿದೆ. ಪ್ರಮುಖರಾದ ಗಣಪತಿ ಬಿಳಗೋಡು, ಎ.ವಿ.ಮಲ್ಲಿಕಾರ್ಜುನ, ಸುರೇಶ್ ಸ್ವಾಮಿರಾವ್, ಶಿವಕುಮಾರ್, ಮಂಜುನಾಥ್ ಎಚ್.ಎಸ್., ಮನೋಧರ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ರಮೇಶ್ ಅವರಿಗೆ ಆರೋಗ್ಯ ವಿಚಾರಿಸಿ, ಸಾಂತ್ವನ ಹೇಳಿದರು.

Exit mobile version