ಸಾಗರ : ಜ. ೧೨ರಂದು ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಯುವನಿಧಿ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶಿವಮೊಗ್ಗದಲ್ಲಿ ಜಾರಿಗೊಳಿಸಲಿದ್ದಾರೆ ಎಂದು ಕಾಂಗ್ರೇಸ್ ಮುಖಂಡ ಡಾ. ಆರ್.ಎಂ.ಮಂಜುನಾಥ ಗೌಡ ತಿಳಿಸಿದರು.
ಇಲ್ಲಿನ ಗಾಂಧಿಮಂದಿರದ ಕಾಂಗ್ರೇಸ್ ಕಚೇರಿಯಲ್ಲಿ ಮಂಗಳವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ಜ. ೧೨ರಂದು ಸ್ವಾಮಿ ವಿವೇಕಾನಂದರ ಜಯಂತಿಯಿದ್ದು ಈ ಸುಸಂದರ್ಭದಲ್ಲಿ ಯುವನಿಧಿಯಂತಹ ಯುವಸಮೂಹಕ್ಕೆ ಪ್ರಯೋಜನಕಾರಿಯಾಗುವ ಯೋಜನೆ ರಾಜ್ಯ ಸರ್ಕಾರ ಜಾರಿಗೆ ತರುತ್ತಿದೆ. ಹಿಂದಿನ ಬೊಮ್ಮಾಯಿ ಸರ್ಕಾರ ಖಜಾನೆಯನ್ನು ಬರಿದು ಮಾಡಿ ಹೋಗಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರ ಇದರ ನಡುವೆಯೂ ಐದು ಗ್ಯಾರೆಂಟಿ ಜಾರಿಗೆ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್, ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸೇರಿದಂತೆ ಬಹುತೇಕ ಚುನಾಯಿತ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸರ್ಕಾರದ ಅಸಹಕಾರದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದ ಐದೂ ಗ್ಯಾರಂಟಿಗಳನ್ನು ಅನುಷ್ಟಾನಕ್ಕೆ ತರುವ ಮೂಲಕ ಕಾಂಗ್ರೇಸ್ ಪಕ್ಷ ನುಡಿದಂತೆ ನಡೆವ ಪಕ್ಷ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಐದೂ ಗ್ಯಾರಂಟಿ ನಿರಂತರವಾದ ಕಾರ್ಯಕ್ರಮವಾಗಿದೆ. ಕೇಂದ್ರದ ಮೋದಿ ಸರ್ಕಾರದ ರೀತಿಯಲ್ಲಿ ಸುಳ್ಳು ಭರವಸೆ ನಾವು ನೀಡುವುದಿಲ್ಲ. ಕೇಂದ್ರ ಸರ್ಕಾರದ ಖಾಸಗೀಕರಣ ಧೋರಣೆ ನಡುವೆಯೂ ರಾಜ್ಯ ಸರ್ಕಾರ ಯುವಜನರಿಗೆ ಉದ್ಯೋಗ ಸೃಷ್ಟಿಸಲು ತಮ್ಮದೇ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದೆ ಎಂದರು.
ಬಿಜೆಪಿಯವರು ರಾಮನ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಮೊದಲು ಬಿಡಬೇಕು. ನಾವು ರಾಮನ ವಿರೋಧಿಗಳಲ್ಲ. ನಾವು ಸಹ ರಾಮನ ಹೆಸರು ಮೊದಲು ಬರೆದು ಅಕ್ಷರಾಭ್ಯಾಸ ಮಾಡುತ್ತೇವೆ. ರಾಜ್ಯ ಸರ್ಕಾರ ಮುಜರಾಯಿ ಇಲಾಖೆಯ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲು ಆದೇಶ ಹೊರಡಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷದ ವತಿಯಿಂದ ಪಾನಕ ಕೋಸಂಬರಿ ವಿತರಣೆ ಮಾಡಲಾಗುತ್ತದೆ. ಮಂತ್ರಾಕ್ಷತೆಗೂ ನಮ್ಮ ಅನ್ನಭಾಗ್ಯದ ಅಕ್ಕಿಯನ್ನು ಬಿಜೆಪಿಯವರು ಹಂಚುತ್ತಿದ್ದಾರೆ. ಬಿಜೆಪಿಯವರದ್ದು ಸುಳ್ಳಿನ ವ್ಯಾಪಾರವೇ ವಿನಃ ಸತ್ಯ ಅವರಿಂದ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಅಧಿಕಾರ ಬಂದರೆ ಅರಣ್ಯಹಕ್ಕು ಮಿತಿಯನ್ನು ೭೫ವರ್ಷದಿಂದ ೨೫ವರ್ಷಕ್ಕೆ ಇಳಿಸುವುದಾಗಿ ಯಡಿಯೂರಪ್ಪ ಹೇಳಿದ್ದರು. ಈಗ ಕೇಂದ್ರದಲ್ಲಿ ಎರಡು ಬಾರಿ ಅವರದ್ದೆ ಸರ್ಕಾರ ಇದೆ, ಮಗ ಸಂಸದರಾಗಿದ್ದಾರೆ. ಆದರೂ ಕಾಯ್ದೆ ತಿದ್ದುಪಡಿ ಏಕೆ ಮಾಡಿಲ್ಲ ಎಂದು ಪ್ರಶ್ನೆ ಮಾಡಿದರು.
ಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಿ.ಆರ್.ಜಯಂತ್, ನಗರ ಅಧ್ಯಕ್ಷ ಐ.ಎನ್.ಸುರೇಶಬಾಬು, ಪ್ರಮುಖರಾದ ಮಧುಮಾಲತಿ, ತಸ್ರೀಫ್, ಲಲಿತಮ್ಮ, ಷಡಾಕ್ಷರಿ, ಶ್ರೀಕಾಂತ್ ಎಂ., ಕೌತಿ ಮಹಾಬಲ, ತಾರಾಮೂರ್ತಿ, ದಿನೇಶ್ ಡಿ., ಅನ್ವರ್ ಭಾಷಾ, ಗಿರೀಶ್ ಕೋವಿ ಇನ್ನಿತರರು ಹಾಜರಿದ್ದರು.