Site icon TUNGATARANGA

ಅಕ್ರಮ ದಂಧೆಗಳಿಗೆ ಬ್ರೇಕ್ ಹಾಕಿ/ಭದ್ರಾವತಿ ತಾಲ್ಲೂಕಿನಾದ್ಯಂತ ಓ.ಸಿ., ಇಸ್ಪೀಟ್, ಗಾಂಜಾ ಎಗ್ಗಿಲ್ಲದೇ ನಡೆಯುತ್ತಿದೆ | ಪಕ್ಷಾತೀತವಾಗಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ

ಶಿವಮೊಗ್ಗ,ಜ.10: ಭದ್ರಾವತಿಯಲ್ಲಿ ನಡೆಯುತ್ತಿರುವ ಅಕ್ರಮ ದಂಧಗಳಾದ ಓ.ಸಿ., ಇಸ್ಪೀಟ್, ಗಾಂಜಾಗಳ ನಿಯಂತ್ರಣ ಮಾಡಬೇಕು ಎಂದು ಆಗ್ರಹಿಸಿ  ಪಕ್ಷಾತೀತವಾಗಿ ಇಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮೂರು ಪಕ್ಷದ ಮುಖಂಡರು ಹಾಜರಿದ್ದದ್ದು ವಿಶೇಷವಾಗಿತ್ತು.

ಭದ್ರಾವತಿ ತಾಲ್ಲೂಕಿನಾದ್ಯಂತ ಅಕ್ರಮ ದಂಧೆಗಳಾದ ಓ.ಸಿ., ಇಸ್ಪೀಟ್, ಗಾಂಜಾ ಎಗ್ಗಿಲ್ಲದೇ ನಡೆಯುತ್ತಿದೆ. ಈ ಸಂಬಂಧವಾಗಿ ಹಲವು ಬಾರಿ ಪೊಲೀಸ್ ಠಾಣೆಗಳಿಗೆ ದೂರು ನೀಡಲಾಗಿದೆ. ಪೊಲೀಸ್ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೂ ಯಾವುದೇ ಕ್ರಮ ಪೊಲೀಸ್ ಇಲಾಖೆ ಕೈಗೊಂಡಿಲ್ಲ ಎಂದು ಪ್ರತಿಭಟನಕಾರರು ತಿಳಿಸಿದರು.

ಭದ್ರಾವತಿ ಶಾಸಕರ ಮಕ್ಕಳೇ ಅಕ್ರಮಕೂಟವನ್ನು ಕಟ್ಟಿಕೊಂಡು ರಾಜಕೀಯ ಲಾಭವನ್ನು ಬಳಸಿಕೊಂಡು ಅಧಿಕಾರಿಗಳಿಗೆ ಹಣದ ಆಮಿಷ ತೋರಿಸಿ ಭದ್ರಾವತಿಯ ಜನರನ್ನು ದುಶ್ಚಟಗಳ ದಾಸರನ್ನಾಗಿ ಮಾಡುತ್ತಿದ್ದಾರೆ. ಇಸ್ಪೀಟ್ ದಂಧೆಯಂತು ಎಗ್ಗಿಲ್ಲದೆ ನಡೆಯುತ್ತಿದೆ. ಊರು-ಊರಿಗಳಿಗೂ ಹಬ್ಬಿದೆ ಎಂದು ದೂರಿದರು.

ಈ ಸಂಬಂಧ ಪ್ರಶ್ನೆ ಮಾಡಿದವರ ವಿರುದ್ಧವೇ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಾರೆ. ಜಾತಿ ನಿಂಧನೆ ಕೇಸು ಹಾಕಿಸುತ್ತಾರೆ. ಅಧಿಕಾರಿಗಳಿಗೆ ವರ್ಗಾವಣೆ ಮಾಡುವ ಬೆದರಿಕೆಯಾಕುತ್ತಾರೆ. ಆಡಳಿತ ಪಕ್ಷದವರು ಕೇಸು ಹಾಕಿಸಿಕೊಂಡರೇ ಒತ್ತಡ ಹೇರಿ ಕೇಸನ್ನು ತೆಗೆಸುತ್ತಾರೆ ಎಂದು ದೂರಿದರು.

ಹಾಗೆಯೇ ಭದ್ರಾವತಿಯಲ್ಲಿ ಭೂಮಾಫಿಯಾ ಕೂಡ ಹೆಚ್ಚಾಗಿದೆ. ಯೋಗಾನಂದ ಎನ್ನುವರ ಭೂಮಾಲೀಕರ ತೋಟಕ್ಕೆ ನುಗ್ಗಿ ದ್ವಂಶ ಪಡಿಸಿ, ಅವರ ಮೇಲೆ ಹಲ್ಲೆಮಾಡಿದ್ದಲ್ಲದೆ ಆ ಕುಟುಂಬದ ಮೇಲೆ ಸುಳ್ಳು ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ. ಭದ್ರಾವತಿ ಡಿವೈಎಸ್‍ಪಿಯವರ ಗಮನಕ್ಕೆ ತಂದರೆ, ಅವರು ಏನು ಕ್ರಮ ಕೈಗೊಂಡಿಲ್ಲ. ಹೆಚ್ಚಿನ ಪೊಲೀಸ್ ಅಧಿಕಾರಿಗಳು ಶಾಸಕರ ಹಣತಿ ಮೇರೆಗೆ ಕೆಲಸ ಮಾಡುತ್ತಾರೆ. ನಾನು ಕಾಂಗ್ರೆಸ್ ಪಕ್ಷದ ಪದಾಧಿಕಾರಿ ಕಾಂಗ್ರೆಸ್ ಪಕ್ಷ ಭದ್ರಾವತಿಯಲ್ಲಿ ನಿರ್ನಾಮವಾಗಿದ್ದು, ಸಂಗಮೇಶ್ ಕಾಂಗ್ರೆಸ್ ಆಗಿದೆ. ಇಲ್ಲಿ ಎಲ್ಲ ಪಕ್ಷದವರು ಅನ್ಯಾಯಕ್ಕೆ ಒಳಗಾಗಿದ್ದಾರೆ. ಶಾಸಕರ ಕುಟುಂಬದ ದೌರ್ಜನ್ಯ ಮಿತಿಮೀರಿದೆ ಎಂದು ಕಾಂಗ್ರೆಸ್ ನಾಯಕ ಚಂದ್ರೇಗೌಡ ಆರೋಪಿಸಿದರು.

ಮಾಜಿ ಶಾಸಕ ಅಪ್ಪಾಜಿಗೌಡ ಅವರ ಪತ್ನಿ ಶಾರದ ಅಪ್ಪಾಜಿಗೌಡ ಕೂಡ ಮಾತನಾಡಿ, ಮಾಧ್ಯಮಗಳು ಸ್ಥಳಕ್ಕೆ ಭೇಟಿ ನೀಡಿ ವಸ್ತು ಸ್ಥಿತಿಯ ಬಗ್ಗೆ ವರದಿ ಮಾಡಿ, ಸರ್ಕಾರದ ಕಣ್ಣು ತೆರೆಯಿಸಿ ಅನೇಕ ಕುಟುಂಬಗಳು ಬೀದಿಗೆ ಬಿದ್ದಿದ್ದು, ಇಸ್ಪೀಟ್, ಓಸಿ, ನಿಯಂತ್ರಣವೇ ಇಲ್ಲ. ಇದರಿಂದಾಗಿ ಇತ್ತೀಚೆಗೆ 4 ಅಮಾಯಕ ಯುವಕರ ಕೊಲೆಗಳಾಗಿವೆ. ಕೂಡಲೇ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಕೆ.ಬಿ.ಪ್ರಸನ್ನಕುಮಾರ್, ದೀಪಕ್ ಸಿಂಗ್, ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಬಿಜೆಪಿ ಮುಖಂಡ ಮಂಗೋಟಿ ರುದ್ರೇಶ್, ದಲಿತ ಮುಖಂಡ ಸುರೇಶ್ ಸೇರಿದಂತೆ ಪಕ್ಷಾತೀತವಾಗಿ ಭದ್ರಾವತಿಯ ಪ್ರಮುಖರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Exit mobile version