Site icon TUNGATARANGA

ಸೊರಬ : ಸಾಗುವಳಿ ಪತ್ರ ನೀಡಲು ಬೆದವಟ್ಟಿ, ಬಿಳವಾಣಿ ಗ್ರಾಮಸ್ಥರ ಮನವಿ


ಶಿವಮೊಗ್ಗ : ಸೊರಬ ತಾಲ್ಲೂಕು ಕಸಬಾ ಹೋಬಳಿಯ ಬೆದವಟ್ಟಿ ಗ್ರಾಮದ ಸರ್ವೆ ನಂ.91 ರಲ್ಲಿ ಅರಣ್ಯ ಜಮೀನನ್ನು ಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದು, ಸಾಗುವಳಿ ಪತ್ರ ನೀಡಬೇಕೆಂದು ಆಗ್ರಹಿಸಿ ಬೆದವಟ್ಟಿ ಹಾಗೂ ಬಿಳವಾಣಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ತಲೆಮಾರಿನಿಂದಲೂ ಅಂದರೆ ನಮ್ಮ ತಾತ, ಅಜ್ಜ, ನಮ್ಮ ತಂದೆ ಕಾಲದಿಂದಲೂ ಸಾಗುವಳಿ ಮಾಡುತ್ತಾ ಬಂದಿರುವ ಜಮೀನನ್ನು ಈಗಲೂ ಸಹ ನಮ್ಮ ಕುಟುಂಬದವರು ಜೀವನ ನಿರ್ವಹಣೆಗಾಗಿ ಸಾಗುವಳಿ ಮಾಡುತ್ತಿದ್ದೇವೆ. ಜಮೀನನ್ನು ಹಕ್ಕು ಮಾನ್ಯ ಮಾಡಿಕೊಳ್ಳುವ ಸಂಬಂಧ ಈಗಾಗಲೇ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಗ್ರಾಮ ಅರಣ್ಯ ಸಮಿತಿಗೆ ಅರ್ಜಿ ಸಲ್ಲಿಸಿದ್ದು, ಸದರಿ ಅರ್ಜಿಯನ್ನು ಗ್ರಾಮ ಅರಣ್ಯ ಸಮಿತಿಯು ಅನುಮೋದಿಸಿ ಸಂಬಂಧಪಟ್ಟ ಕಛೇರಿಗೆ ಕಳುಹಿಸಿರುತ್ತಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಅರ್ಜಿ ಜೊತೆಗೆ ಮಂಜೂರಾತಿಗೆ ಅವಶ್ಯಕತೆ ಇರುವ ಎಲ್ಲಾ ದಾಖಲೆಗಳನ್ನು ಲಗತ್ತಿಸಿರುತ್ತೇವೆ. ಇಷ್ಟೆಲ್ಲಾ ದಾಖಲೆ ಲಗತ್ತಿಸಿದ್ದರೂ ಸಹ ಉಪವಿಭಾಗ ಮಟ್ಟದ ಅರಣ್ಯ ಸಮಿತಿಯು ನಮ್ಮ ಅರ್ಜಿಯನ್ನು ತಿರಸ್ಕರಿಸಿರುತ್ತದೆ. ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರು ಪ್ರತಿಶತ 90% ಅಧಿಕ ಇದ್ದು, ಇದೇ ಅರಣ್ಯ ಭೂಮಿಯನ್ನು ಜೀವನಾಂಶಕ್ಕಾಗಿ ಅವಲಂಬಿಸಿಕೊಂಡಿರುತ್ತೇವೆ. ಅರಣ್ಯ ಹಕ್ಕು ಕಾಯ್ದೆಯಡಿ ಸುಪ್ರೀಂ ಕೋರ್ಟಿನ ಆದೇಶವನ್ನು ಉಲ್ಲಂಘಿಸಿ ತಿರಸ್ಕರಿಸಿರುತ್ತೀರಿ. ಮತ್ತು ಉಪವಿಭಾಗ ಮಟ್ಟದ ಸಮಿತಿ ಮತ್ತು ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಒಳಗೊಂಡು ಸಮಿತಿ ಕಾರ್ಯನಿರ್ವಹಿಸಬೇಕು. ಮತ್ತು ಜನಪ್ರತಿನಿಧಿಗಳು ಇಲ್ಲದೇ ಸಭೆಯನ್ನು ನಡೆಸಿರುವುದು ಕಾನೂನುಬಾಹಿರ ಪ್ರಕ್ರಿಯೆಯಾಗಿರುತ್ತದೆ ಎಂದು ದೂರಿದ್ದಾರೆ.

ತಾವುಗಳು ನಮ್ಮ ಮೇಲ್ಮನವಿ ಅರ್ಜಿಯನ್ನು ಸ್ವೀಕರಿಸಿ, ಸುಮಾರು 190 ಕುಟುಂಬಗಳು ಸಾಗುವಳಿ ಮಾಡುತ್ತಿರುವ ಜೀವನ ಆಧಾರವಾಗಿರುವ ಜಮೀನನ್ನು ಮಂಜೂರು ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಬೆದವಟ್ಟಿ, ಬಿಳವಾಣಿ ಗ್ರಾಮಸ್ಥರು ಉಪಸ್ಥಿತರಿದ್ದರು.

Exit mobile version