ಶಿವಮೊಗ್ಗ,ಜ.೧೫: ರಾಜ್ಯದಲ್ಲಿ ಇನ್ನೂ ಬಿಜೆಪಿ ಸರ್ಕಾರವೇ ಇದೆ ಎಂಬ ಭ್ರಮೆಯಲ್ಲಿ ಸಂಸದ ರಾಘವೇಂದ್ರ ತೇಲುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ವ್ಯಂಗ್ಯವಾಡಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಘವೇಂದ್ರ ಅವರಿಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಜಿಲ್ಲೆಯಲ್ಲಿ ನಾನೊಬ್ಬ ಉಸ್ತುವಾರಿ ಸಚಿವ ಇದ್ದೇನೆ ಎಂಬ ಅರಿವು ಇದ್ದಂತೆ ಇಲ್ಲ. ಯಾವುದೇ ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳದಿದ್ದರು ಟೇಪ್ ಕಟ್‌ಮಾಡುವ ಹುಚ್ಚಾಟ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಕೆಲಸವಾದರು ಅವು ರಾಜ್ಯ ಸರ್ಕಾರದ ಅಡಿಯಲ್ಲಿಯೇ ಬರುತ್ತವೆ. ಯಾವುದೇ ಕಾರ್ಯಕ್ರಮವೇ ಆಗಲಿ ಉದ್ಘಾಟನೆ ಆಗಬೇಕಾದರೆ ಅದಕ್ಕೊಂದು ನಿಯಮ ಇರುತ್ತದೆ, ಸಂಪ್ರದಾಯವಿರುತ್ತದೆ. ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟನೆ ಮಾಡುವ ವಿಚಾರದಲ್ಲಿ ಸಂಸದರಿಗೆ ದುರ್ಬುದ್ಧಿ ಬಂದಿದೆಯೋ ಗೊತ್ತಿಲ್ಲ. ಬೈಪಾಸ್ ಸೇತುವೆಯನ್ನು ತಾವೇ ಹೋಗಿ ಉದ್ಘಾಟನೆ ಮಾಡಿದ್ದಾರೆ ಎಂದು ಟೀಕಿಸಿದರು.
ಯಾವುದೇ ಸೇತುವೆ, ಹೆದ್ದಾರಿಗಳಾಗಲಿ ಕೇವಲ ಕೇಂದ್ರ ಸರ್ಕಾರದ ಹಣದಿಂದ ಮಾತ್ರ ಆಗುವುದಿಲ್ಲ. ಅದರಲ್ಲಿ ರಾಜ್ಯ ಸರ್ಕಾರದ ಪಾತ್ರವೂ ಇರುತ್ತದೆ. ನಮ್ಮ ರಾಜ್ಯದ ಭೂಮಿ ನಮ್ಮ ಹಣವು ಇದಕ್ಕೆ ಖರ್ಚಾಗಿದೆ. ಜಿಲ್ಲಾಡಳಿತವಿದೆ, ಜಿಲ್ಲಾ ಉಸ್ತುವಾರಿ ಸಚಿವರು ಇದ್ದಾರೆ, ಆದರೆ, ಇದೆಲೆವನ್ನು ಮರೆತ ಸಂಸದರು ಚುನಾವಣೆ ಬರುತ್ತಿದ್ದಂತೆಯೇ ಇಂತಹ ಭ್ರಮೆಯಲ್ಲಿ ತೇಲುತ್ತಿದ್ದಾರೆ ಎಂದರು.
ಕೇಂದ್ರ ಸರ್ಕಾರದ ಯೋಜನೆಗಳೆಲ್ಲವೂ ಅತಿ ದುಬಾರಿಗಳಾಗುತ್ತ ಬಂದಿವೆ. ಪ್ರತಿ ಯೋಜನೆಗಳಲ್ಲಿ ಯೋಜನೆ ಮೊತ್ತ ಒಂದಾದರೆ, ಅದರ ಪರಿಷ್ಕರಣ ಮೊತ್ತ ಇನ್ನೊಂದಾಗಿರುತ್ತದೆ. ವಿಮಾನ ನಿಲ್ದಾಣಕ್ಕೆ ೧೭೨ ಕೋಟಿ ಇತ್ತು, ಆದರೆ ಈಗ ೪೫೦ ಕೋಟಿ ಆಗಿದೆ. ಆದರೆ, ಇದರ ಜೊತೆಗೆಯೇ ಕಲ್ಬುರ್ಗಿಯಲ್ಲೂ ಕೂಡ ವಿಮಾನ ನಿಲ್ದಾಣಕ್ಕೆ ೨೦೦ ಕೋಟಿ ಇತ್ತು. ಆ ೨೦೦ ಕೋಟಿಯಲ್ಲಿಯೇ ಮಾಡಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿಗಳಲ್ಲಿ ಬಹಳ ಅವ್ಯವಹಾರ ನಡೆದಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಈಗಾಗಲೇ ಸರ್ಕಾರಕ್ಕೆ ನಾನು ಪತ್ರ ಬರೆದಿದ್ದೇನೆ. ಶಿವಮೊಗ್ಗದ ವಿಮಾನ ನಿಲ್ದಾಣ ಕುರಿತಂತೆ ಸಮಗ್ರ ತನಿಖೆಗೆ ಆಗ್ರಹಿಸಿದ್ದೇನೆ ಎಂದರು.
ಕೇವಲ ಶಿವಮೊಗ್ಗದ ವಿಮಾನ ನಿಲ್ದಾಣ ಮಾತ್ರವಲ್ಲ, ಇಲ್ಲಿ ಹೆದ್ದಾರಿ ಕಾಮಗಾರಿಗಳು ಆಗಿವೆ. ಮುಖ್ಯವಾಗಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳು ಕಳಪೆ ಮತ್ತು ಅವ್ಯವಹಾರದಿಂದ ಕೂಡಿವೆ ಎಂದು ಸಾಕಷ್ಟು ದೂರುಗಳು ಬಂದಿವೆ. ಇವುಗಳನ್ನು ಕೂಡ ತನಿಖೆ ಮಾಡಲಾಗುವುದು. ಈಗಾಗಲೇ ಮುಖ್ಯಮಂತ್ರಿಗಳಿಗೆ ಈ ವಿಷಯ ತಿಳಿಸಿ ತನಿಖೆಗೆ ಆಗ್ರಹಿಸಿದ್ದೇನೆ ಎಂದರು.
ಬಿಜೆಪಿಯವರು ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿನಿತ್ಯ ಟೀಕೆ ಮಾಡುತ್ತಿದ್ದಾರೆ. ಆದರೆ, ಇದರ ಲಾಭವನ್ನು ಪಡೆಯುತ್ತಿರುವವರು ಶೇ.೭೦ ರಷ್ಟು ಬಿಜೆಪಿ ಕಾರ್ಯಕರ್ತರೇ ಆಗಿದ್ದಾರೆ. ನಾವು ಒಂದು ಕುಟುಂಬಕ್ಕೆ ಎಲ್ಲಾ ಯೋಜನೆಗಳನ್ನು ಸೇರಿ ಕನಿಷ್ಠ ೫೦೦೦ ರೂ. ನೀಡುತ್ತೇವೆ. ಬಿಜೆಪಿ ಸರ್ಕಾರಕ್ಕೆ ಇದು ನುಂಗಲಾರದ ತುತ್ತಾಗಿದೆ ಎಂದರು.
ಯುವನಿಧಿ ಕಾರ್ಯಕ್ರಮ ಒಂದು ಐತಿಹಾಸಿಕ ಕಾರ್ಯಕ್ರಮವಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂಸದರು ಮುಖ್ಯಮಂತ್ರಿಗಳನ್ನು, ಯೋಜನೆಯನ್ನು ಹೊಗಳಿದ್ದರು. ಆದರೆ, ಮಾರನೇ ದಿನವೇ ಮಾಧ್ಯಮಗಳ ಮುಂದೆ ಟೀಕೆ ಮಾಡಿದ್ದಾರೆ. ಇದು ದ್ವಂದ್ವ ನಿಲುವಲ್ಲದೇ ಮತ್ತೇನು ಅಲ್ಲ. ಆ ಯುವ ಸಮುದಾಯದ ಜನಸಾಗರವನ್ನು ನೋಡಿ, ಸಂಸದರಷ್ಟೇ ಅಲ್ಲ ಶಾಸಕರು ಎದರಿದ್ದಾರೆ. ಮಾರನೇ ದಿನವೇ ಉಲ್ಟಾ ಹೊಡೆದಿದ್ದಾರೆ ಎಂದರು.
ಅಲ್ಲಮನ ಜನ್ಮಸ್ಥಳ ಯಾಕೇ ಇನ್ನೂ ಅಭಿವೃದ್ಧಿಯಾಗಿಲ್ಲ. ಶಿಕಾರಿಪುರ ತಾಲ್ಲೂಕಿನಲ್ಲಿರುವ ಯಾವ ಶರಣಗಳ ಕೇಂದ್ರಗಳು ಇದುವರೆಗೂ ಅಭಿವೃದ್ಧಿ ಆಗಿಲ್ಲ, ಇದಕ್ಕೆ ಅಲ್ಲಿನ ನಾಯಕರೇ ಉತ್ತರ ಹೇಳಬೇಕು. ಈಗಾಗಲೇ ಫ್ರೀಡಂ ಪಾರ್ಕ್‌ಗೆ ಅಲ್ಲಮಪ್ರಭು ಹೆಸರಿಡಲು ಮುಖ್ಯಮಂತ್ರಿಗಳು ಒಪ್ಪಿದ್ದಾರೆ. ಅವರಿಗೆ ಅಭಿನಂದನೆಗಳು, ಅಲ್ಲಮ ಹೆಸರಿನಲ್ಲಿಯೇ ಅಲ್ಲಾ, ಅಮ್ಮ, ಪ್ರಭು ಇದ್ದು. ಇದು ಮೂರು ಧರ್ಮಗಳ ಸಂಕೇತವಾಗಿದೆ. ಇದು ನನ್ನ ಅಭಿಪ್ರಾಯ ಎಂದರು.
ಭಾರತ್ ಜೋಡೋ ನ್ಯಾಯ್ ಯಾತ್ರೆ ಆರಂಭವಾಗಿದ್ದು, ಅದನ್ನು ನಾವು ಸ್ವಾಗತಿಸುತ್ತಿದ್ದೇವೆ. ರಾಜ್ಯದ ನಾಯಕರ ಜೊತೆ ನಾನು ಕೂಡ ರಾಹುಲ್ ಅವರ ಜೊತೆ ಹೆಜ್ಜೆ ಹಾಕುತ್ತೇವೆ. ರಾಹುಲ್ ಅವರ ಪ್ರತಿಯೊಂದು ಹೆಜ್ಜೆಯೂ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ. ಬಿಜೆಪಿಯ ಧರ್ಮಾಧಾರಿತ ರಾಜ್ಯಕಾರಣ ಕೊನೆಯಾಗುವ ಕಾಲ ದೂರವಿಲ್ಲ. ನಾವು ರಾಮನ ಭಕ್ತರು, ಹನುಮಂತನ ಭಕ್ತರು, ಲಕ್ಷ್ಮಣನ ಭಕ್ತರು ಕೂಡ. ರಾಮ ಯಾರ ಸ್ವತ್ತು ಅಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹೆಚ್.ಎಸ್.ಸುಂದರೇಶ್, ಆಯನೂರು ಮಂಜುನಾಥ್, ಎನ್.ರಮೇಶ್, ಕಲ್ಗೋಡು ರತ್ನಾಕರ್, ವೈ.ಹೆಚ್.ನಾಗರಾಜ್, ಜಿ.ಡಿ.ಮಂಜುನಾಥ್, ವೈ.ಬಿ.ಚಂದ್ರಕಾಂತ್, ಇಕ್ಕೇರಿ ರಮೇಶ್, ಶಿವಾನಂದ, ಎಸ್.ಕೆ. ಮರಿಯಪ್ಪ ಸೇರಿದಂತೆ ಹಲವರಿದ್ದರು.