Site icon TUNGATARANGA

ಸಂಶೋಧನೆ ಮತ್ತು ವಿಸ್ತರಣೆಗೆ ಗ್ರಾಮೀಣ ಕೃಷಿ ಕಾರ್ಯಾನುಭವ ದಿಕ್ಸೂಚಿ ; ಕೃಷಿ ವಿವಿ ಕುಲಪತಿ ಡಾ.ಆರ್.ಸಿ. ಜಗದೀಶ್ ಅಭಿಮತ

 ಹೊಸನಗರ : ಗ್ರಾಮೀಣ ಕೃಷಿ ಕಾರ್ಯಾನುಭವದಡಿಯಲ್ಲಿ ವಿದ್ಯಾರ್ಥಿಗಳು ರೈತರ ಕೃಷಿಯೊಂದಿಗಿನ ಅನುಭವವನ್ನು, ಸಲಹೆಗಳನ್ನು ಪಡೆಯುವುದರ ಜೊತೆಗೆ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿದು ವರದಿ ಮಾಡುವುದರಿಂದ ಸಮಸ್ಯೆಯ ಮೇಲೆ ಸಂಶೋಧನೆ ನಡೆಸಿ ರೈತರಿಗೆ ಪರಿಹಾರೋಪಾಯಗಳನ್ನು ನೀಡಬಹುದೆಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿ ಕುಲಪತಿ ಡಾ.ಆರ್.ಸಿ.ಜಗದೀಶ್ ಹೇಳಿದರು.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯ ಅಂತಿಮ ವರ್ಷದ ಬಿ.ಎಸ್ಸಿ ಕೃಷಿಯ ‘ಗಂಧದ ಗುಡಿ’ ತಂಡದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಡಿಯಲ್ಲಿ ಸಿದ್ಧಪಡಿಸಿದ ‘ಮಾಹಿತಿ ಕೇಂದ್ರ’ವನ್ನು ತಾಲೂಕಿನ ಕೋಡೂರು ಗ್ರಾಮದಲ್ಲಿ ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಕೃಷಿ ವಿದ್ಯಾರ್ಥಿಗಳು ರೈತರಲ್ಲಿರುವ ಕೃಷಿಯ ಆಳವಾದ ಜ್ಞಾನವನ್ನು ಪಡೆಯಬೇಕು. ರೈತರು ಅನುಸರಿಸುವ ಬೇಸಾಯ ಕ್ರಮಗಳ ಬಗ್ಗೆ ತಿಳಿಯಬೇಕಿದೆ. ಕೃಷಿ ಗ್ರಾಮೀಣ ಕಾರ್ಯಾನಭವ ವಿದ್ಯಾರ್ಥಿಗಳಿಗೆ ಸಮಾಜದ ವ್ಯವಸ್ಥೆಯ ಬಗ್ಗೆ ತಿಳಿಸಿ, ನಾಯಕತ್ವದ ಗುಣಗಳನ್ನು ಕಲಿಸುವುದರಿಂದ, ಒಬ್ಬ ಉತ್ತಮ ನಾಗರಿಕನಾಗಲು ಸಹಾಯ ಮಾಡುತ್ತದೆ. ಕೃಷಿ ವಿದ್ಯಾರ್ಥಿಗಳು ಸಂಶೋಧನೆ ನಡೆಸಿ ಹೊಸ ತಳಿಗಳನ್ನು ತರಬೇಕು ಹಾಗೂ ಉದ್ಯಮದಲ್ಲಿ ಸ್ಟಾರ್ಟ್ಅಪ್ ಮಾಡಿ ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.

ಕೃಷಿಯಲ್ಲಿನ ಸಮಸ್ಯೆಗಳಾದ, ಮಣ್ಣಿನ ಸಮಸ್ಯೆ, ರೋಗ ಮತ್ತು ಕೀಟಗಳ ಬಾಧೆ, ಪೋಷಕಾಂಶಗಳ ಕೊರತೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಪಟ್ಟಿ ಮಾಡಿ, ಪರಿಶೋಧಸಿ, ಪರಿಹಾರೋಪಾಯಗಳನ್ನು ಒಂದೆಡೆ ರೈತರಿಗೆ ದೊರೆಯುವಂತೆ ಮಾಡುವುದು ಮಾಹಿತಿ ಕೇಂದ್ರದ ಉದ್ದೇಶವಾಗಿದೆ.

ಮಾಹಿತಿ ಕೇಂದ್ರವನ್ನು 3 ವಿಭಾಗಗಳಾಗಿ ವಿಂಗಡಿಸಿಲಾಗಿತ್ತು. ಸಿರಿಧಾನ್ಯಗಳ ಸಿರಿ ಸಂಪತ್ತು ವಿಭಾಗದಲ್ಲಿ ಸಜ್ಜೆ, ನವಣೆ, ಸಾಮೆ, ಕೊರಲೆ, ಹಾರಕ, ಜೋಳ, ನವಣೆ, ಊದಲು ಹಾಗೂ ರಾಗಿಯ ಬೆಳೆಯ ಕಾಲಾವಧಿ, ಬಿತ್ತನೆ ಬೀಜದ ಪ್ರಮಾಣ, ಬಿತ್ತನೆಯ ಕಾಲ, ತಳಿಗಳು ಹಾಗೂ ಅದರ ಇಳುವರಿಯ ಬಗ್ಗೆ ತಿಳಿಸಲಾಗಿತ್ತು. ವಿವಿಧ ಸಿರಿಧಾನ್ಯಗಳಿಂದ ತಯಾರಿಸಿದ ರೈತ ಭಾವಚಿತ್ರದ ಕಲಾಕೃತಿಯು ಗಮನಾರ್ಹವಾಗಿತ್ತು.

ಸಸ್ಯ ಆರೋಗ್ಯ ಕೇಂದ್ರ ವಿಭಾಗದಲ್ಲಿ ಅಡಿಕೆಯ ಮುಖ್ಯ ರೋಗಗಳಾದ ಎಲೆಚುಕ್ಕಿ ರೋಗ, ಕೋಳೆರೋಗ, ಅಣಬೆ ರೋಗಗಳ ಲಕ್ಷಣಗಳನ್ನು ರೋಗ ಬಂದಿರುವ ಗಿಡದ ಭಾಗಗಳನ್ನು ಗೋಡೆಗೆ ಅಂಟಿಸಿ ತೋರಿಸುವುದರ ಜೊತೆಗೆ ನಿರ್ವಹಣೆಯ ಮಾಹಿತಿಯನ್ನು ಬರೆಯಲಾಗಿತ್ತು. ಅಡಿಕೆಯಲ್ಲಿ ಇರುವ ಬೇರುಹುಳು, ಜೇಡನುಸಿ, ಸುಳಿ ತಿಗಣೆ ಹುಳುವಿನಿಂದ ಅಡಿಕೆಯಲ್ಲಿ ಕಾಣುವ ಲಕ್ಷಣಗಳು ಹಾಗೂ ನಿರ್ವಹಣೆಯ ಬಗ್ಗೆ ತಿಳಿಸಲಾಗಿತ್ತು. ಬೇರುಹುಳುವಿನ ಜೀವನಚಕ್ರ ಗೋಡೆಯ ಮೇಲೆ ಚಿತ್ರಿಸಿರುವುದು ಗಮನಾರ್ಹವಾಗಿತ್ತು.

ಇದೇ ರೀತಿಯಲ್ಲಿ ಭತ್ತ, ಕಾಳುಮೆಣಸಿನಲ್ಲಿ ಕಂಡುಬರುವ ರೋಗ ಹಾಗೂ ಕೀಟಭಾದೆಯ ಲಕ್ಷಣಗಳು ಹಾಗೂ ಸಮಗ್ರ ನಿರ್ವಹಣೆಯ ಮಾಹಿತಿಯನ್ನು ಬಿಂಬಿಸಲಾಗಿತ್ತು. ರೋಗ, ಕೀಟಬಾಧೆಯ ಕುರಿತು ಕೃಷಿ ವಿವಿಯು ಬಿಡುಗಡೆ ಮಾಡುವ ಭಿತ್ತಿಪತ್ರಗಳನ್ನು ಇಡುವುದರ ಜೊತೆಗೆ ರೋಗ ಹಾಗೂ ಕೀಟ ನಿಯಂತ್ರಣಕ್ಕೆ ಬಳಸುವ ಸೂಕ್ತ ರಾಸಾಯನಿಕಗಳನ್ನು ಇಡಲಾಗಿತ್ತು.

ಸಮಗ್ರ ಕೃಷಿ ವಿಭಾಗದಲ್ಲಿ ಹೈನುಗಾರಿಕೆಯ ನಕಾಶೆಯನ್ನು ಬಿಂಬಿಸಿ, ಸೈಲೇಜ್ ತಯಾರಿಕೆಯ ವಿಧಾನ, ಹಸು ಹಾಗೂ ಎಮ್ಮೆಯ ವಿವಿಧ ತಳಿಗಳು ಹಾಗೂ ಅವುಗಳಲ್ಲಿ ಕಂಡುಬರುವ ರೋಗಗಳು, ಲಸಿಕೆ ಹಾಗೂ ಸ್ವಚ್ಛ ಹಾಲಿನ ಉತ್ಪಾದನೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು.

ಮುಖ್ಯ ಬೆಳೆಗಳಾದ ಅಡಿಕೆ, ಭತ್ತ ಹಾಗೂ ಕಾಳುಮೆಣಸಿನ ಬೇಸಾಯ ಕ್ರಮಗಳು, ಮಣ್ಣಿನ ಪದರು ತೋರಿಸುವ ಮಾದರಿ, ಕೊಳವೆಬಾವಿ ಮರುಪೂರಣ, ಮರಗಳ ಮಹತ್ವ, ಯಾಂತ್ರೀಕರಣದ ವಿಸ್ತಾರ, ಜೈವಿಕ ಗೊಬ್ಬರ ಹಾಗೂ ರಾಸಾಯನಿಕ ಗೊಬ್ಬರ, ಬೀಜದ ವರ್ಗಳು, ತುಡುವೆ ಜೇನಿನ ಮಹತ್ವ ಹಾಗೂ ಜೇನು ಸಾಕಾಣಿಕೆ ಮಾಡುವ ವಿಧಾನ, ಅಣಬೆ ಕೃಷಿ ಕುರಿತು ರೈತರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಚಿತ್ರಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಕೃಷಿ ವಿವಿಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರು, ಕೃಷಿ ಅಧಿಕಾರಿಗಳು, ಕೋಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಹಾಗೂ 50ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

Exit mobile version