Site icon TUNGATARANGA

ಜಿಲ್ಲೆಯಾದ್ಯಂತ ಸುಗ್ಗಿ ಹಬ್ಬ ಸಂಭ್ರಮ/ಕೃಷಿ ಪರಿಕರಗಳನ್ನು ಶುಚಿಗೊಳಿಸಿ ಪೂಜಿಸಿದ ರೈತರು | ದೇವಾಲಯಗಳಲ್ಲಿ ವಿಶೇಷ ಪೂಜೆ

ಶಿವಮೊಗ್ಗ, ಜ.೧೫:
ಜಿಲ್ಲೆಯಾದ್ಯಂತ ಸುಗ್ಗಿ ಹಬ್ಬ ಮಕರ ಸಂಕ್ರಮಣವನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಹಿನ್ನಲೆಯಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.
ಅಗತ್ಯ ವಸ್ತುಗಳನ್ನು ಖರೀದಿಸಲು ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನಸ್ತೋಮ ನೆರೆದಿತ್ತು. ಬೆಳಗ್ಗೆಯಿಂದಲೇ ನಗರದ ಗಾಂಧಿ ಬಜಾರ್, ಶಿವಪ್ಪನಾಯಕ ಮಾರುಕಟ್ಟೆ, ಗೋಪಿ ವೃತ್ತ, ಜೈಲ್ ವೃತ್ತ, ಲಕ್ಷ್ಮಿ ಟಾಕೀಸ್ ವೃತ್ತದಲ್ಲಿ ಹೂವು, ಹಣ್ಣು, ಕಬ್ಬು, ಬಾಳೆಗಿಡ ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿ ಸಾಗಿತ್ತು.


ಸಂಕ್ರಾತಿಗೆ ಮುಖ್ಯವಾಗಿ ಬೇಕಿರುವ ಎಳ್ಳುಬೆಲ್ಲ, ಕಬ್ಬು, ಕಡ್ಲೆಕಾಯಿ ಗಿಡಗಳಿಗೆ ಬೇಡಿಕೆ ಹೆಚ್ಚಿದ್ದು, ಇದರ ಪರಿಣಾಮವಾಗಿ ಇವೆಲ್ಲವುದರ ಬೆಲೆ ತುಸು ಏರಿಕೆ ಕಂಡಿತ್ತ್ತು. ಗ್ರಾಹಕರು ಸಿದ್ಧ ಪಡಿಸಿದ ೧ ಕೆ.ಜಿ. ತೂಕದ ಎಳ್ಳು-ಬೆಲ್ಲದ ಪೊಟ್ಟಣಕ್ಕೆ ೩೫೦ ರು., ಕಬ್ಬಿನ ಜಲ್ಲೆಯೊಂದಕ್ಕೆ ೪೦-೫೦ ರು. ನೀಡಬೇಕಾಯಿತು.

ಶಿವಮೊಗ್ಗ: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಶಿವಮೊಗ್ಗ ಭಾವನ ವತಿಯಿಂದ “ಸಂಕ್ರಾಂತಿ ಸಂಭ್ರಮ” ಸಂಕ್ರಾಂತಿ ಹಬ್ಬದ ಆಚರಣೆಯನ್ನು ವಿಜೃಂಭಣೆಯಿಂದ ಸಾಂಪ್ರದಾಯಿಕ ಬದ್ಧವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸುಗ್ಗಿ ಹಾಡುಗಳ ಗಾಯನ ಸ್ಪರ್ಧೆ ಯನ್ನು ಏರ್ಪಡಿಸಲಾಗಿತ್ತು. ವರದ ತಂಡ ಪ್ರಥಮ, ಕಾವೇರಿ ತಂಡ ದ್ವಿತೀಯ ಹಾಗೂ ಗಂಗಾ ತಂಡ ತೃತೀಯ ಬಹುಮಾನವನ್ನು ಪಡೆದರು. ಭಾವನಾದ ಅಧ್ಯಕ್ಷೆ ಸೀನಿಯರ್ ಸುರೇಖಾ ಮುರುಳಿಧರ್, ಪುಷ್ಪಾ ಶೆಟ್ಟಿ, ಮೃದುಲಾ ಮಂಜುನಾಥ್, ಉಮಾ ಚಂದ್ರಪ್ಪ , ಭವಾನಿ ಶಶಿಧರ್, ಉಮಾ ಮೂರ್ತಿ, ವಾಸಂತಿ, ಶೋಭಾ, ಜಯಲಕ್ಷ್ಮಿ ಚಂದ್ರಹಾಸ, ಇನ್ನೂ ಹಲವಾರು ಸದಸ್ಯರು ಒಡಗೂಡಿ ಸಂಭ್ರಮಿಸಿದರು.

ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿಯೂ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ರೈತರು ತಮ್ಮ ಕೃಷಿ ಪರಿಕರಗಳನ್ನು ಶುಚಿಗೊಳಿಸಿ ಪೂಜಿಸಿದರು.


ವಿಶೇಷ ಪೂಜೆ: ಸಂಕ್ರಾಂತಿ ಹಬ್ಬದ ಪ್ರಯುಕ್ತ ನಗರದ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆ ನಡೆಯಿತು. ಅಲ್ಲದೆ, ದೇವರಿಗೆ ವಿಶೇಷ ರೀತಿಯಲ್ಲಿ ಅಲಂಕಾರ ಮಾಡಲಾಗಿತ್ತು. ಭಕ್ತರು ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಹುತೇಕ ಎಲ್ಲರ ಮನೆಗಳಲ್ಲಿ ಮಧ್ಯಾಹ್ನದ ಊಟಕ್ಕೆ ವಿಶೇಷ ಅಡುಗೆಯನ್ನು ಸಿದ್ಧಪಡಿಸಲಾಗಿತ್ತು.
ಎಳ್ಳು-ಬೆಲ್ಲ ಹಂಚಿ ಸಂಭ್ರಮ: ಸಂಕ್ರಾಂತಿ ಎಂದರೆ ತಮ್ಮ ಸ್ನೇಹಿತರಿಗೆ, ಅಕ್ಕಪಕ್ಕದ ನಿವಾಸಿಗಳಿಗೆ ಎಳ್ಳು-ಬೆಲ್ಲ ಹಂಚ್ಚುವುದು ಹಿಂದಿನಿಂದ ನಡೆದು ಬಂದ ಪದ್ಧತಿ. ಅದರಂತೆ ವಿಶೇಷವಾಗಿ ಹೆಣ್ಣು ಮಕ್ಕಳು ಎಳ್ಳು-ಬೆಲ್ಲ ದ ಜೊತೆಗೆ ಕಬ್ಬಿನ ತುಂಡನ್ನು ನೆರೆಹೊರೆಯವರಿಗೆ, ಸ್ನೇಹಿತರಿಗೆ ಹಂಚುವ ಮೂಲಕ ಸಂಭ್ರಮಿಸಿದರು.

Exit mobile version