ಹೊಸನಗರ : ಮಕ್ಕಳ ವ್ಯಕ್ತಿತ್ವ ವಿಕಾಸನದಲ್ಲಿ ಕೇವಲ ಶಿಕ್ಷಕರು ಮಾತ್ರ ಪಾತ್ರಧಾರಿಗಳಾಗಿರದೆ ಪೋಷಕರ ದೈನಂದಿನ ನಡವಳಿಕೆಗಳು ಮಹತ್ತರ ಪಾತ್ರ ವಹಿಸುತ್ತವೆ ಎಂದು ವಿಶ್ರಾಂತ ಉಪನ್ಯಾಸಕ ಹಾಗೂ ಸಾಹಿತಿ ಡಾ. ಪಿ. ಶಾಂತಾರಾಮ ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದರು.
ನಾಗೋಡಿ (ನಿಟ್ಟೂರು) ಗ್ರಾಪಂ ವ್ಯಾಪ್ತಿಯ ಹೆಬ್ಬಿಗೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಾಂಸ್ಕೃತಿಕ ರಸ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡಿದ ಅವರು, ಸಮೂಹ ಮಾಧ್ಯಮಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಚಾರಿತ್ರ್ಯ ನಿರ್ಮಿಸುವುದಿಲ್ಲ, ಮಕ್ಕಳು ಪೋಷಕರು ಮತ್ತು ಶಿಕ್ಷಕರ ಉತ್ತಮ ನಡವಳಿಕೆಗಳಿಂದ ಸ್ಫೂರ್ತಿ ಪಡೆಯುತ್ತಾರೆ. ಮಕ್ಕಳನ್ನು ಹೆಚ್ಚು ಹೆಚ್ಚು ಓದಿನೆಡೆಗೆ ಸೆಳೆಯಬೇಕು ಎಂದರು.
ಗ್ರಾಮೀಣ ಭಾಗದಲ್ಲಿ ಒಳ್ಳೆ ಜಮೀನು, ಮನೆ ಮಾಡಿದರೆ ಇತ್ತೀಚೆಗೆ ಓದಿದ ಗ್ರಾಮೀಣ ಮಕ್ಕಳು ನಗರಗಳತ್ತ ಮುಖ ಮಾಡುತ್ತಿದ್ದಾರೆ, ನಗರದ ಜನ ವಿದೇಶಗಳಿ ಹೋಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಪೋಷಕರು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಿರಿ. ದೂರದರ್ಶನದಲ್ಲಿ ಬರುವ ಯಾವುದೇ ಧಾರವಾಹಿಗಳು ನಮಗೆ ಯಾವುದೇ ಮೌಲ್ಯವನ್ನು ಕಲಿಸುತ್ತಿಲ್ಲ. ಬದಲಾಗಿ ದ್ವೇಷ, ತಿರಸ್ಕಾರ, ಅಸಹನೆ, ಮತ್ಸರ, ಸ್ಪರ್ಧೆ ಇವುಗಳನ್ನೇ ವಸ್ತುಗಳಾಗಿ ಮಾಡಿಕೊಂಡು ಇತ್ತೀಚೆಗೆ ಧಾರವಾಹಿಗಳು ಬರುತ್ತಿವೆ. ದೂರದರ್ಶನದಿಂದ ವಿಮುಖರಾಗಿ ಎಂದು ಸಲಹೆ ನೀಡಿದರು.
ಶಾಲೆ ಎಂದರೆ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ, ಮಕ್ಕಳ ಪೋಷಕರಿಗೆ ಮಾತ್ರ ಸೀಮಿತವಲ್ಲ. ಇಡೀ ಗ್ರಾಮಕ್ಕೆ ಒಂದು ಶಾಲೆ. ಗ್ರಾಮದ ಎಲ್ಲರೂ ಆ ಶಾಲೆಯ ವಿದ್ಯಾರ್ಥಿಗಳು. ಊರಿನ ಸಂಸ್ಕೃತಿ ನೋಡಲು ವಿದ್ಯಾಲಯ, ದೇವಾಲಯ ಎರಡು ನೋಡಿದರೆ ಗೊತ್ತಾಗುತ್ತದೆ ಎಂದ ಅವರು, ಮಕ್ಕಳಿಗೆ ಮೌಲ್ಯಾತ್ಮಕ ಶಿಕ್ಷಣ ನೀಡುವ ಜವಾಬ್ದಾರಿ ಪೋಷಕರದ್ದು, ಪ್ರತಿದಿನ ದಿನಪತ್ರಿಕೆ, ವಾರ ಪತ್ರಿಕೆಗಳು, ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಿ ಎಂದರು.
ಈ ಶಾಲೆಯು 1953 ರಲ್ಲಿ ಆರಂಭವಾಗಿ 70 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ಪ್ರಸನ್ನ ಉಡುಚೆ ಏಳು ದಶಕಗಳಿಂದ ಶಾಲೆ ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ರಾಮಮೂರ್ತಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿಟ್ಟೂರು ಗ್ರಾ.ಪಂ ಸದಸ್ಯ ಪುರುಷೋತ್ತಮ್ ಹೆಚ್.ಎಂ, ತುಮರಿ ಗ್ರಾ.ಪಂ ಸದಸ್ಯರುಗಳಾದ ಶೇಖರಪ್ಪ ಹಾಗೂ ಲಲಿತಾ ಆಗಮಿಸಿದ್ದರು.
ಶಾಲೆಯ ಮುಖ್ಯ ಶಿಕ್ಷಕ ಸುನೀಲ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸಕ್ತ ಸಾಲಿನ ಶೈಕ್ಷಣಿಕ ವರದಿಯನ್ನು ಮಂಡಿಸಿದರು. ಅಡುಗೆ ನಿವೃತ್ತ ಸಿಬ್ಬಂದಿ ಹಾಗೂ ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದ ವಿದ್ಯಾರ್ಥಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಹಿಂದೆ ನಡೆದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಸಹಕರಿಸಿದ ಹಲವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಶಾಲಾ ಮಕ್ಕಳು ಪ್ರಾರ್ಥಿಸಿದರು. ಸಹಶಿಕ್ಷಕಿ ಸಾವಿತ್ರಮ್ಮ ಸ್ವಾಗತಿಸಿದರು. ಹಳೆಯ ವಿದ್ಯಾರ್ಥಿನಿ ಚೈತ್ರಾ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ಲಕ್ಷ್ಮೀ, ಶಿಕ್ಷಕರುಗಳಾದ ಶಾಲಿನಿ, ಅನಿತಾ, ರವಿಜಾ, ಅಂಗನವಾಡಿ ಸಿಬ್ಬಂದಿ ಸುಮಾ, ಅಡುಗೆ ಸಿಬ್ಬಂದಿಗಳು, ಎಸ್‌ಡಿಎಂಸಿ ಪದಾಧಿಕಾರಿಗಳು, ಪೋಷಕರು, ವಿದ್ಯಾರ್ಥಿಗಳು, ಶಾಲಾ ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಶಾಲೆಯ ಹಿಂದಿನ ಕಾರ್ಯಕ್ರಮಗಳನ್ನು ಮೆಲುಕು ಹಾಕಲು ಪ್ರೊಜೆಕ್ಟರ್ ಅಳವಡಿಸಲಾಗಿತ್ತು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳ ವಿವಿಧ ಪ್ರಕಾರದ ನೃತ್ಯ, ನಾಟಕ ಹಾಗೂ ಪ್ರಹಸನಗಳು ನೋಡುಗರ ಮನ ಸೆಳೆದವು.