Site icon TUNGATARANGA

ರಾಜ್ಯವ್ಯಾಪಿ ಕಾಂಗ್ರೇಸ್ ಸೇಡಿನ ರಾಜಕಾರಣಕ್ಕೆ ಇಳಿದಿದೆ/ ಮಾಜಿ ಶಾಸಕ ಹರತಾಳು ಹಾಲಪ್ಪ ಕಾಂಗ್ರೇಸ್ ಸರ್ಕಾರದ ವಿರುದ್ದ ಆಕ್ರೋಶ

ಸಾಗರ : ಸಾಗರ ಕ್ಷೇತ್ರ ಮಾತ್ರವಲ್ಲದೇ ರಾಜ್ಯವ್ಯಾಪಿ ಕಾಂಗ್ರೇಸ್ ಸೇಡಿನ ರಾಜಕಾರಣಕ್ಕೆ ಇಳಿದಿದೆ. ಯಾವಾಗಲೋ ನಡೆದ ರಾಮಮಂದಿರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹುಬ್ಬಳ್ಳಿಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರಿನಲ್ಲಿ ಸಂಸದರ ಸಹೋದರನನ್ನು ಟಾರ್ಗೇಟ್ ಮಾಡಲಾಗಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಚ್.ಹಾಲಪ್ಪ ಹರತಾಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿಬಿಜೆಪಿ ವತಿಯಿಂದ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ನಿಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ನೀಡಲಾದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡುತ್ತಿದ್ದಾರೆ.


ಸಾಗರ ಕ್ಷೇತ್ರವ್ಯಾಪ್ತಿಯಲ್ಲಿ ಬಿಜೆಪಿ ಪರವಾಗಿದ್ದವರನ್ನು ಗುರುತಿಸಿ ಅವರ ಮೇಲೆ ಪ್ರಕರಣ ದಾಖಲು ಮಾಡಲಾಗುತ್ತಿದೆ. ಈಗಾಗಲೆ ಹಲವು ರೈತರ ಮೇಲೆ ಪ್ರಕರಣ ದಾಖಲಾಗಿದ್ದು, ಕೆಲವು ರೈತರನ್ನು ಜೈಲಿಗೆ ಸಹ ಕಳಿಸಲಾಗಿದೆ.

ಬಿಜೆಪಿ ಕಾರ್ಯಕರ್ತರಿಗೆ ಸೇಡಿನ ರಾಜಕಾರಣವನ್ನು ಎದುರಿಸುವ ಶಕ್ತಿ ಇದೆ. ಈಗಾಗಲೆ ಕ್ಷೇತ್ರವ್ಯಾಪ್ತಿಯಲ್ಲಿ ಬಗರ್‌ಹುಕುಂ, ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ಕೊಡುವುದು ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳಿವೆ. ಶಾಸಕರು ಶಾಲಾ ವಾರ್ಷಿಕೋತ್ಸವದಲ್ಲಿ ಮುಳುಗಿ ಹೋಗಿದ್ದಾರೆ. ಈ ಬಗ್ಗೆ ಜನಜಾಗೃತಿ ಮೂಡಿಸುವ ಜೊತೆಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಒಟ್ಟಾಗಿ ಪ್ರಯತ್ನ ಮಾಡೋಣ ಎಂದು ಕರೆ ನೀಡಿದರು.


ಬಿಜೆಪಿ ಮಹಿಳಾ ಪ್ರಮುಖರಾದ ಡಾ. ರಾಜನಂದಿನಿ ಕಾಗೋಡು ಮಾತನಾಡಿ, ಕ್ಷೇತ್ರದ ಶಾಸಕರು ಅಭಿವೃದ್ದಿ ಮರೆತು ದ್ವೇಷದ ರಾಜಕಾರಣಕ್ಕೆ ಒತ್ತು ನೀಡುತ್ತಿದ್ದಾರೆ. ತಮ್ಮ ಗೆಲುವಿಗೆ ಕಾರಣವಾಗಿರುವ ಕಾಗೋಡು ತಿಮ್ಮಪ್ಪ ಅವರ ವಿದ್ಯಾಸಂಸ್ಥೆಗಳನ್ನು ಹಾಲಿ ಶಾಸಕರು ಟಾರ್ಗೇಟ್ ಮಾಡಿದ್ದಾರೆ. ಸೋದರ ಮಾವ, ಭೀಷ್ಮ ಎಂದು ರಾಜಕೀಯ ಭಾಷಣ ಮಾಡಿ ಈಗ ಕಾಗೋಡು ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ. ೧೯೮೦ರಿಂದ ಎಲ್ಲ ದಾಖಲೆ ಇದ್ದರೂ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಶಾಲಾ ಜಾಗದಲ್ಲಿ ಕಟ್ಟಡ ಕಟ್ಟಲು ಅನಗತ್ಯ ತೊಂದರೆ ಶಾಸಕರು ನೀಡುತ್ತಿದ್ದಾರೆ ಎಂದರು.


ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಕ್ಷೇತ್ರದಲ್ಲಿ ಹೊಸ ಅಭಿವೃದ್ದಿ ಕೆಲಸಗಳು ನಡೆಯುತ್ತಿಲ್ಲ. ಹಿಂದಿನ ನಮ್ಮ ಶಾಸಕರಾಗಿದ್ದ ಹರತಾಳು ಹಾಲಪ್ಪ ಅವರು ತಂದಿರುವ ಅಭಿವೃದ್ದಿ ಕೆಲಸಗಳಿಗೆ ಮತ್ತೆಮತ್ತೆ ಚಾಲನೆ ನೀಡಲಾಗುತ್ತಿದೆ. ಹಾಲಿ ಶಾಸಕರು ನಿರ್ವಹಿಸುತ್ತಿರುವ ಎಲ್ಲಾ ಕಾಮಗಾರಿ ನಮ್ಮ ಅವಧಿಯದ್ದು ಎಂದು ಬೇಕಾದರೆ ದಾಖಲೆ ಸಮೇತ ನಾವು ಚರ್ಚೆಗೆ ಸಿದ್ದರಿದ್ದೇವೆ. ರಾಜ್ಯದಲ್ಲಿ ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಹರತಾಳು ಹಾಲಪ್ಪ ಅವರಿಗೆ ಉಪಾಧ್ಯಕ್ಷರಂತಹ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗುತ್ತದೆ ಎಂದು ಹೇಳಿದರು.


ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿದರು. ವೇದಿಕೆಯಲ್ಲಿ ಲೋಕನಾಥ ಬಿಳಿಸಿರಿ, ಗಣೇಶಪ್ರಸಾದ್, ಮಧುರಾ ಶಿವಾನಂದ್, ಆರ್.ಶ್ರೀನಿವಾಸ್ ಮೇಸ್ತ್ರಿ, ವಿ.ಮಹೇಶ್, ಅರುಣ ಕುಗ್ವೆ, ಸಂತೋಷ್ ಶೇಟ್, ಸತೀಶ್ ಕೆ. ಇನ್ನಿತರರು ಹಾಜರಿದ್ದರು.

Exit mobile version