ಶಿವಮೊಗ್ಗ,ಜ.09: ಪಿಎಂ ಸ್ವನಿಧಿ ಮತ್ತು ಪಿ.ಎಂ. ವಿಶ್ವಕರ್ಮ ಯೋಜನೆಗಳ ಅನುಷ್ಠಾನಕ್ಕೆ ಕುರಿತಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಸ್ಪಂಧನೆ ಸಿಕ್ಕಿದೆ ಎಂದು ಯೋಜನೆಗಳ ಅನುಷ್ಠಾನದ ರಾಜ್ಯ ಉಸ್ತುವಾರಿ ಹಾಗೂ ಮಾಜಿ ಸಚಿವ ಎಸ್.ಎ.ರಾಮದಾಸ್ ಹೇಳಿದರು.
ಅವರು ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2023 ರಿಂದ 28ರ ಅವಧಿಗೆ ಈ ಯೋಜನೆಗಳು ಚಾಲ್ತಿಯಲ್ಲಿರುತ್ತವೆ. ಕೇಂದ್ರ ಸರ್ಕಾರ ಇದಕ್ಕಾಗಿಯೇ 13 ಸಾವಿರ ಕೋಟಿ ಮೀಸಲಿರಿಸಿದೆ. ವಿಶ್ವಕರ್ಮ ಯೋಜನೆಗೆ ಈಗಾಗಲೇ ನೊಂದಣಿ ಆರಂಭವಾಗಿದ್ದು, ಆಯ್ಕೆಯಾದವರಿಗೆ 7 ದಿನಗಳ ತರಬೇತಿ ನೀಡಲಾಗುವುದು. ಈ ತರಬೇತಿ ಅವಧಿಯಲ್ಲಿ 500 ರೂ. ಸ್ಟೈಫಂಡ್ ನೀಡಲಾಗುವುದು. ಜೊತೆಗೆ ಇನ್ನೂ 15 ದಿನ ವಿಶೇಷ ತರಬೇತಿ ನೀಡಲಾಗುವುದು ಎಂದರು.
ಕೋವಿಡ್ ಸಂಕಷ್ಟದ ಬಳಿಕ ಬೀದಿ ಬದಿ ವ್ಯಾಪಾರಿಗಳು ತೊಂದರೆಗೆ ಒಳಗಾದರು. ಅವರಿಗೆ ಆರ್ಥಿಕ ಶಕ್ತಿ ತುಂಬುವ ಹಿನ್ನಲೆಯಲ್ಲಿ ಸ್ವನಿಧಿ ಯೋಜನೆಯನ್ನು ಜಾರಿಗೆ ತರಲಾಯಿತು. ಈಗಾಗಲೇ ಸುಮಾರು 60 ಲಕ್ಷ ಜನರಿಗೆ 11 ಸಾವಿರ ಕೋಟಿ ಬಂಡವಾಳವನ್ನು ನೀಡಲಾಗಿದೆ. ಈ ಯೋಜನೆಯ ಪ್ರಕಾರ ಆರಂಭದಲ್ಲಿ 10 ಸಾವಿರ ಸಾಲ ನೀಡಲಾಗುವುದು. ನಂತರ ಆ ಸಾಲ ತೀರಿದ ಮೇಲೆ 50 ಸಾವಿರ ಹಾಗೂ 1 ಲಕ್ಷದವರೆಗೂ ಬಂಡವಾಳ ಸಾಲ ನೀಡಲಾಗುತ್ತದೆ ಎಂದರು.
ಈ ಯೋಜನೆಯ ಜೊತೆಗೆ ಪ್ರಧಾನಮಂತ್ರಿಗಳ ಜೀವನ್ ಭೀಮ ಯೋಜನೆ, ಸುರಕ್ಷ ಯೋಜನೆ, ಪಿಂಚಣಿ ಯೋಜನೆ ಮುಂತಾದ ಯೋಜನೆಗಳನ್ನು ಕೂಡ ತಲುಪಿಸಲಾಗುವುದು. ಅಸಂಘಟಿತ ವಲಯದವರಿಗೆ ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ಧನಸಹಾಯ ಮಾಡಲಾಗುವುದು. ಗರ್ಭೀಣಿಯಾದರೆ 5 ಸಾವಿರ ಬಾಣಂತನಕ್ಕೆ 6 ಸಾವಿರ ಧನ ಸಹಾಯ ನೀಡಲಾಗುವುದು ಎಂದರು.
ಅಲೆಮಾರಿಗಳಿಗೂ ಕೂಡ ಈ ಯೋಜನೆಯನ್ನು ತಲುಪಿಸಲಾಗುತ್ತದೆ. ಈ ಯೋಜನೆಗಳ ಫಲಾನುಭವಿಗಳ ಕುಟುಂಬದ ವಿವರಗಳನ್ನು ಪಡೆಯಲಾಗುವುದು. ಆ ಮೂಲಕ ಇಡೀ ಕುಟುಂಬವನ್ನು ಸಾಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಕೂಡ ಇದಾಗಿದೆ. ಅವರೆಲ್ಲರಿಗೂ ಉಚಿತ ಆರೋಗ್ಯ ಶಿಬಿರದ ಮೂಲಕ ಆರೋಗ್ಯ ಕಾಪಾಡಲಾಗುವುದು. ಒಟ್ಟಾರೆ ಕಟ್ಟಕಡೆಯ ವ್ಯಕ್ತಿಯನ್ನು ಸಾಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಪ್ರಧಾನಮಂತ್ರಿಗಳ ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.
ಶಿವಮೊಗ್ಗದಲ್ಲಿ ಈ ಯೋಜನೆಗೆ ಒಂದು ಗುರಿ ನೀಡಲಾಗಿತ್ತು. ಸುಮಾರು 6037 ಗುರಿಹೊಂದಲಾಗಿತ್ತು. ಆದರೆ, ಈಗಾಗಲೇ 5520 ಜನರು ಹೆಸರನ್ನು ನೊಂದಾಯಿಸಿದ್ದಾರೆ. ಡಿ.30ರೊಳಗೆ ಶೇ.100 ರಷ್ಟು ಈ ಯೋಜನೆ ಸಫಲವಾಗುತ್ತದೆ. ಸುಮಾರು 382 ಜನರು ಈಗಾಗಲೇ ಸಾಲ ಪಡೆದು ಹಿಂದಿರುಗಿಸಿ ಹೆಚ್ಚಿನ ಸಾಲ ಸೌಲಭ್ಯಕ್ಕಾಗಿ ಕಾಯುತ್ತಿದ್ದಾರೆ ಎಂದರು.
ವಿಶ್ವಕರ್ಮ ಯೋಜನೆ ಒಂದು ಅತ್ಯುತ್ತಮ ಯೋಜನೆಯಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ 18 ವರ್ಗಗಳ ಕುಶಲಕರ್ಮಿಗಳಿಗೆ ಈ ಯೋಜನೆ ತಲುಪಲಿದೆ. ಇದುವರೆಗೂ ಈಗಾಗಲೇ ದೇಶದಲ್ಲಿ 59 ಲಕ್ಷ ಜನರು ಹಾಗೂ ರಾಜ್ಯದಲ್ಲಿ ಸುಮಾರು 18 ಲಕ್ಷ ಜನರು ಅರ್ಜಿ ಹಾಕಿದ್ದಾರೆ. ದೇಶದಲ್ಲಿಯೇ ಇದು ಮೊದಲ ಸ್ಥಾನದಲ್ಲಿದೆ ಎಂದರು.
ಮರ, ಕಬ್ಬಿಣದ ಕೆಲಸ, ಮಡಿಕೆ ತಯಾರಿಕರು, ಚಿನ್ನದ ಕೆಲಸ, ಹಳೆಯ ಪಾತ್ರೆಗಳ ವ್ಯಾಪಾರಿಗಳು, ಬಡಿಗೆ ಚಮ್ಮಾರ, ಬಿದಿರು ವ್ಯಾಪಾರಿಗಳು, ಹೂ ಮಾರುವವರು, ಮೀನಿನ ಬಲೆ ತಯಾರಕರು, ಗೋಣಿ ಚೀಲ ತಯಾರಕರು, ಸವಿತಾ ಸಮಾಜದವರು ಸೇರಿದಂತೆ ಸುಮಾರು 18 ವೃತ್ತಿಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗುತ್ತದೆ ಎಂದರು.
ಕರ್ನಾಟಕ ರಾಜ್ಯದ 4 ಜನ ಪುಟ್‍ಪಾತ್ ವ್ಯಾಪಾರಿಗಳಿಗೆ ಈ ಬಾರಿಯ ಗಣರಾಜ್ಯೋತ್ಸವ ದಿನದಂದು ಸತ್ಕರಿಸಲಾಗುತ್ತದೆ. ಹಾಗೆಯೇ ವಿಶ್ವಕರ್ಮ ಯೋಜನೆಯ ಫಲಾನುಭವಿಗಳಾದ 10 ಜನರು ಕರ್ನಾಟಕ ರಾಜ್ಯದ ಪರವಾಗಿ ಭಾಗವಹಿಸಲಿದ್ದಾರೆ. ಇದು ರಾಜ್ಯಕ್ಕೆ ಸಂದ ಗೌರವವಾಗಿದೆ ಎಂದರು.
ಆಕಾಂಕ್ಷಿ ಅಲ್ಲ: ಮುಂದಿನ ಲೋಕಸಭಾ ಚುನಾವಣೆಗೆ ನಾನು ಆಕಾಂಕ್ಷಿಯಲ್ಲಿ ಎಂ.ಪಿ. ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ. ನನಗೆ ಈಗಾಗಲೇ 2 ಜವಾಬ್ದಾರಿಗಳನ್ನು ನೀಡಲಾಗಿದೆ. ಅದನ್ನು ಸಂತೋಷದಿಂದ ನಿಭಾಯಿಸುತ್ತಿದ್ದೇನೆ. ಶಿವಮೊಗ್ಗಕ್ಕೂ ಕೂಡ ಈ ಯೋಜನೆಯ ಪ್ರಗತಿಯ ಬಗ್ಗೆ ಮಾತನಾಡಲು ಬಂದಿದ್ದೇನೆ ಎಂದರು.
ನನ್ನ ಕ್ಷೇತ್ರ ಮುಖ್ಯಮಂತ್ರಿಗಳ ತವರು ಜಿಲ್ಲೆಯಾಗಿದೆ. ಇಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್‍ನ್ನು ಗೆಲಲ್ಲಲು ಬಿಡುವುದಿಲ್ಲ. ಬಿಜೆಪಿಯನ್ನೇ ಗೆಲುಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ದತ್ತಾತ್ರಿ, ಬಿ.ಕೆ.ಶ್ರೀನಾಥ್, ಶಿವರಾಜ್, ಮಾಲತೇಶ್, ಪ್ರಕಾಶ್, ಲೋಕನಾಥ್, ಋಷಿಕೇಶ್ ಪೈ, ಮೋಹನ್, ಅಣ್ಣಪ್ಪ ಇದ್ದರು.