Site icon TUNGATARANGA

ಗೋಮಾಳ ಅಕ್ರಮ ಭೂ ಒತ್ತುವರಿ ದೂರು, ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಸ್ಥಳಕ್ಕೆ ತಹಶೀಲ್ದಾರ್ ರಶ್ಮಿ ಭೇಟಿ, ಒತ್ತುವರಿ ತೆರವುಗೊಳಿಸಲು ಸೂಚನೆ

ಹೊಸನಗರ : ತಾಲೂಕಿನ ಹುಂಚ ಹೋಬಳಿ ಮೇಲಿನಬೆಸಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವಸವೆ ಗ್ರಾಮದ ಸರ್ವೆ ನಂ 17ರ 38 ಎಕರೆ ಸರ್ಕಾರಿ ಗೋಮಾಳದಲ್ಲಿ, ಶ್ರೀಧರ್ ಬಿನ್ ರಾಜಪ್ಪಗೌಡ ಎಂಬಾತ ಅಕ್ರಮವಾಗಿ ಸುಮಾರು ನಾಲ್ಕೆೈದು ಎಕರೆಯಷ್ಟು ಭೂ ಒತ್ತುವರಿ ಮಾಡಿ ಕೃಷಿ ಚಟುವಟಿಕೆಯಲ್ಲಿ ನಿರತನಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ದೂರುಗಳು ಬಂದ ಹಿನ್ನಲೆಯಲ್ಲಿ ತಹಶೀಲ್ದಾರ್ ರಶ್ಮಿ ಹಾಲೇಶ್ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಗರ್ ಹುಕುಂ 53 ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದ ಒತ್ತುವರಿದಾರನ ಅರ್ಜಿ ಈಗಾಗಲೇ ವಜಾಗೊಂಡಿದ್ದು, ಅದೇ ಕಂದಾಯ ಗೋಮಾಳ ಭೂಮಿಗೆ ಮತ್ತೆ ಬಗರ್‌ಹುಕುಂ 57ರ ಅಡಿಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಕೆಯಾಗಿದೆ. ಆದರೆ, ಸ್ಥಳೀಯ ಗ್ರಾಮಸ್ಥರ ತೀವ್ರ ವಿರೋಧದ ಕಾರಣ ಮುಂದಿನ ಸಭೆಯಲ್ಲಿ ಅರ್ಜಿ ವಜಾಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಗ್ರಾಮಸ್ಥರಿಂದ ಗೋಮಾಳ ಭೂಮಿ ತೆರವಿಗೆ ಮೇಲಿಂದ ಮೇಲೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಲಾಗಿದ್ದು, ಕೂಡಲೇ ಅಕ್ರಮ ಒತ್ತುವರಿ ತೆರವುಗೊಳಿಸುವಂತೆ ಅರ್ಜಿದಾರರಿಗೆ ಅವರು ಸೂಚಿಸಿದ್ದಾರೆ. ತಪ್ಪಿದಲ್ಲಿ ಸೂಕ್ತ ಕಾನೂನು ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮ ಅಭಿವೃದ್ದಿ ಅಧಿಕಾರಿ ನವೀನ್, ಗ್ರಾಮ ಸಹಾಯಕ ನಾಗರಾಜ ಗ್ರಾಮಸ್ಥರಾದ ಬಸವಣಪ್ಪ ಗೌಡ, ಚನ್ನಬಸಪ್ಪ ಗೌಡ, ಗಣೇಶ್, ತೇಜಪ್ಪಗೌಡ, ಶಶಿಕುಮಾರ, ಮೇಲಿನಬೆಸಿಗೆ ಗ್ರಾಮ ಪಂಚಾಯತಿ ಸದಸ್ಯ ಧರ್ಮಪ್ಪ ಮೊದಲಾದವರು ಸ್ಥಳದಲ್ಲಿ ಹಾಜರಿದ್ದರು.

Exit mobile version