ಶಿವಮೊಗ್ಗ,ಜ.25: ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ಜಾತಿ ನಾಯಕ ಎಂದು ಘೋಷಣೆ ಮಾಡಿಕೊಂಡು ಸಮಾಜದಲ್ಲಿ ಸಂಘರ್ಷ ಹುಟ್ಟು ಹಾಕಿದ್ದೇ ಸಾಧನೆ ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದರು.
ಅವರು ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ತಾನು ಹಿಂದುಳಿದ, ದಲಿತ ನಾಯಕ ಅಂತ ಘೋಷಣೆ ಮಾಡಿಕೊಂಡಿದ್ದಾರೆ. ಆದರೆ ಜಾತಿ ಗಣತಿ ವರದಿ ಸಿದ್ಧ ಇದ್ದರೂ ಬಿಡುಗಡೆ ಮಾಡಿಲ್ಲ. ಹಿಂದುಳಿದ ವರ್ಗಗಳ ಅಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಮುಖ್ಯಮಂತ್ರಿಗಳು ಯಾವಾಗ ಕೇಳಿದರೂ ವರದಿ ಕೊಡುತ್ತೇನೆ ಎಂದಿದ್ದಾರೆ. ಮೊದಲು ವರದಿ ಸ್ವೀಕಾರ ಮಾಡಲಿ ಎಂದರು.
ಜಾತಿ ಗಣತಿ ಹಿನ್ನೆಲೆಯಲ್ಲಿ ಲಿಂಗಾಯತರು ಸಮ್ಮೇಳನವನ್ನೇ ಮಾಡಿದರು. ಒಕ್ಕಲಿಗರು ಸಹಿ ಸಂಗ್ರಹ ಮಾಡಿದ್ದಾರೆ. ಹೀಗೆ ಸಿದ್ದರಾಮಯ್ಯ ಇಡೀ ಹಿಂದೂ ಸಮಾಜದಲ್ಲಿ ಸಂಘರ್ಷ ಹುಟ್ಟು ಹಾಕಿದ್ದಾರೆ. ಈಗ ತಮ್ಮ ಹಿಂಬಾಲಕರ ಮೂಲಕ ಚಿತ್ರದುರ್ಗದಲ್ಲಿ ಅಹಿಂದ ಸಮಾವೇಶ ಮಾಡಲು ಹೊರಟಿದ್ದಾರೆ. ಇದು ವೋಟಿಗಾಗಿ ಈ ಹಿನ್ನಲೆಯಲ್ಲಿ ನಿಮ್ಮ ನಿಲುವೇನು? ಸರ್ಕಾರದ ನಿಲುವೇನು? ಎಂದು ಪ್ರಶ್ನಿಸಿದರು.
ಜಾತಿ ಗಣತಿ ಸಿದ್ಧವಾಗಿ ಒಂಭತ್ತು ವರ್ಷ ಆಗಿದೆ. ಜಾತಿಗಣತಿ ವೈಜ್ಞಾನಿಕವಾಗಿ ಆಗಬೇಕು ಎಂಬುದು ಹಲವರ ಬೇಡಿಕೆ. ಜಯಪ್ರಕಾಶ್ ಹೆಗಡೆ ವರದಿ ರೆಡಿ ಇದೆ ಅಂದಾಗ ಸಿದ್ದರಾಮಯ್ಯ ತಗೊಬೇಕಿತ್ತು. ಚರ್ಚೆಗೆ ಬಿಡಬೇಕಿತ್ತು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಗಿರೀಶ್ ಪಟೇಲ್, ಟಿ.ಡಿ.ಮೇಘರಾಜ್, ರಮೇಶ್, ಚಂದ್ರಶೇಖರ್, ಶಿವರಾಜ್ ಇದ್ದರು.