ಶಿವಮೊಗ್ಗ, ಜ.೧೨:
ಹಸಿದವನಿಗೆ ಅನ್ನ ನೀಡದ ಯಾವುದೇ ಜಾತಿ, ಸಮಾಜದ ಬಗ್ಗೆ ನನಗೆ ನಂಬಿಕೆ ಇಲ್ಲ ಎಂದು ಸಂತ ಸ್ವಾಮಿ ವಿವೇಕಾನಂದರು ಹೇಳಿದ ಮಾತನ್ನು ಕಾಂಗ್ರೆಸ್ ಪಕ್ಷ ಗೌರವಿಸುತ್ತದೆ. ೧೯೮೫ ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ಸ್ವಾಮಿ ವಿವೇಕಾ ನಂದ ಜಯಂತಿ ಆಚರಿಸಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಜನ್ಮದಿನವಾದ ಇಂದು ಯುವಕ ಯುವತಿಯರು ಸಾಮಾಜಿಕ, ಆರ್ಥಿಕವಾಗಿ ಭ್ರಮನಿರಸವಾಗಬಾರದೆಂಬ ಮಹತ್ವಾಕಾಂಕ್ಷೆಯೊಂದಿಗೆ ಯುವನಿಧಿ ಕಾರ್ಯಕ್ರಮ ಮೂಲಕ ಶಕ್ತಿ ತುಂಬುವ ಕಾರ್ಯ ಪ್ರಾರಂಭಿಸಲಾಗಿದೆ. ಸಂವಿಧಾನದ ಆಶಯ, ಧ್ಯೇಯೋದ್ದೇಶಗಳನ್ನು ಸಾಕಾರಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಇಲ್ಲಿನ ಫ್ರೀಡಂ ಪಾರ್ಕ್ ಆವರಣದಲ್ಲಿ ಆಯೋಜಿ ಸಿದ್ದ ಯುವನಿಧಿ ಯೋಜನೆಗೆ ಭತ್ತ ತುಂಬಿದ ಕೊಳಗದಲ್ಲಿ ಹೊಂಬಾಳೆ ಅನಾವರಣ ಮಾಡುವ ಮೂಲಕ ಚಾಲನೆ ನೀಡಿದರು. ರಾಷ್ಟ್ರೀಯ ಯುವದಿನದ ಅಂಗವಾಗಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಅವರು ಮಾತನಾಡಿದರು,
ರಾಜ್ಯದಲ್ಲಿ ಸುಮಾರು ೧.೫ ಕೋಟಿ ಕುಟುಂಬಗಳು ಸರ್ಕಾರದಿಂದ ಪ್ರತಿ ತಿಂಗಳು ಸರಾಸರಿ ೫ ರಿಂದ ೬ ಸಾವಿರ ರೂ. ಧನ ಸಹಾಯ ಪಡೆಯುತ್ತಿವೆ. ಇದನ್ನು ಜಾಗತಿಕ ಮೂಲ ಆದಾಯ ಎಂದು ವಿದೇಶಗಳಲ್ಲಿ ಕರೆಯಲಾಗುತ್ತದೆ.ಕುಟುಂಬದ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ದೇಶದ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ. ಈ ವಿಚಾರ ಗಳಲ್ಲಿ ನಂಬಿಕೆಯಿಟ್ಟುಕೊಂಡು ಅಸಮಾನತೆ ನಿವಾರಿಸುವ ನಿಟ್ಟಿನಲ್ಲಿ ನಾವು ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ಇಲ್ಲವಾದರೆ ಡಾ.ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ ಅಸಮಾನ ತೆಯಿಂದ ನರಳುವ ಜನ ಪ್ರಭುತ್ವದ ವಿರುದ್ಧ ಜನ ದಂಗೆ ಏಳುತ್ತಾರೆ ಎಂದು ಎಚ್ಚರಿಸಿದ್ದರು. ನಮ್ಮ ಸರ್ಕಾರ ಈ ಎಚ್ಚರಿಕೆಯಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ. ಸಂವಿಧಾನದ ಆಶಯ, ಧ್ಯೇಯೋದ್ದೇಶಗಳನ್ನು ಈಡೇರಿ ಸುವ ಕಾರ್ಯಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.
ಚುನಾವಣೆ ಸಂದರ್ಭದಲ್ಲಿ ನಾವು ನೀಡಿದ ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಕೂಡಲೇ ಜಾರಿ ಮಾಡುತ್ತೇವೆ ಎಂದು ಹೇಳಿರಲಿಲ್ಲ. ಐದು ವರ್ಷದ ಕಾಲಾವಕಾಶ ನಮಗಿತ್ತು. ನಮ್ಮ ನಾಡಿನ ಬಡವರು, ಹಿಂದುಳಿದವರು, ಮಹಿಳೆಯರು ಈ ಬೆಲೆ ಏರಿಕೆಯ ಕಾಲದಲ್ಲಿ ಅವರ ಕೊಂಡುಕೊಳ್ಳುವ ಸಾಮರ್ಥ್ಯ ಹೆಚ್ಚಿಸಬೇಕೆಂಬ ಮಹತ್ವಾಕಾಂಕ್ಷೆ ಯೊಂದಿಗೆ ಅಧಿಕಾರಕ್ಕೆ ಬಂದ ಕೂಡಲೇ ಈ ಎಲ್ಲಾ ಐದು ಕಾರ್ಯಕ್ರಮಗಳನ್ನು ಜಾರಿಗೊ ಳಿಸುವ ಮೂಲಕ ನುಡಿದಂತೆ ನಡೆದುಕೊಂ ಡಿದ್ದೇವೆ. ಯುವನಿಧಿ ಕಾರ್ಯಕ್ರಮದ ಮೂಲಕ ೨೦೨೩ ರಲ್ಲಿ ಪದವಿ ಉತ್ತೀರ್ಣ ರಾದ ಅರ್ಹರಿಗೆ ೩೦೦೦, ಡಿಪ್ಲೋಮಾ ಉತ್ತೀರ್ಣರಾದವರಿಗೆ ೧೫೦೦ ರೂ. ಮಾಸಿಕ ಭತ್ಯೆಯನ್ನು ನೀಡುತ್ತಿರುವುದು ಯುವಜನರ ಬದುಕು ರೂಪಿಸಿಕೊಳ್ಳಲು ನೆರವಾಗಲಿದೆ.
ಅಧಿಕಾರಕ್ಕೆ ಬಂದ ಕೂಡಲೇ ಜಾರಿಗೊಳಿ ಸಿದ ಶಕ್ತಿ ಯೋಜನೆಯಿಂದ ಕಳೆದ ಜೂನ್ ೧೧ ರಿಂದ ಇಲ್ಲಿಯವರೆಗೆ ೧೩೦ .೨೮ ಕೋಟಿ ರೂ.ವೆಚ್ಚದಲ್ಲಿ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಿದ್ದಾರೆ. ಇದೊಂದು ಚಾರಿತ್ರಿಕ ಮಹತ್ವದ ಬೆಳವಣಿಗೆಯಾಗಿದೆ. ಗೃಹಜ್ಯೋತಿ ಯೋಜನೆ ಮೂಲಕ ೧.೬೫ ಕೋಟಿ ಕುಟುಂಬಗಳು ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿವೆ.ಗೃಹಲಕ್ಷ್ಮಿ ಕಾರ್ಯಕ್ರಮದಡಿ ೧.೧೮ ಲಕ್ಷ ಕುಟುಂಬದ ಮಹಿಳಾ ಯಜಮಾನತಿಯರಿಗೆ ಪ್ರತಿ ತಿಂಗಳು ತಲಾ ೨ ಸಾವಿರ ರೂ.ದೊರೆಯುತ್ತಿದೆ. ಅನ್ನಭಾಗ್ಯ ಯೋಜನೆಯಡಿ ಐದು ಕೆ.ಜಿ ಅಕ್ಕಿಯ ಜೊತೆಗೆ ಉಳಿದ ಐದು ಕೆಜಿ ಅಕ್ಕಿಯ ಖರೀದಿಗೆ ಸಹಾಯಧನ ನೀಡಲಾಗುತ್ತಿದೆ ಎಂದರು.
ಇಂದು ಯುವನಿಧಿ ಮೂಲಕ ಭತ್ಯೆ ಜೊತೆಗೆ ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಉದ್ಯೋಗ ಮೇಳದ ಮೂಲಕ ಕೆಲಸ ಕೊಡಿಸುವ ಕಾರ್ಯವನ್ನೂ ಮಾಡುತ್ತೇವೆ. ನಿರುದ್ಯೋಗ ಸಮಸ್ಯೆ ನಿವಾರಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ.೨೦೨೨-೨೩ ರಲ್ಲಿ ೩.೯೬ ಲಕ್ಷ ವಿದ್ಯಾರ್ಥಿಗಳು ಪದವಿ ಹಾಗೂ ೧೮ ಲಕ್ಷ ವಿದ್ಯಾರ್ಥಿಗಳು ಡಿಪ್ಲೋಮಾ ಉತ್ತೀರ್ಣರಾದ ವಿದ್ಯಾರ್ಥಿಗಳಿ ದ್ದಾರೆ. ಅವರೆಲ್ಲ ಈ ಯೋಜನೆಯಡಿ ನೋಂದಾಯಿಸಿಕೊಂಡು ಯುವನಿಧಿ ಸೌಲಭ್ಯ ಪಡೆಯಬೇಕು ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ನೀಡಿದ ಐದು ಗ್ಯಾರಂಟಿಗಳನ್ನು ಇಂದು ನಮ್ಮ ಸರ್ಕಾರ ಐದು ಕಾರ್ಯಕ್ರಮಗಳನ್ನಾಗಿ ಜಾರಿಗೊಳಿಸಿದ್ದೇವೆ. ಈ ಬಸವಣ್ಣ, ಕುವೆಂಪು ಅವರ ನಾಡಿನಲ್ಲಿ ನುಡಿದಂತೆ ನಡೆದ ಹೆಮ್ಮೆ ನಮ್ಮದಾಗಿದೆ. ಈ ಕಾರ್ಯಕ್ರಮಗಳು ಕೇವಲ ಜನರಿಗೆ ಹಣ ನೀಡುವದು ಮಾತ್ರವಲ್ಲ, ಅವರ ಬದುಕಿಗೆ ಭರವಸೆ ತುಂಬುವುದಾಗಿದೆ. ನುಡಿದಂತೆ ನಡೆದ ಈ ಸರ್ಕಾರ ಇಡೀ ದೇಶಕ್ಕೆ ಮಾದರಿಯಾಗಿದೆ. ಯುವನಿಧಿಯ ಕಾರ್ಯಕ್ರಮದಿಂದ ಕೇವಲ ಉದ್ಯೋಗ ಗಳಿಸುವುದಷ್ಟೇ ಅಲ್ಲ ಯುವಜನರು ಕೌಶಲ್ಯ ಬೆಳೆಸಿಕೊಂಡು ಹತ್ತಾರು ಜನರಿಗೆ ಉದ್ಯೋಗ ನೀಡುವ ಉದ್ಯಮಿಗಳಾಗಬೇಕು ಎಂದು ಕಿವಿಮಾತು ಹೇಳಿದರು. ಗೃಹಜ್ಯೋತಿ ಮೂಲಕ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಸುಮಾರು ಒಂದರಿಂದ ಒಂದೂವರೆ ಸಾವಿರ ರೂ.ಲಾಭ ತಲುಪುತ್ತಿದೆ. ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ ಯೋಜನೆಗಳ ಮೂಲಕ ಜನಸಾಮಾನ್ಯರ ಜೀವನಮಟ್ಟದಲ್ಲಿ ಸಾಕಷ್ಟು ಚೇತರಿಕೆ ಕಂಡು ಬರುತ್ತಿರುವುದು ಅಸಾಮಾನ್ಯ ಸಂಗತಿಯಾಗಿದೆ ಎಂದರು.
ಶಾಲಾಶಿಕ್ಷಣ, ಸಾಕ್ಷರತೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಮಾತನಾಡಿ, ಹೋರಾ ಟದ ನೆಲ, ಸರ್ವಜನಾಂಗದ ಶಾಂತಿಯ ತೋಟ ಎಂದು ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರ ಜಿಲ್ಲೆಯಲ್ಲಿ, ಸ್ವಾಮಿ ವಿವೇಕಾನಂದರ ಜನ್ಮದಿನದಂದು ಮಲೆನಾಡಿನಿಂದ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ಜಾರಿಯಾಗುತ್ತಿರುವುದು ಐತಿಹಾಸಿಕ ಮತ್ತು ಹೆಮ್ಮೆಯ ಸಂಗತಿಯಾಗಿದೆ ಎಂದರು. ಶಿವಮೊಗ್ಗ ನಗರದ ಹಳೆಯ ಜೈಲು ಕಟ್ಟಡದ ಈ ಆವರಣಕ್ಕೆ ೧೨ ನೇ ಶತಮಾನದ ಶೂನ್ಯ ಸಿಂಹಾಸನಾಧ್ಯಕ್ಷ,ವೈರಾಗ್ಯನಿಧಿ ಅಲ್ಲಮಪ್ರಭು ಅವರ ನಾಮಕರಣ ಮಾಡಬೇಕು ಹಾಗೂ ಮಲೆನಾಡಿನ ಅರಣ್ಯಪ್ರದೇಶಗಳಲ್ಲಿ ಕೃಷಿಸಾಗು ವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡುವ ಮೂಲಕ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಮುಖ್ಯ ಮಂತ್ರಿಯವರಲ್ಲಿ ಮನವಿ ಮಾಡಿದರು.
ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ ಸೇಡಂ ಮಾತನಾಡಿ, ಯುವನಿಧಿ ಯೋಜನೆಗೆ ಈಗಾಗಲೇ ಸುಮಾರು ೭೦ ಸಾವಿರ ವಿದ್ಯಾರ್ಥಿ ವಿದ್ಯಾರ್ಥಿನಿಯರು ನೋಂದಾಯಿಸಿ ಕೊಂಡಿದ್ದರು. ಪದವಿ,ಡಿಪ್ಲೋಮಾ ವ್ಯಾಸಂಗ ಮಾಡುತ್ತಿರುವ ಯುವಕರು ಕೂಡ ಯೋಜನೆ ಬಗ್ಗೆ ತಿಳಿದುಕೊಳ್ಳಬೇಕು.ಯುವ ನಿರುದ್ಯೋ ಗಿಗಳಿಗೆ ಕೇವಲ ಭತ್ಯೆ ನೀಡುವುದಷ್ಟೆ ಅಲ್ಲ, ಶಿಕ್ಷಿತ ಯುವಕರಿಗೆ ಕೌಶಲ್ಯ ತರಬೇತಿ ನೀಡಿ ರಾಜ್ಯ, ರಾಷ್ಟ್ರ, ವಿದೇಶಗಳಲ್ಲಿ ಉದ್ಯೋಗ ಒದಗಿಸುವ ಕೌಶಲ್ಯಾಭಿ ವೃದ್ಧಿ ಇಲಾಖೆಯ ಕಾರ್ಯಕ್ರಮಕ್ಕೆ ಸೇವಾ ಸಿಂಧು ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಸ್ವಾವಲಂಬನೆಯ ಯುವಸಮುದಾಯಕ್ಕೆ ಆರ್ಥಿಕ ಶಕ್ತಿ ನೀಡಿ ಪ್ರೋತ್ಸಾಹಿಸುವ ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮವನ್ನು ಯುವಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ನಿರುದ್ಯೋಗಿ ಯುವಕರ ಕೈಗೆ ಭತ್ಯೆ ಮಾತ್ರವಲ್ಲ , ಸ್ವಾವಲಂಬಿಯಾಗಿ ಬದುಕುವ ಕೌಶಲ್ಯಗಳನ್ನು ಕಲಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜ ನೆಗಳಡಿ ಅವರನ್ನು ತರಬೇತುಗೊಳಿಸಿ, ಸ್ವಯಂ ಉದ್ಯೋಗ ಕೈಗೊಳ್ಳಲು ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕಿನ ಸಾಲ ಪಡೆಯುವ ಕಾರ್ಯಕ್ಕೆ ನೆರವಾಗಬೇಕು ಎಂದರು. ಶಿವಮೊಗ್ಗದ ಕೃಷಿ ವಿವಿಗೆ ಇರುವಕ್ಕಿ ಬಳಿ ಮೂಲಸೌಕರ್ಯಗಳ ಅಭಿವೃದ್ಧಿ, ಶಿವಮೊಗ್ಗ ವಿಮಾನ ನಿಲ್ದಾಣದ ಬಳಿ ಆಯುರ್ವೇದ ವಿವಿ ಸ್ಥಾಪನೆಗೆ ಮುಂಬರುವ ಬಜೆಟ್‌ನಲ್ಲಿ ಹಣ ಮೀಸಲಿಡಬೇಕು. ವಿಮಾನ ನಿಲ್ದಾಣದಲ್ಲಿ ಸೌಲಭ್ಯಗಳನ್ನು ಅಭಿವೃದ್ಧಿಪಡಿ ಸಬೇಕು. ಶರಾವತಿ ಹಿನ್ನೀರಿನ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ನೀಡಲು ಉಂಟಾಗಿರುವ ತಾಂತ್ರಿಕ ತೊಂದರೆ ನಿವಾರಿಸಬೇಕು ಎಂದು ಮುಖ್ಯಮಂತ್ರಿಯ ವರಲ್ಲಿ ಮನವಿ ಮಾಡಿದರು.
ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಪ್ರೀಡಂ ಪಾರ್ಕ್‌ಗೆ ಈಗಾಗಲೇ ಹಿಂದಿನ ಮುಖ್ಯಮಂತ್ರಿ ಅವರು ಸ್ವಾತಂತ್ರ ಹೋರಾಟಗಾರ ಚಂದ್ರಶೇಕರ್ ಅಜಾದ್ ಅವರ ಹೆಸರನ್ನು ಇಟ್ಟಿದ್ದಾರೆ. ಹಾಗಾಗೀ ಅದೇ ಇರಲಿ ಎಂದರು.
ಯುವನಿಧಿಯ ಫಲಾನುಭವಿಗಳಾದ ಶಿವಮೊಗ್ಗ ಸೇರಿದಂತೆ ಬಿಜಾಪುರ, ಗುಲ್ಬರ್ಗ, ದಾವಣಗೆರೆ, ಚಿತ್ರದುರ್ಗ, ಹಾವೇರಿಯ ಪುನೀತ್, ದರ್ಶನ್, ಪ್ರಜ್ವಲ್, ಪೂಜಾ ಸೇರಿದಂತೆ ಇತರರಿಗೆ ಸಾಂಕೇತಿಕವಾಗಿ ಚೆಕ್ ವಿತರಿಸಲಾಯಿತು.
ಸಚಿವರಾದ ಡಾ.ಎಂ.ಸಿ.ಸುಧಾಕರ್, ಕೆ.ಜೆ.ಜಾರ್ಜ್, ಬಿ.ನಾಗೇಂದ್ರ, ಮಂಕಾಳ ವೈದ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಬಿ.ಕೆ.ಸಂಗಮೇಶ, ಡಿ.ಜಿ.ಶಾಂತನಗೌಡ, ಶಾರದಾ ಪೂರ್ಯಾನಾಯಕ್, ಡಿ.ಎಸ್.ಅರುಣ್, ಟಿ.ಡಿ. ರಾಜೇಗೌಡ, ಜಿ.ಹೆಚ್.ಶ್ರೀನಿವಾಸ, ಹೆಚ್.ಡಿ. ತಮ್ಮಯ್ಯ, ಭೀಮಣ್ಣನಾಯ್ಕ ಮತ್ತಿತರರಿದ್ದರು. ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ವೇದಿಕೆಯಲ್ಲಿದ್ದರು.