Site icon TUNGATARANGA

ಜ.12 ರಂದು ಯುವ ನಿಧಿಗೆ ಶಿವಮೊಗ್ಗದಲ್ಲಿ ಚಾಲನೆ ಯೋಜನೆಯ ಸದುಪಯೋಗ ಪಡಿಸಿಕೊಳ್ಳಿ: ಶಿಕ್ಷಣ ಸಚಿವ ಮಧುಬಂಗಾರಪ್ಪ

ಶಿವಮೊಗ್ಗ, ಡಿ.೦೩: ಜ.೧೨ರಂದು ಕಾಂಗ್ರೆಸ್ ಸರ್ಕಾರದ ೫ನೇ ಗ್ಯಾರಂಟಿಗೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಿಂದ ಅಧಿಕೃತ ಚಾಲನೆ ನೀಡಲಿದ್ದು, ನಾವು ನುಡಿದಂತೆ ನಡೆದಿದ್ದೇವೆ. ಯುವಕರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಿ ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ.


ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಯುವ ನಿಧಿ ಯೋಜನೆಯ ಉದ್ಘಾಟನಾ ಸಮಾರಂಭದ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.


ಲಕ್ಷಾಂತರ ಜನ ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ. ಕೌಶಲ್ಯಾಭಿವೃದ್ಧಿ ಇಲಾಖೆ ಈಗಾಗಲೇ ಸಿದ್ಧತೆ ನಡೆಸಿದೆ. ಕಾರ್ಯಕರ್ತರು ನಿರುದ್ಯೋಗಿ ಯುವಕರ ಗಮನಕ್ಕೆ ತನ್ನಿ, ಯುವಕರಲ್ಲಿ ನಾವು ಪದವಿ ಮುಗಿಸಿದರು ಪೋಷಕರಿಗೆ ಭಾರವಾಗಿದ್ದೇವೆ ಎಂಬ ಆತಂಕ ಬೇಡ ಎಂದರು.


ಉನ್ನತ ಶಿಕ್ಷಣ ಸಚಿವ ಸುಧಾಕರ್ ಮಾತನಾಡಿ, ಈಗಾಗಲೇ ಜನಪ್ರಿಯ ೪ ಗ್ಯಾರಂಟಿಗಳನ್ನು ನೀಡಿದ್ದೇವೆ. ಜನರ ಇಟ್ಟ ವಿಶ್ವಾಸಕ್ಕೆ ನಾವು ಋಣಿಯಾಗಿದ್ದು, ಕೊಟ್ಟ ಭರವಸೆಯನ್ನು ಈಡೇರಿಸಿದ್ದೇವೆ. ಅರ್ಹ ಫಲಾನುಭವಿಗಳನ್ನು ಇಲಾಖೆ ಗುರುತಿಸಿ, ಈ ಯೋಜನೆಯಂತೆ ಯುವಕರಿಗೆ ಸಹಕಾರ ನೀಡುತ್ತೇವೆ. ನಿರುದ್ಯೋಗಿ ಯುವಕರು ತಲೆಯೆತ್ತಿ ನಿಲ್ಲುವಂತೆ ಮಾಡಿದ್ದೇವೆ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಶರಣ್‌ಪ್ರಕಾಶ್ ಮಾತನಾಡಿ, ಶಿವಮಗ್ಗದಲ್ಲಿ ಜ.೧೨ರಂದು ಯುವ ನಿಧಿ ಯೋಜನೆಯಡಿಯಲ್ಲಿ ಸೂಕ್ತ ಫಲಾನುಭವಿಗಳಿಗೆ ಪದವಿದರರಿಗೆ ೩೦೦೦, ಡಿಪ್ಲೋಮೋ ಪದವಿದರರಿಗೆ ೧,೫೦೦ ಧನಸಹಾಯ ನೀಡಲಿದ್ದು, ಮುಖ್ಯಮಂತ್ರಿಗಳು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶಿವಮೊಗ್ಗ ಸಮಾಜವಾದಿ ಹೋರಾಟದ ತವರೂರು, ಮಧ್ಯ ಕರ್ನಾಟಕದಲ್ಲಿದೆ. ಇದು ಸರ್ಕಾರದ ಪ್ರಮುಖ ಆಶ್ವಾಸನೆಯಾಗಿದ್ದು, ಇಲ್ಲಿಂದಲೇ ನೆರವೇರಿಸುತ್ತಿದ್ದೇವೆ. ಇಲ್ಲಿ ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷರು, ಕ್ರಿಯಾಶೀಲಾ ಮಂತ್ರಿಗಳಾದ ಮಧುಬಂಗಾರಪ್ಪನವರು ಈ ಯೋಜನೆಯ ಅನುಷ್ಠಾನಕ್ಕೆ ಅವಿರತವಾಗಿ ಶ್ರಮಿಸುತ್ತಿದ್ದಾರೆ. ನಿರುದ್ಯೋಗಿ ಯುವಕರು ಆತಂಕ ಬಿಟ್ಟು, ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದರು.


ಈಗಾಗಲೇ ೨೫ ಸಾವಿರಕ್ಕೂ ಹೆಚ್ಚು ಯುವಕರು ನೊಂದಾಯಿಸಿದ್ದಾರೆ. ಇದಕ್ಕೆ ಸಮಯದ ಮಿತಿಯಿಲ್ಲ. ಯೋಜನೆ ಜಾರಿಯಾದ ನಂತರವು ಸತತವಾಗಿ ನೊಂದಾಣಿ ಮಾಡಿಸಿಕೊಳ್ಳಬಹುದು ಎಂದರು.


ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಭದ್ರಾವತಿ ಶಾಸಕ ಸಂಗಮೇಶ್, ಸಾಗರ ಶಾಸಕ ಬೇಳುರು ಗೋಪಾಲಕೃಷ್ಣ ಪ್ರಮುಖರಾದ ಆಯನೂರು ಮಂಜುನಾಥ್, ಆರ್.ಎಂ. ಮಂಜುನಾಥ್‌ಗೌಡ, ಎಂ.ಶ್ರೀಕಾಂತ್, ಆರ್.ಪ್ರಸನ್ನಕುಮಾರ್, ಇಸ್ಮಾಯಿಲ್ ಖಾನ್, ಬಲ್ಖೀಶ್ ಬಾನು, ಅನಿತಾಕುಮಾರಿ, ಕಲಗೋಡು ರತ್ನಾಕರ್, ಖಲೀಂ ಪಾಷಾ, ದೇವೇಂದ್ರಪ್ಪ, ಇಕ್ಕೇರಿ ರಮೇಶ್ ಮತ್ತಿತರರು ಇದ್ದರು.

(ಕಾಂಗ್ರೆಸ್ ಕಚೇರಿಯಲ್ಲಿ ಯುವನಿಧಿ ಪೂರ್ವಭಾವಿ ಸಭೆಯಲ್ಲಿ ಇಂದು ಮೂವರು ಸಚಿವರು ಭಾಗವಹಿಸಿದ್ದು, ಅವರ ಎದುರಿನಲ್ಲೇ ಕಾರ್ಯಕರ್ತರು ಎದ್ದು ನಿಂತು ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದಿದೆ. ನೀವು ಕಾರ್ಯಕರ್ತರಿಗೆ ಯಾವಾಗ ಅಧಿಕಾರ ನೀಡುತ್ತಿರ, ನಿಗಮ ಮಂಡಳಿಗಳಿಗೆ ಯಾವಾಗ ಅಧ್ಯಕ್ಷರನ್ನು ನೇಮಕ ಮಾಡುತ್ತಿರ ಎಂದು ಕೆಲವು ಕಾರ್ಯಕರ್ತರು ಪ್ರಶ್ನಿಸಿದರು.
ಸ್ಥಳದಲ್ಲಿದ್ದ ಅನೇಕ ಕಾರ್ಯಕರ್ತರು ಅದಕ್ಕೆ ಧ್ವನಿಗೂಡಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಗೊಂದಲದ ವಾತಾವರಣ ಉಂಟಾಯಿತು. ಭದ್ರಾವತಿಯ ಸಿ.ಎಂ.ಖಾದರ್ ಅವರು ಅಲ್ಪಸಂಖ್ಯಾತರನ್ನು ಕಡೆಗಣಿಸಬೇಡಿ, ನಾವು ಬೆಂಬಲ ನೀಡುತ್ತ ಬಂದಿದ್ದೇವೆ. ಕಲಡ್ಕ ಪ್ರಭಾಕರ್ ಭಟ್‌ರು ಅತ್ಯಂತ ತುಚ್ಛವಾಗಿ ಅಲ್ಪಸಂಖ್ಯಾತರನ್ನು ಅವಮಾನಿಸಿದ್ದಾರೆ. ಆದರು ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಲಿಲ್ಲ. ನಿಮಗೂ ಬಿಜೆಪಿಗೂ ಏನೂ ವ್ಯತ್ಯಾಸವಿಲ್ಲವೇ . ಎಲ್ಲವನ್ನು ಅಲ್ಪಸಂಖ್ಯಾತರು ಒಪ್ಪಿಕೊಳ್ಳಬೇಕ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದರು. ಸಚಿವರು ಪ್ರತಿಕ್ರಿಯಿಸದೆ ಸಭೆಯಿಂದ ತೆರಳಿದರು.

Exit mobile version