ಸಾಗರ : ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯಕ್ರಮ ಕೈಗೊಳ್ಳಲಾಗುತ್ತದೆ. ಸೌಲಭ್ಯ ಒದಗಿಸುವುದು ನಮ್ಮ ಜವಾಬ್ದಾರಿ, ಉತ್ತಮ ಫಲಿತಾಂಶ ತರುವ ಗುರುತರ ಹೊಣೆ ನಿಮ್ಮದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ಶಿವಪ್ಪನಾಯಕ ನಗರದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕನ್ನಡನುಡಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು. ಅದಕ್ಕೆ ಪೂರಕ ವಾತಾವರಣ ಕಲ್ಪಿಸುವ ಹೊಣೆಗಾರಿಕೆ ಸರ್ಕಾರ ಮತ್ತು ಸಮಾಜದ ಮೇಲೆ ಇರುತ್ತದೆ. ಶಿಕ್ಷಣದ ಬಗ್ಗೆ ಅಪಾರ ಅಭಿಮಾನ ಇರುವ ದಾನಿಗಳು, ಶಾಲೆಯ ಹಳೇಯ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳ ಆಭಿವೃದ್ದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಸರ್ಕಾರಿ ಶಾಲೆಗಳ ಬೆಳವಣಿಗೆಂiiಲ್ಲಿ ಶಿಕ್ಷಕ ಸಮೂಹದ ಪಾತ್ರ ಪ್ರಮುಖವಾಗಿದೆ. ಗುಣಮಟ್ಟದ ಶಿಕ್ಷಣ, ನುರಿತ ಶಿಕ್ಷಕರು ಸರ್ಕಾರಿ ಶಾಲೆಯಲ್ಲಿ ಮಾತ್ರ ಇರುತ್ತಾರೆ. ಈ ಸತ್ಯವನ್ನು ಪೋಷಕರು ಅರಿತು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಉತ್ಸಾಹದಿಂದ ಸೇರಿಸಬೇಕು ಎಂದು ಸಲಹೆ ನೀಡಿದರು.
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಗಜೇಂದ್ರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಗರಸಭಾ ಸದಸ್ಯರಾದ ಸವಿತಾ ವಾಸು, ಸಬೀನಾ ತನ್ವೀರ್, ಗಣಪತಿ ಮಂಡಗಳಲೆ, ಉಮೇಶ್, ಮಧುಮಾಲತಿ, ಪ್ರಮುಖರಾದ ಜಗನ್ನಾಥ್ ಕೆ., ಮೂರ್ತಿ ಎಂ.ವೈ., ಜ್ಯೋತಿ, ರೇಷ್ಮಾ, ಡಿ.ಕೆ.ಮೊಳೆ, ಚೇತನರಾಜ್ ಕಣ್ಣೂರು, ನಾಗರಾಜ್ ಇನ್ನಿತರರು ಹಾಜರಿದ್ದರು.
ಸುನೀತಾ ಸ್ವಾಗತಿಸಿದರು. ಜ್ಯೋತಿ ವಂದಿಸಿದರು. ಎಂ.ಪಿ. ಸತ್ಯನಾರಾಯಣ ನಿರೂಪಿಸಿದರು. ನಂತರ ಮಕ್ಕಳಿಂದ ಹುಲಿವೇಷ ನೃತ್ಯ, ಡೊಳ್ಳು ಕುಣಿತ, ನಾಟಕ ಮತ್ತು ರಾಜು ಭಾಗವತ್ ಸಾರಥ್ಯದಲ್ಲಿ ಭಕ್ತ ಸುಧನ್ವ ಯಕ್ಷಗಾನ ಪ್ರದರ್ಶನಗೊಂಡಿತು.