Site icon TUNGATARANGA

ಅತಿಥಿ ಉಪನ್ಯಾಸಕರ ಮುಷ್ಕರದ ನಡುವೆ/ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸರ್ಕಾರದ ಮೇಲೆ ಇದೆ: ಶಾಸಕ ಗೋಪಾಲಕೃಷ್ಣ ಬೇಳೂರು

ಸಾಗರ : ಅತಿಥಿ ಉಪನ್ಯಾಸಕರ ಮುಷ್ಕರದ ನಡುವೆಯೂ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸರ್ಕಾರದ ಮೇಲೆ ಇದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.


ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಕ್ರೀಡೆ, ಸಾಂಸ್ಕೃತಿಕ, ಎನ್.ಎಸ್.ಎಸ್., ಎನ್‌ಸಿಸಿ ಇನ್ನಿತರೆ ಚಟುವಟಿಕೆಗಳ ಸಮಾರೋಪ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, ಅತಿಥಿ ಉಪನ್ಯಾಸಕರ ಕೆಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸಿದ್ದು ಇನ್ನು ಕೆಲವು ಬೇಡಿಕೆಗಳು ಈಡೇರಬೇಕಾಗಿದೆ. ಈ ಬಗ್ಗೆ ಸಹ ಸರ್ಕಾರ ಗಮನ ಹರಿಸಿದೆ ಎಂದರು.


ಬದುಕಿನಲ್ಲಿ ಕಾಲೇಜು ಶಿಕ್ಷಣ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಭವಿಷ್ಯ ರೂಪಿಸಿಕೊಳ್ಳಬೇಕಾದರೆ ಕಾಲೇಜು ಹಂತದಲ್ಲಿ ನೀವು ಸದೃಢ ಹೆಜ್ಜೆ ಇರಿಸುವ ಅಗತ್ಯ ಇದೆ. ಬಾಹ್ಯಾಕರ್ಷಣೆಗಳಿಗೆ ನೀವು ಒಳಗಾಗದೆ ಪೋಷಕರು ಯಾವ ಉದ್ದೇಶಕ್ಕೆ ನಿಮ್ಮನ್ನು ಶಿಕ್ಷಣಕ್ಕೆ ಕಳಿಸುತ್ತಿದ್ದಾರೆ ಎನ್ನುವುದನ್ನು ಅರಿತು ಶ್ರದ್ಧೆಯಿಂದ ತೊಡಗಿಕೊಳ್ಳಬೇಕು. ಪ್ರಸ್ತುತ ಅನೇಕ ಉದ್ಯೋಗಗಳು ಯುವಜನರಿಗೆ ಸಿಗುತ್ತಿದೆ. ಅದರಲ್ಲಿ ಅರ್ಹವಾದದ್ದನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಭವಿಷ್ಯ ರೂಪಿಸಿಕೊಳ್ಳಿ ಎಂದರು.


ಕಾಲೇಜು ಹಂತದಲ್ಲಿ ಎನ್.ಎಸ್.ಎಸ್., ಎನ್.ಸಿ.ಸಿ. ಯಂತಹ ಚಟುವಟಿಕೆಗಳು ಹೆಚ್ಚು ಪೂರಕವಾಗಿರುತ್ತದೆ. ಗ್ರಾಮೀಣ ಜನರ ಬದುಕು ಬವಣೆ ತಿಳಿಯಲು ಈ ಘಟಕಗಳಲ್ಲಿ ತೊಡಗಿಕೊಳ್ಳುವುದು ಅವಶ್ಯವಾಗಿರುತ್ತದೆ. ಮೊಬೈಲ್ ಟವರ್ ಇಲ್ಲದ ಕಡೆಗಳಲ್ಲಿ ಶಿಬಿರಗಳನ್ನು ಆಯೋಜಿಸುವತ್ತ ಕಾಲೇಜು ಆಡಳಿತ ಗಮನ ಹರಿಸಬೇಕು ಎಂದು ಹೇಳಿದರು.


ಪ್ರಾಚಾರ್ಯ ಡಾ. ಸಣ್ಣಹನುಮಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಡಾ. ವಿಷ್ಣುಮೂರ್ತಿ, ಗಣಪತಿ ಮಂಡಗಳಲೆ, ಚೇತನರಾಜ್ ಕಣ್ಣೂರು, ಈಳಿ ಶ್ರೀಧರ್, ಜಗದೀಶ್ ಗೌಡ, ಪರಿಮಳ, ಪ್ರೊ. ರಾಜು ಇನ್ನಿತರರು ಉಪಸ್ಥಿತರಿದ್ದರು.

ಚೈತ್ರ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಹರೀಶ್ ಕೆ.ಎಲ್. ಸ್ವಾಗತಿಸಿದರು. ಪ್ರೊ. ರಾಜು ಪ್ರಾಸ್ತಾವಿಕ ಮಾತನಾಡಿದರು. ವೈಷ್ಣವಿ ವಂದಿಸಿದರು. ಡಾ. ಆಶಾ ಮತ್ತು ಗಣಪತಿ ನಿರೂಪಿಸಿದರು

Exit mobile version