ಶಿವಮೊಗ್ಗ ಜನವರಿ 25
ಮತದಾನ ಮಾಡುವುದು ನಮ್ಮ ಹಕ್ಕು ಮಾತ್ರವಲ್ಲ ಕರ್ತವ್ಯ ಮತ್ತು ಜವಾಬ್ದಾರಿ ಕೂಡ ಆಗಿದೆ ಎಂದು ಮನಗಂಡು ಯುವಜನತೆ ಹೆಚ್ಚು ಹೆಚ್ಚು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ನಾಯಕ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರ್ರಾಧಿಕಾರ, ಜಿಲ್ಲಾ ಪಂಚಾಯತ್ ,ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಹಾನಗರಪಾಲಿಕೆ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಕುವೆಂಪು ರಂಗಂಂದಿರದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮಗೆ ಸ್ವಾತಂತ್ರ್ಯ ಸಿಕ್ಕ ನಂತರ ರಚಿತವಾದ ಚುನಾವಣಾ ಆಯೋಗ ಜಾರಿಗೆ ಬಂದು 75 ವರ್ಷ ತುಂಬಿದೆ. 1988 ನೇ ಸಾಲಿನವರೆಗೆ 21 ವರ್ಷದವರು ಮಾತ್ರ ಮತದಾನ ಮಾಡಲು ಅವಕಾಶ ಇತ್ತು. ಆದರೆ ಸಂವಿಧಾನಕ್ಕೆ ತಿದ್ದುಪಡಿ ತಂದು 18 ವರ್ಷದ ಯುವ ಮತದಾರರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಮತದಾನ ಮಾಡಲು ಮತ್ತು ಮತದಾರರು ಚುನಾವಣೆಯಲ್ಲಿ ಭಾಗವಹಿಸಲು ಆಯೋಗ ಅನೇಕ ಅರಿವು ಮತ್ತು ಇತರೆ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ.
ಮತದಾನ ಎಂಬುದು ಒಂದು ಹಕ್ಕು ಮತ್ತು ಕರ್ತವ್ಯ ಎನ್ನುವುದು ನಮ್ಮ ದೇಶದ ಪ್ರತಿಯೊಬ್ಬರಿಗೂ ತಿಳಿಸುವ ಜವಾಬ್ದಾರಿ ಯುವ ಜನತೆಯ ಮೇಲಿದೆ. ಗ್ರಾಮೀಣ ಭಾಗದಲ್ಲಿ ಈ ಕುರಿತಾದ ಅರಿವು ಹೆಚ್ಚಬೇಕು. ಚುನಾವಣೆಯಲ್ಲಿ ಯಾರಿಗೆ ಮತದಾನ ಮಾಡಬೇಕೆಂಬ ಪ್ರಶ್ನೆ ಕೆಲವರಲ್ಲಿ ಯಾರಿಗೂ ಮತ ಹಾಕಬಾರದು ಎನ್ನುವುದಿದ್ದರೆ ನೋಟಾ ಮೂಲಕ ನಿಮ್ಮ ಹಕ್ಕನ್ನು ಚಲಾಯಿಸಬಹುದು. ನಾವು ಆಯ್ಕೆ ಮಾಡುವ ಜನಪ್ರತಿನಿಧಿಗಳು ಆಡಳಿತ ಮಾತ್ರವಲ್ಲದೆ ಕಾನೂನನ್ನು ಬದಲಿಸುವ ಶಕ್ತಿ ಇರುವುದರಿಂದ ನಮ್ಮ ಆಯ್ಕೆ ಸರಿಯಾಗಿರಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಮಾತನಾಡಿ, ಇಡೀ ದೇಶದಲ್ಲಿ ಮತದಾರರ ದಿನಾಚರಣೆ ಆಚರಣೆ ನಡೆಸಲಾಗುತ್ತಿದೆ. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ ಎನ್ನುವ ಹೆಮ್ಮೆ ನಮಗಿದೆ. ಬೇರೆ ಬೇರೆ ದೇಶದವರಿಗೂ ಮತದಾನ ಹಾಗೂ ಚುನಾವಣಾ ನಡೆಸುವ ಕುರಿತಾದ ತರಬೇತಿ ನಮ್ಮ ದೇಶದಲ್ಲಿ ನೀಡಲಾಗುತ್ತಿರುವುದು ಹೆಮ್ಮೆ ವಿಚಾರ. ಪ್ರಜಾಪ್ರಭುತ್ವದ ಮೂಲಮಂತ್ರ ಚುನಾವಣೆ. ಪ್ರತಿಯೊಬ್ಬರು ಚುನಾವಣೆಯಲ್ಲಿ ಭಾಗವಹಿಸಬೇಕು. ನಗರ ಪ್ರದೇಶದಲ್ಲಿ ಚುನಾವಣಾ ಮತದಾನ ಕಡಿಮೆ ಆಗುತ್ತಿದ್ದು ಯುವಕರು ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ.
ಮತದಾರರು ಚುನಾವಣೆಗೆ ನೋಂದಣಿ ಮಾಡಲು ಅವಕಾಶ ಇದೆ. ನಾಮಪತ್ರ ಸಲ್ಲಿಸುವ ಕೊನೆಯ ದಿನದ ವರೆಗೆ ಮತದಾನ ನೋಂದಣಿ ಮಾಡಿಕೊಳ್ಳಲು ಅವಕಾಶ ಇದೆ. ಎಲ್ಲ ಅರ್ಹ ಮತದಾರರು ನೋಂದಣಿ ಮಾಡಿಕೊಳ್ಳಬೇಕು. ಚುನಾವಣೆ ಕುರಿತು ಹೆಚ್ಚಿನ ಮಾಹಿತಿಗೆ 1950 ಗೆ ಕರೆ ಮಾಡಿರೆಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿ ಎನ್ ಚಂದನ್ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಜಿ.ಪಂ. ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ ರಾಷ್ಟ್ರೀಯ ಮತದಾನ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ನೆಡೆಸಲಾದ ಪ್ರಬಂಧ, ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು ಹಾಗೂ ಎಎಸ್‍ಪಿ ಅನಿಲ್ ಕುಮಾರ್ ಭೂಮರೆಡ್ಡಿ ಯುವ ಮತದಾರರಿಗೆ ಗುರುತಿನ ಚೀಟಿ ವಿತರಿಸಿದರು.
ಎಡಿಸಿ ಸಿದ್ದಲಿಂಗರೆಡ್ಡಿ, ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ, ಉಪಸ್ಥಿತರಿದ್ದರು.