ಭದ್ರಾವತಿ: ಹುಣಸೇಘಟ್ಟದಲ್ಲಿ ಸಾವಿರಕ್ಕೂ ಹೆಚ್ಚು ಅಡಿಕೆ ಸಸಿಗಳ ತೆರವು
ಭದ್ರಾವತಿ, ಜ.08:
ಭದ್ರಾವತಿ ತಾಲ್ಲೂಕು ಕಸಬಾ ಹೋಬಳಿ ಹುಣಸೆಘಟ್ಟ ಗ್ರಾಮದ ಸರ್ವೇ ನಂ.42ರಲ್ಲಿನ ಮುಪ್ಪತ್ತು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ಜಿಲ್ಲಾಧಿಕಾರಿಗಳು ತೆರವಿಗೆ ಸೂಚಿಸಿದ ಮೂರು ದಿನಗಳ ಒಳಗೆ ಸರ್ಕಾರಿ ಜಾಗ 2 ಎಕರೆ ಭೂಮಿಯಲ್ಲಿ ಬೆಳೆದಿದ್ದ ಅಡಿಕೆ ಸಸಿಗಳನ್ನು ತೆರವುಗೊಳಿಸಿ ಸರ್ಕಾರಿ ಜಾಗವನ್ನು ಕಂಬದಾಳು ಹೊಸೂರು ಗ್ರಾಮ ಪಂಚಾಯ್ತಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕಳೆದ 18-12-2023 ರಂದು ಕಾನೂನು ಅಭಿಪ್ರಾಯ ಪಡೆದು ತಹಶೀಲ್ದಾರ್ ಭದ್ರಾವತಿ ಇವರ ಕಛೇರಿ ಪತ್ರದ ಸಂಖ್ಯೆ 54/2013ರನ್ವಯ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರು ಸೂಚನೆ ನೀಡಿದ್ದರು. ಸರ್ಕಾರದ ಕಾರ್ಯದರ್ಶಿ, ಕಂದಾಯ ಇಲಾಖೆ ಅವರು 10-02-2010ರಲ್ಲಿ ಹೊರಡಿಸಿರುವ ಸುತ್ತೋಲೆ ಕ್ರಮಸಂಖ್ಯೆ ಕೆಪಿಎಲ್‌ಸಿ/ಎಲ್‌ಎನ್‌ಡ120ರಂತೆ ಈ ಭೂಮಿಯ ತೆರವಿಗೆ ಗಮನ ಹರಿಸುವಂತೆ ಸೂಚಿಸಿದ್ದರು.
ತದನಂತರ ಭದ್ರಾವತಿ ತಹಶೀಲ್ದಾರರು 28-12-2023ರಂದು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಹುಣಸೆಘಟ್ಟೆ ಗ್ರಾಮದ ಸರ್ವೆ ನಂ.42ಕ್ಕೆ ಸಂಬಂಧಿಸಿದ ಒತ್ತುವರಿ ಜಮೀನನ್ನು ಅಳತೆ ಕಾರ್ಯ ಪೂರೈಸಲು 5-1-2024ರಂದು ಬೆಳಗ್ಗೆ 10ಗಂಟೆಗೆ ಮಂಜುನಾಥ್ ಎನ್ ಭೂಮಾಪಕರಿಗೆ ನಿಯೋಜಿಸಿ ಜಂಟಿ ಅಳತೆ ಪೂರೈಸಿ ಒತ್ತುವರಿಗೆ ತೆರವಿಗೆ ಆದೇಶಿಸಿದ್ದರು.
ಅಂತೆಯೇ ಮೊನ್ನೆ ಅಂದರೆ ಜ.06ರ ಶನಿವಾರ ಈ ಭೂಮಿಯಲ್ಲಿ ಅಳತೆ ಪೂರೈಸಿ ಇದು ಸರ್ಕಾರಿ ಜಾಗವಾಗಿರುವ ಹಿನ್ನೆಲೆಯಲ್ಲಿ ಇಲ್ಲಿ ಅಕ್ರಮವಾಗಿ ಅಡಿಕೆ ಸಸಿಗಳನ್ನು ಹಾಕಿದ್ದ ಭದ್ರಾವತಿಯ ಡಾ. ರಾಮಕೃಷ್ಣ ಅವರಿಗೆ ಸೂಚನೆ ನೀಡಿ ಅಲ್ಲಿ ಬೆಳೆದಿದ್ದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ತೆರವುಗೊಳಿಸಲಾಗಿದೆ. ಸುತ್ತಲೂ ಟ್ರಂಚಿಂಗ್ ಮಾಡಲಾಗಿದ್ದು, ಜೆಸಿಬಿ ಮೂಲಕ ಇಡೀ ಸರ್ಕಾರಿ ಜಾಗವನ್ನು ತನ್ನ ತೆಕ್ಕೆಗೆ ಪಡೆಯುವಲ್ಲಿ ಯಶಸ್ವಿಯಾಗಿದೆ.