ಶಿವಮೊಗ್ಗ,ಜ.24:
ಶಿವಮೊಗ್ಗದ ದಕ್ಷ ಪೊಲೀಸ್ ಅಧಿಕಾರಿ ಡಿವೈಎಸ್ಪಿ ಬಿ. ಬಾಲರಾಜ್ ಅವರನ್ನು ಎರಡು ವರ್ಷಕ್ಕೂ ಮೊದಲೇ ವರ್ಗಾವಣೆ ಮಾಡಿದ್ದು, ಬಿಟ್ ಕಾಯಿನ್ ಹಗರಣದ ಸಂಪೂರ್ಣ ತನಿಖೆಯ ಜವಾಬ್ದಾರಿ ನೀಡಿ ಬದಲಿಸಲಾಗಿದೆ.
ಬೆಂಗಳೂರಿನ ಎಸ್ಐಟಿಗೆ ವರ್ಗಾವಣೆಯಾಗಿದ್ದರಿಂದ ಪ್ರಸ್ತುತ ಡಿವೈಎಸ್ಪಿ-2 ಸುರೇಶ್ ರಿಗೆ ಇನ್ಚಾರ್ಜ್ ವಹಿಸಲಾಗಿದೆ.
ಈ ದಿಡೀರ್ ಬೆಳವಣಿಗೆ ಶಿವಮೊಗ್ಗದಲ್ಲಿ ಬೇಸರ ಮೂಡಿಸಿದೆ. ಇಲ್ಲಿಗೆ ಯಾರನ್ನೂ ನೇಮಿಸದೆ ಏಕಾಏಕಿ ಡಿವೈಎಸ್ಪಿ ಬಾಲರಾಜ್ ಅವರನ್ನ ವರ್ಗಾವಣೆ ಮಾಡಿರುವುದು ಶಿವಮೊಗ್ಗದ ಪಾಲಿಗೆ ನೋವಿನ ಸಂಗತಿಯೇ ಹೌದು.
ಬಿಟ್ ಕಾಯಿನ್ ಹಗರಣವನ್ನ ಬೇಧಿಸಲು ಡಿವೈಎಸ್ಪಿ ಬಾಲರಾಜ್ ಅವರನ್ನು ವರ್ಗಾವಣೆ ಮಾಡಲಾಗಿದೆ. ನಿನ್ನೆ ರಾತ್ರಿ 8 ಗಂಟೆಗೆ ಬಂದ ವರ್ಗಾವಣೆ ಪತ್ರ ಶಿವಮೊಗ್ಗ ಅದರಲ್ಲೂ ಶಿವಮೊಗ್ಗ ಪೊಲೀಸ್ ಇಲಾಖೆಯಲ್ಲಿ ಸಂಚಲನ ಉಂಟು ಮಾಡಿದೆ.
ಶಿವಮೊಗ್ಗದ ರೌಡಿಗಳ ಎದೆಯನ್ನ ನಡುಕ ಹುಟ್ಟಿಸಿದ್ದ ಅಧಿಕಾರಿ ಬೆಂಗಳೂರಿನ ಬಿಟ್ ಕಾಯಿನ್ ಪ್ರಕರಣದ ವಿಶೇಷ ಅಧಿಕಾರಿಯಾಗಿ ತೆರಳುತ್ತಿರುವುದು ಸಂತೋಷವಾದರೂ ಶಿವಮೊಗ್ಗ ಪಾಲಿಗೆ ಬೇಸರದ ವಿಷಯ.
ಪ್ರೇಮ್ ಸಿಂಗ್ ಪ್ರಕರಣ, ತುಂಗನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂಜಿನಿಯರ್ ಮನೆಯಲ್ಲಿ ಕಾರು ಡ್ರೈವರ್ ಕೆಲಸದವನಿಂದ ಮನೆಯ ಮಾಲೀಕಳ ಕೊಲೆ ಪ್ರಕರಣದಲ್ಲಿ ಬಾಲರಾಜ್ ಒಂದು ವಾರದೊಳಗೆ ಆರೋಪಿಗಳನ್ನ ಸದೆಬಡೆದಿದ್ದರು. ಅವರು ಎತ್ತಿಕೊಂಡು ಹೋಗಿದ್ದ ಲಕ್ಷಾಂತರ ರೂ. ಹಣವನ್ನ ವಾಪಾಸ್ ಕೊಡಿಸುವಲ್ಲಿ ಪ್ರಮುಖ ಪಾತ್ರ ಆಗಿತ್ತು.
ಅದಲ್ಲದೆ ಬಾಲರಾಜ್ ಅವರ ರೌಡಿ ಸ್ಕ್ವಾಡ್ ಎಂಥಹದೇ ರೌಡಿಯ ಎದೆಯನ್ನೇ ನಡುಗಿಸುವಂತಹದ್ದು, ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುವ ರೌಡಿಗಳ ಕಾಲಿಗೆ ಗುಂಡೇಟಿನ ನಿರ್ಧಾರದಲ್ಲಿ ಬಾಲರಾಜ್ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಎರಡು ವರ್ಷ ತಮ್ಮ ಸರ್ವಿಸ್ ನಲ್ಲಿ ಡಜನ್ ಗೂ ಅಧಿಕ ರೌಡಿಗಳ ಕಾಲಿಗೆ ಗುಂಡು ಹಾರಿಸಲಾಗಿದೆ.
ಬಾಲರಾಜ್ ಅವರ ವರ್ಗಾವಣೆ ಸಧ್ಯಕ್ಕೆ ಶಿವಮೊಗ್ಗಕ್ಕಂತೂ ಕೊರತೆ ಉಂಟಾಗಿದೆ. ಅದರಲ್ಲೂ ಅನುಭವಿ ಅಧಿಕಾರಿಗಳನ್ನ ನೇಮಿಸದೆ ವರ್ಗಾಯಿಸಿದ್ದು ಬೇಸರ ಹೆಚ್ಚಿಸಿದೆ. ಶಿವಮೊಗ್ಗದ ಪೊಲೀಸರು ಮತ್ತು ಸಿಬ್ಬಂದಗಳು ಹೃದಯ ಸ್ಪರ್ಶಿ ಬೀಳ್ಕೊಡುಗೆ ನೀಡಿದ್ದಾರೆ
ಬಿಟ್ ಕಾಯಿನ್ ಪ್ರಕರಣದಲ್ಲ ಸಾಕಷ್ಟು ಪೋಲೀಸ್ ಅಧಿಕಾರಿಗಳ ಪಾತ್ರ ಇದೆ ಎಂದು ಈ ಹಿನ್ನಲೆಯಲ್ಲಿ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಲು ಶಿವಮೊಗ್ಗ ಡಿ.ವೈ.ಎಸ್.ಪಿ ಯಾಗಿ ಕಾರ್ಯನಿರ್ವಹಿಸುತ್ತಿದ್ದ ಬಾಲರಾಜ್ ರವರನ್ನು ಸಿಐಡಿ ಗೆ ವರ್ಗಾಹಿಸಿ ಎಸ್ ಐ ಟಿ ತನಿಖಾಧಿಕಾರಿಯಾಗಿ ನೇಮಿಸಲಾಗಿದೆ.
ಶಿವಮೊಗ್ಗದ ಡಿ ವೈ ಎಸ್ ಪಿ ಬಾಲರಾಜ್ ರವರು ಹಿಂದೆ ತೀರ್ಥಹಳ್ಳಿಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದ ಸಂದರ್ಭದಲ್ಲಿ ಮಲೆನಾಡ ಭಾಗದ ಅದೆಷ್ಟೋ ಪ್ರಕರಣಗಳಿಗೆ ಮರು ಜೀವ ನೀಡಿ ಆರೋಪಿಗಳಿಗೆ ಜೈಲು ಶಿಕ್ಷೆ ಆಗುವಂತೆ ಮಾಡಿದ್ದರು.
ನಕ್ಸಲರು ಮನೆ ಮನೆಗಳಿಗೆ ನುಗ್ಗಿ ಲೂಟಿ ಮಾಡುತ್ತಿದ್ದಾರೆ ಎಂದು ಎಂದು ಬಿಂಬಿತವಾಗಿದ್ದ ತಲ್ಲೂರು ಅಂಗಡಿ ಪ್ರಕರಣಕ್ಕೆ ಬಾಲರಾಜ್ ಬಿಗ್ ಟ್ವಿಸ್ಟ್ ನೀಡಿ ನಕ್ಸಲರ ಹೆಸರಲ್ಲಿ ಬೇರೆ ಗುಂಪೊಂದು ದರೋಡೆ ಮಾಡಿದ್ದನ್ನು ಬಯಲಿಗೆ ಎಳೆದಿದ್ದರು. ಇಂತಹ ಹಲವು ಕ್ರೈಂ ಪ್ರಕರಣಗಳಿಗೆ ಬಾಲರಾಜ್ ರವರು ತನಿಖೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದರು.