Site icon TUNGATARANGA

ಬಾಕಿ ಉಳಿಸಿ ರಾಜ್ಯವನ್ನು ದಿವಾಳಿ ಮಾಡಿದ್ದ ಬಿಜೆಪಿಯವರೇ ನಮ್ಮ ಗ್ಯಾರಂಟಿ ಪಲಾನುಭವಿಗಳು/ ಸಿಎಂ ಸಿದ್ದರಾಮಯ್ಯರ ಚಟಾಕಿಗೆ ಬಿಜೆಪಿ ತಂಡಾ!


ಬೆಂಗಳೂರು ಜ 10: ರಾಜ್ಯದ 4 ಕೋಟಿ 30 ಲಕ್ಷ ಕನ್ನಡಿಗರಿಗೆ ಸರ್ಕಾರದ ಗ್ಯಾರಂಟಿಯ ಫಲ ಪ್ರತೀ ದಿನ-ಪ್ರತೀ ತಿಂಗಳು ತಲುಪುತ್ತಿದೆ. ಈ ಫಲಾನುಭವಿಗಳಲ್ಲಿ BJPಯವರೇ ಹೆಚ್ಚಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
KPCC ವತಿಯಿಂದ ಇಂದಿರಾಗಾಂಧಿ ಭವನದ ಭಾರತ್ ಜೋಡೋ ಸಭಾಂಗಣದಲ್ಲಿ ನಡೆದ ಪಕ್ಷದ ಮುಖಂಡರ ಮಧ್ಯಾಹ್ನದ ಸಭೆಯಲ್ಲಿ ಮಾತನಾಡಿದರು.


ಪಕ್ಷದ ಕಾರ್ಯಕರ್ತರೇ ನಮ್ಮ ಬೆನ್ನೆಲುಬು. ನಿಮ್ಮ ಹೋರಾಟದಿಂದ ಪಕ್ಷ ಅಧಿಕಾರಕ್ಕೆ ಬಂದಿದೆ.
ವಾಮ ಮಾರ್ಗದಲ್ಲಿ ಮೂರೂವರೆ ವರ್ಷ ಅಧಿಕಾರ ನಡೆಸಿದ ಬಿಜೆಪಿ ಮಾಡಬಾರದ್ದನ್ನೆಲ್ಲಾ ಮಾಡಿ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದಾರೆ.


ನೀರಾವರಿ ಇಲಾಖೆಯೊಂದರಲ್ಲೇ 13 ಸಾವಿರ ಕೋಟಿಗೂ ಅಧಿಕ ಬಿಲ್ ಬಾಕಿ ಉಳಿಸಿದ್ದಾರೆ. ಲೋಕೋಪಯೋಗಿ ಇಲಾಖೆಯಲ್ಲಿ 9000 ಕೋಟಿ ಬಿಲ್ ಬಾಕಿ ಉಳಿಸಿದ್ದಾರೆ, ಸಣ್ಣನೀರಾವರಿ ಇಲಾಖೆಯಲ್ಲಿ 2000 ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿದ್ದಾರೆ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 6000 ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿದ್ದಾರೆ, ಬೆಂಗಳೂರು ನಗರ 5000 ಕೋಟಿ ಬಿಲ್ ಬಾಕಿ ಉಳಿಸಿದ್ದಾರೆ. ಹೀಗೆ ರಾಜ್ಯವನ್ನು ಹಾಳುಮಾಡಿ, ರಾಜ್ಯದ ಆರ್ಥಿಕತೆಯನ್ನು ಎಕ್ಕುಡಿಸಿ ಹೋಗಿದ್ದಾರೆ. ಇಷ್ಟಾದರೂ ನಾವು 59 ಸಾವಿರ ಕೋಟಿ ವಾರ್ಷಿಕ ವೆಚ್ಚ ಮಾಡಿ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. 4 ಕೋಟಿ 30 ಲಕ್ಷ ಕನ್ನಡಿಗರಿಗೆ ಸರ್ಕಾರದ ಗ್ಯಾರಂಟಿಯ ಫಲ ಪ್ರತೀ ದಿನ , ಪ್ರತೀ ತಿಂಗಳು ತಲುಪುತ್ತಿದೆ. ಇದು ನಿಮ್ಮ ಕಾಂಗ್ರೆಸ್ ಸರ್ಕಾರದ ಸಾಧನೆ. ಇದು ದೇಶದಲ್ಲೇ ಮೊದಲು. ಪ್ರತಿಯೊಬ್ಬ ಕಾರ್ಯಕರ್ತನೂ ಎದೆ ಎತ್ತಿ , ತಲೆ ಎತ್ತಿ ಹೇಳಿ ಎಂದು ಕರೆ ನೀಡಿದರು.


ಹೀಗೆ ಬಿಜೆಪಿಯವರು ಚೆನ್ನಾಗಿ ತಿಂದು, ಸಾವಿರಾರು ಕೋಟಿ ಕೆಲಸ ಶುರು ಮಾಡಿಸಿ ಸುಮಾರು 40 ಸಾವಿರ ಕೋಟಿಗೂ ಹೆಚ್ಚು ಬಿಲ್ ಕೊಡದೆ, ಬಿಲ್ ಬಾಕಿ ಉಳಿಸಿ ಮನೆಗೆ ಹೋಗಿದ್ದಾರೆ. ಹೀಗೆ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿಟ್ಟಿದ್ದಾರೆ.
ನಮ್ಮ ಗ್ಯಾರಂಟಿಗಳನ್ನು ಅಣಕಿಸಿ ಈಗ ನಮ್ಮ ಗ್ಯಾರಂಟಿಗಳನ್ನೇ ಕಾಪಿ ಮಾಡಿ ಅದಕ್ಕೆ ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ. ಬಿಜೆಪಿ ಯವರು ಅಷ್ಟು ನಿರ್ಲಜ್ಜರಾಗಿದ್ದಾರೆ ಎಂದರು.


ದಯವಿಟ್ಟು ನಿಮ್ಮ ಹೃದಯದ ಮಾತು ಕೇಳಿ. ಸರ್ಕಾರದ ಕೆಲಸಗಳನ್ನು ಪ್ರತಿ ಮನೆಗೆ ತಲುಪಿಸಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರ ಸುಳ್ಳನ್ನು ಸೋಲಿಸಿ ನಮ್ಮ ಸಾಧನೆಗಳನ್ನು ಎತ್ತಿ ಹಿಡಿಯುವ ಮೂಲಕ 28 ಲೋಕಸಭಾ ಸ್ಥಾನಗಳಲ್ಲಿ ಗೆಲ್ಲಿಸಿ ಎಂದು ಕಾರ್ಯಕರ್ತರಿಗೆ ಮುಖ್ಯಮಂತ್ರಿಗಳು ಕೈ ಮುಗಿದು ಕರೆ ನೀಡಿದರು.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್ ಸೇರಿ ಹಲವು ಮುಖಂಡರು ವೇದಿಕೆಯಲ್ಲಿದ್ದರು.

ಆಪರೇಷನ್ ಕಮಲದ ರುಚಿ ಹತ್ತಿದೆ
ಬಿಜೆಪಿಯವರಿಗೆ ಜನಾದೇಶದ ಸರ್ಕಾರವನ್ನು ಉರುಳಿಸಿ ಅಧಿಕಾರಕ್ಕೆ ಬಂದು ಹಣ ತಿನ್ನುವ ರುಚಿ ಹತ್ತಿದೆ. ಹೀಗಾಗಿ ಮತ್ತೆ ಮತ್ತೆ ಸರ್ಕಾರ ಬೀಳಿಸುವ ಪ್ರಯತ್ನಕ್ಕೆ ಕೈ ಹಾಕುತ್ತಲೇ ಇರುತ್ತಾರೆ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕಾರ್ಯಕರ್ತರನ್ನು ಎಚ್ಚರಿಸಿದರು.

Exit mobile version