Site icon TUNGATARANGA

ಜೀವನದಲ್ಲಿ ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ ಸೇರಿದಂತೆ ಎಲ್ಲ ಶಿವಶರಣರ ವಚನ ಸಾಹಿತ್ಯದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು: ಶಿಕ್ಷಣ ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ ಸೇರಿದಂತೆ ಎಲ್ಲ ಶಿವಶರಣರ ವಚನ ಸಾಹಿತ್ಯದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಶಾಲಾ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಬೆಕ್ಕಿನ ಕಲ್ಮಠದಲ್ಲಿ ಪರಮ ತಪಸ್ವಿ ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿಗಳ 112ನೇ ಪುಣ್ಯ ಸ್ಮರಣೋತ್ಸವ ಪ್ರಯುಕ್ತ ಆಯೋಜಿಸಿದ್ದ ಶರಣ ಸಾಹಿತ್ಯ ಸಮ್ಮೇಳನ, 532ನೇ ಮಾಸಿಕ ಶಿವಾನುಭವಗೋಷ್ಠಿ, ಅಲ್ಲಮ ಪ್ರಭು, ಅಕ್ಕಮಹಾದೇವಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

12ನೇ ಶತಮಾನದ ಶಿವಶರಣ ಅಲ್ಲಮ ಪ್ರಭುಗಳ ತತ್ವ ಆದರ್ಶ, ವಚನ ಸಾಹಿತ್ಯವು ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೂ ಮಾರ್ಗದರ್ಶನ ನೀಡುತ್ತದೆ. ನಾನು ಸಹ ನನ್ನ ಜೀವನದಲ್ಲಿ ವಚನ ಸಾಹಿತ್ಯ ಮೌಲ್ಯಗಳನ್ನು ಅನುಷ್ಠಾನ ಮಾಡಲು ಪ್ರಯತ್ನ ನಡೆಸುತ್ತೇನೆ ಎಂದು ತಿಳಿಸಿದರು.

ಬೆಂಗಳೂರು ಆಕಾಶವಾಣಿ ನಿವೃತ್ತ ನಿರ್ದೇಶಕ ಡಾ. ಬಸವರಾಜ ಸಾದರ ಅವರಿಗೆ “ಅಲ್ಲಮ ಪ್ರಭು ಪ್ರಶಸ್ತಿ” ಹಾಗೂ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ವಿಶ್ರಾಂತ ಪ್ರಾಧ್ಯಾಪಕಿ ಡಾ. ಶಾಂತಕುಮಾರಿ ಇಮ್ರಾಪುರ ಅವರಿಗೆ “ಅಕ್ಕಮಹಾದೇವಿ ಪ್ರಶಸ್ತಿ” ಪ್ರದಾನ ಮಾಡಿ ಗೌರವಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ನಾಗರಾಜ್, ಯುಎಇ ಬಸವ ಸಮಿತಿ ಸ್ಥಾಪಕ ಚಂದ್ರಶೇಖರ ಲಿಂಗದಹಳ್ಳಿ ಅವರನ್ನು ಸನ್ಮಾನಿಸಲಾಯಿತು. ಸಂಗೀತ ಶಿಕ್ಷಕಿ ಸುಮಾ ಹೆಗಡೆ, ಆಕಾಶವಾಣಿ ಕಲಾವಿದೆ ನಾಗರತ್ನಮ್ಮ ಚಂದ್ರಶೇಖರಯ್ಯ ಅವರು ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. 112 ಜನರು ಸಮೂಹ ವಚನ ಗಾಯನ ನಡೆಸಿಕೊಟ್ಟರು. ಶ್ರೀ ವಿಜಯ ಕಲಾನಿಕೇತನ ವೃಂದವು ವಚನ ನೃತ್ಯ ನಡೆಸಿಕೊಟ್ಟಿತು.

ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಬ್ರಹ್ಮಶ್ರೀ ನಾರಾಯಣ ಗುರು ಮಹಾಸಂಸ್ಥಾನ ಪೀಠದ ಶ್ರೀ ರೇಣುಕಾನಂದ ಸ್ವಾಮೀಜಿ, ಉಪಸ್ಥಿತರಿದ್ದರು.

ಶಾಸಕ‌ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ‌ಡಿ.ಎಸ್.ಅರುಣ್, ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ. ಆರ್.ಸಿ. ಜಗದೀಶ್, ಡಾ. ವಿಜಯಾದೇವಿ, ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಎಚ್.ಸಿ.ಯೋಗೀಶ್, ಪ್ರಧಾನ ಕಾರ್ಯದರ್ಶಿ ಎಸ್.ಎನ್.ಮಹಾಲಿಂಗಯ್ಯ ಶಾಸ್ತ್ರಿ, ಕೋಶಾಧ್ಯಕ್ಷ  ವಿಶ್ವಾಸ್, ಎಸ್.ಎಸ್. ಜ್ಯೋತಿಪ್ರಕಾಶ್, ಶೀಲಾ ಸುರೇಶ್ ಮತ್ತಿತರರು ಹಾಜರಿದ್ದರು.

Exit mobile version