Site icon TUNGATARANGA

ಜ.05 ರೊಳಗಾಗಿ ಅನ್ಯ ಬಾಷೆಯ ನಾಮ ಫಲಕಗಳನ್ನು ತೆರವುಗೊಳಿಸಲು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಎಚ್ಚರಿಕೆ

ಶಿವಮೊಗ್ಗ,ಡಿ.೨೯: ಕನ್ನಡವಲ್ಲದೆ ಅನ್ಯ ಭಾಷೆಗಳಲ್ಲಿ ಇರುವ ನಾಮಫಲಕಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿ, ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಯ ಮೂಲಕ ಇಂದು ಜಿಲ್ಲಾಧಿಕಾರಿಗಳಿಗೆ ಮತ್ತು ಮಹಾನಗರ ಪಾಲಿಕೆ ಅಯುಕ್ತರಿಗೆ ಮನವಿ ಸಲ್ಲಿಸಿದರು.


ಪಾಲಿಕೆ ಮತ್ತು ಜಿಲ್ಲಾಡಳಿತ ಈ ಕೂಡಲೇ ಜ.೦೫ರೊಳಗಾಗಿ ಎಲ್ಲ ಅಂಗಡಿ ಮುಂಗಟ್ಟುಗಳ ಮುಂಭಾಗ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನ್ಯ ಭಾಷೆಗಳಲ್ಲಿ ಇರುವ ನಾಮಫಲಕಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಸಿದರು.


ಶೇ.೬೦ರಷ್ಟು ಕನ್ನಡ ಭಾಷೆಯಲ್ಲಿಯೇ ಇರಬೇಕು. ಒಂದು ಪಕ್ಷ ಜಿಲ್ಲಾಡಳಿತ ಅಥವಾ ಪಾಲಿಕೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಅಂತಹ ನಾಮಫಲಕಗಳನ್ನು ತೆರವುಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದರು.


ಈ ನೆಲದಲ್ಲಿ ಕನ್ನಡ ಭಾಷೆಗೆ ಅಗ್ರ ಸ್ಥಾನ ಇದೆ. ನಾಮಫಲಕಲ್ಲಿ ಶೇ.೬೦ರಷ್ಟು ಕನ್ನಡ ಭಾಷೆ ಬಳಸಬೇಕು ಎಂಬ ಕಾಯಿದೆ ಇದ್ದರು ಕೂಡ ಅದನ್ನು ಗಾಳಿಗೆ ತೂರಿ ಇಂಗ್ಲಿಷ್ ಮತ್ತು ಇತರೆ ಭಾಷೆಗಳಲ್ಲಿ ಬಹಿರಂಗವಾಗಿ ನಾಮಫಲಕಗಳನ್ನು ಹಾಕಿದ್ದಾರೆ. ಇದನ್ನು ನೋಡಿದ್ದರು ಕೂಡ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.


ಹೊರಗಿನಿಂದ ಬಂದವರಿಗೆ ನಮ್ಮ ನೆಲ ಬೇಕು, ನಮ್ಮ ನೀರು ಬೇಕು, ನಮ್ಮ ಭಾಷೆ ಬೇಡವೇ ?. ಇಲ್ಲಿ ಬದುಕುತ್ತಿರುವವರು ವ್ಯಾಪಾರ ಮಾಡುತ್ತಿರುವವರು ಕನ್ನಡ ಭಾಷೆಯಲ್ಲಿಯೇ ವ್ಯವಹಾರಿಸಬೇಕು. ಕನ್ನಡ ಕಡ್ಡಾಯವಾಗಿ ಕಲಿಯಬೇಕು,

ಅವರವರ ಮನೆಯಲ್ಲಿ ಬೇರೆ ಭಾಷೆಯನ್ನು ಮಾತನಾಡಲಿ, ಆದರೆ ವ್ಯವಹಾರಿಕವಾಗಿ ಕನ್ನಡ ಮಾತನಾಡುವುದು ಕಡ್ಡಾಯವಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮನವಿಯಲ್ಲಿ ಆಗ್ರಹಿಸಿದ್ದಾರೆ.


ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹೆಚ್.ಎಸ್.ಕಿರಣ್‌ಕುಮಾರ್, ನಗರಾಧ್ಯಕ್ಷ ಪ್ರಫುಲ್ಲಾಚಂದ್ರ ಹೆಚ್., ವಿಜಯ್, ರಾಮು, ಸತೀಶ್, ಸಂತೋಷ್,ಕೇಶವ, ಪರಮೇಶ್, ಮೊಹಮ್ಮದ್ ಷಫಿ ಸೇರಿದಂತೆ ಹಲವರಿದ್ದರು

Exit mobile version