ಶಿವಮೊಗ್ಗ,ಜ.೧೫ : ಯಾರೋ ಮಾಡಿದ ಕೆಲಸವನ್ನು ನಮ್ಮದೆಂದು ಹೇಳಿಕೊಂಡು ರಿಬ್ಬನ್ ಕಟ್ ಮಾಡುವ ದಾರಿದ್ರ್ಯ ನನಗೆ ಬಂದಿಲ್ಲ. ಇದನ್ನು ತಿಳಿಯದೆ ಸಚಿವ ಮಧು ಬಂಗಾರಪ್ಪನವರು ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿರುಗೇಟು ನೀಡಿದರು.
ಇಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ ಹಣ ತಂದಿದ್ದೇವೆ
. ಕಾಮಗಾರಿ ಮಾಡಿಸಿದ್ದೇವೆ. ಪರಿಶೀಲನೆಯನ್ನೂ ಮಾಡುತ್ತೇವೆ. ಉದ್ಘಾಟನೆಯನ್ನೂ ಮಾಡುತ್ತೇವೆ. ಇದನ್ನು ಸಹಿಸದೆ ಅಲ್ಲಿಗೆ ಏಕೆ ಹೋಗಿದ್ದೀರಿ ಎಂದು ಅಧಿಕಾರಿಗಳಿಗೆ ಧಮಕಿ ಹಾಕುತ್ತಿದ್ದಾರೆ ಎಂದರು.
ಇವರ ’ಧಮಕಿಗೆ ಹೆದರಿ ಬಿಎಸ್‌ಎನ್‌ಎಲ್ ಟವರ್ ಹಾಕಲು ಅಧಿಕಾರಿಗಳೇ ಬರುತ್ತಿಲ್ಲ. ಹೀಗಾಗಿ ಟವರ್ ಅಳವಡಿಸುವ ಕೆಲಸಕ್ಕೆ ಹಿನ್ನಡೆಯಾಗಿದೆ. ಆದರೂ ೪೦ ಟವರ್ ಅಳವಡಿಸಲು ಅರಣ್ಯ ಇಲಾಖೆಯಿಂದ ಎನ್‌ಓಸಿ ಕೊಡಿಸಲಾಗಿದೆ. ಅಧಿಕಾರಿಗಳಿಗೆ ಹೆದರಿಸುವುದು ಬಿಟ್ಟು ಜಿಲ್ಲೆಗೆ ಬೇಕಾದ ಯೋಜನೆಗಳನ್ನು ತರಲಿ ಎಂದು ಸವಾಲು ಹಾಕಿದರು.
ಕಳೆದ ೧೨ ವರ್ಷಗಳಲ್ಲಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಸರ್ಕಾರದ ಕೊಡುಗೆ ಏನು ಎಂಬುದನ್ನು ಹೇಳಲಿ. ಮೆಡಿಕಲ್ ಕಾಲೇಜು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಆಯುರ್ವೇದ ವಿಶ್ವವಿದ್ಯಾಲಯ, ವಿಮಾನ ನಿಲ್ದಾಣ ಮಾಡಿದ್ದು ನಮ್ಮ ಕಾಲದಲ್ಲಿ. ರಾಷ್ಟ್ರೀಯ ಹೆದ್ದಾರಿಗೆ ೧೫ ಸಾವಿರ ಕೋಟಿ ರೂ. ಕೇಂದ್ರದಿಂದ ತರಲಾಗಿದೆ ಎಂದರು.
ಜಿಲ್ಲೆಯ ೧೦ ಕಡೆಗಳಲ್ಲಿ ನಡೆಯುತ್ತಿರುವ ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ಸಂಬಂಸಿದಂತೆ ಬಿಡುಗಡೆಯಾದ ಅನುದಾನವನ್ನು ವಾಪಸ್ ಪಡೆಯುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಇದು ಇವರ ಅಭಿವೃದ್ಧಿಯ ಕಾರ್ಯವೈಖರಿ. ಪಾಪ ಮಧುಬಂಗಾರಪ್ಪ ಮೊದಲು ಹೀಗೆ ಇರಲಿಲ್ಲ. ಆದರೆ ಈಗ ಕಿವಿ ಕಚ್ಚುವವರಿಂದ ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದರು.
ಅಲ್ಲಮ ಪ್ರಭು ಜನ್ಮ ಸ್ಥಳ ಬಳ್ಳಿಗಾವಿಗೆ ಹೋಗಿರುವ ಸಚಿವರು ಆ ಸ್ಥಳ ಅಭಿವೃದ್ಧಿಯಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗಲಾದರೂ ಅವರಿಗೆ ಅಭಿವೃದ್ಧಿ ಮಾಡುವ ಆಸಕ್ತಿ ಬಂದಿದೆಯಲ್ಲ ಎಂಬ ಹೆಮ್ಮೆಯಾಗುತ್ತಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ೨.೫ ಕೋಟಿ ರೂ. ನೀಡಿದ್ದು, ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಎಂಬುದನ್ನು ಅವರು ತಿಳಿದುಕೊಳ್ಳಬೇಕೆಂದು ಹೇಳಿದರು.
ಮೊದಲು ೧ ಕೋಟಿ ರೂ. ನೀಡಲಾಗಿತ್ತು. ಬಳಿಕ ಇನ್ನೊಂದು ಕೋಟಿ ರೂ. ನೀಡಲಾಗಿದೆ. ಅಲ್ಲಿನ ಶ್ರೀಗಳಿಗೆ ೫೦ ಲಕ್ಷ ರೂ. ನೀಡಲಾಗಿದೆ. ಅವರು ಅಭಿವೃದ್ಧಿ ಮಾಡಬೇಕು. ಇಡೀ ಊರು ಆರ್ಕ್ಯಾಲಜಿ ಇಲಾಖೆಯ ಹೆಸರಿನಲ್ಲಿದೆ. ಹೀಗಾಗಿ ಅಭಿವೃದ್ಧಿ ಗೆ ಹಿನ್ನಡೆಯಾಗುತ್ತಿದೆ ಎಂದರು.