Site icon TUNGATARANGA

ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫೆ.5ರಿಂದ  10ರವರೆಗೆ ಕ್ಯಾನ್ಸರ್ ಜಾಗೃತಿ ಸಪ್ತಾಹ

ಶಿವಮೊಗ್ಗ,ಫೆ.02:ಕುವೆಂಪು ರಸ್ತೆಯಲ್ಲಿರುವ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫೆ.5ರಿಂದ  10ರವರೆಗೆ ಕ್ಯಾನ್ಸರ್ ಜಾಗೃತಿ ಸಪ್ತಾಹ ಆಯೋಜಿಸಲಾಗಿದೆ.

ಕ್ಯಾನ್ಸರ್ ಒಂದು ಮಾರಣಾಂತಿಕ ರೋಗವಾಗಿದ್ದು, ಆರಂಭಿಕ ಹಂತದಲ್ಲೇ ಸೂಕ್ತ ತಪಾಸಣೆಗಳ ಮೂಲಕ ಪತ್ತೆಹಚ್ಚಿ ರೋಗಿಯನ್ನು ಸಂಪೂರ್ಣ ಗುಣಮುಖರನ್ನಾಗಿ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಕ್ಯಾನ್ಸ್‍ರ್ ರೋಗಿಗಳ ಸಂಖ್ಯೆಯು ಗಣನೀಯವಾಗಿ ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿ ಇದರ ಬಗ್ಗೆ ಹರಿವು ಮೂಡಿಸಲು ಪ್ರತಿ ವರ್ಷ ಫೆ.4ರಂದು ವಿಶ್ವದಾದ್ಯಂತ ಕ್ಯಾನ್ಸರ್ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಮೆಡಿಕಲ್ ಅಂಕಾಲಜಿಸ್ಟ್, ಡಾ.ಅಪರ್ಣ ಶ್ರೀವತ್ಸ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೀಮೋಥೆರಪಿಯಿಂದ ಅನೇಕ ಕ್ಯಾನ್ಸರ್‍ಗಳನ್ನು ಸಂಪೂರ್ಣ ಗುಣಪಡಿಸುವುದು ಸಾಧ್ಯವಿದೆ. ಆದರೆ, ಕೀಮೋಥೆರಪಿ ತನ್ನದೇ ಆದ ಸೈಡ್ ಎಫೆಕ್ಟ್‍ಗಳನ್ನು ಹೊಂದಿದೆ. ಕೀಮೋ ಇಂಜೆಕ್ಷನ್ ಕೊಟ್ಟ ರಕ್ತನಾಳಗಳಿಗೆ ಹಾನಿ ಮಾಡಿ ನೋವನ್ನು ಉಂಟುಮಾಡುತ್ತದೆ. ಅಂತಹ ರಕ್ತನಾಳಗಳು ನಾರುಗಟ್ಟಿ ಮುಂದಿನ ಕೀಮೋಥೆರಪಿಗೆ ರಕ್ತನಾಳಗಳು ಸಿಗುವುದಿಲ್ಲ.  ಇಂತಹ ದುಷ್ಪರಿಣಾಮಗಳನ್ನು ತಡೆಗಟ್ಟಿ ಕೀಮೋಥೆರಪಿಯನ್ನು ಸರಿಯಾಗಿ ಹಾಗೂ ನೋವಿಲ್ಲದೆ ಕೊಡಲು “ಪಿಕ್‍ಲೈನ್” ಕ್ಯಾನ್ಸರ್ ರೋಗಿಗಳಿಗೆ ಲೈಫ್‍ಲೈನ್ ಆಗಿದೆ ಎಂದರು.

ಸಪ್ತಾಹದಲ್ಲಿ ವೈದ್ಯರಾದ ಡಾ.ಅಪರ್ಣ ಶ್ರೀವತ್ಸ, ಡಾ.ವಿವೇಕ್, ಡಾ. ಆಶಾರ್ಶರೀ ಉಪಾಧ್ಯ, ಡಾ.ಮಧು, ಡಾ.ಶಿಲ್ಪ ಪ್ರಭು ಹಾಗೂ ಡಾ.ರವಿ ಇವರುಗಳಿಂದ ಕ್ಯಾನ್ಸರ್ ಕಾಯಿಲೆ ಕುರಿತು ಮತ್ತು ಕ್ಯಾನ್ಸರ್ ರೋಗಿಗಳಿಗೆ ಜೀವನ ಶೈಲಿ, ಆಹಾರ ಪದ್ಧತಿ, ಯೋಗ ಮತ್ತು ವ್ಯಾಯಾಮ ಹಾಗೂ ಶಸ್ತ್ರ ಚಿಕಿತ್ಸೆಯ ಕುರಿತಾಗಿ ಉಚಿತ ಸಲಹೆ ಮತ್ತು ಸಮಾಲೋಚನೆಯನ್ನು ಏರ್ಪಡಿಸಲಾಗಿದೆ ಎಂದರು.

ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಕ್ಯಾನ್ಸರ್ ಪತ್ತೆ ಹಚ್ಚಲು ತಪಾಸಣಾ ಶಿಬಿರ ಹಾಗೂ ಪ್ಯಾಕೇಜ್ ಸೌಲಭ್ಯವು ಫೆ.29ರವರೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9513915370, 9886413131 ರಲ್ಲಿ ಸಂಪರ್ಕಿಸಲು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ವಿವೇಕ್ ಎಂ.ಎ., ಡಾ.ರವಿ ಉಪಸ್ಥಿತರಿದ್ದರು.

Exit mobile version