Site icon TUNGATARANGA

ಜೆ.ಪಿ.ಎನ್ ಶಾಲೆಯಲ್ಲಿ ಕ್ರೀಡಾ ದಿನಾಚರಣೆ/ವಿದ್ಯಾರ್ಥಿ ಸಂಘದಿಂದ ನಾಯಕತ್ವ ಗುಣ ವೃದ್ಧಿ: ಶಿಕ್ಷಣಾಧಿಕಾರಿ ಪಿ.ನಾಗರಾಜ

ಶಿವಮೊಗ್ಗ : ವಿದ್ಯಾರ್ಥಿ ಸಂಘಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ನಾಯಕತ್ವ ಗುಣ ಕೌಶಲ್ಯತೆಗಳನ್ನು ವೃದ್ಧಿಸಿಕೊಳ್ಳಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ನಾಗರಾಜ ಹೇಳಿದರು.

ನಗರದ ಜಯಪ್ರಕಾಶ್ ನಾರಾಯಣ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ ವಿಭಾಗದ ವತಿಯಿಂದ ಶುಕ್ರವಾರ  ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಾಲೆಯ ಕ್ರೀಡಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಾಲೆಗಳು ಪರೀಕ್ಷೆ ಮತ್ತು ಫಲಿತಾಂಶಾಧಾರಿತ ಸೀಮಿತತೆಗೆ ಬದಲಾಗುತ್ತಿದೆ. ಶಿಕ್ಷಕರು ಪೋಷಕರ ಗುರಿಯು ಪರೀಕ್ಷೆ ಮತ್ತು ಫಲಿತಾಂಶವಾಗಿದೆ. ಅದರೇ ಪರೀಕ್ಷೆಗಳಲ್ಲಿ ನಾವು ಪಡೆಯುವ ಅಂಕಗಳಿಂದ ಮಾತ್ರ ನಮ್ಮ ಭವಿಷ್ಯವನ್ನು ನಿರ್ಧರವಾಗುವುದಿಲ್ಲ ಎಂದು ಸತ್ಯ ತಿಳಿಯಿರಿ. ವಿದ್ಯಾರ್ಥಿ ಜೀವನದಲ್ಲಿ  ಬುದ್ಧಿಶಕ್ತಿಯ ಜೊತೆಗೆ ಉತ್ತಮ ವ್ಯಕ್ತಿತ್ವಗಳನ್ನು ರೂಡಿಸಿಕೊಂಡಾಗ ಮಾತ್ರ ಶಿಕ್ಷಣದ ಕಲಿಕೆ ಪರಿಪೂರ್ಣತೆಯೆಡೆಗೆ ಸಾಗಲು ಸಾಧ್ಯ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಮಾತನಾಡಿ, ಕ್ರೀಡೆಯಲ್ಲಿ ಗೆದ್ದವರಿಗೆ ಹಾಗೂ ಸೋತವರಿಗೆ ಚರಿತ್ರೆಯಲ್ಲಿ ಸ್ಥಾನವಿದೆ. ಅದರೇ ನಿಂತು ನೋಡಿದವರಿಗೆ, ನೋಡಿ ನಕ್ಕವರಿಗೆ ಚರಿತ್ರೆಯಲ್ಲಿ ಎಂದಿಗೂ ಜಾಗವಿಲ್ಲ. ಹಾಗಾಗಿಯೇ ಭಾಗವಹಿಸುವಿಕೆ ಎಂಬುದು ಅತಿ ಮುಖ್ಯ ವಿಚಾರವಾಗಿದ್ದು, ನಮ್ಮನ್ನು ಕ್ರಿಯಾಶೀಲಗೊಳಿಸುವ ಪ್ರತಿಯೊಂದು ಚಟುವಟಿಕೆಗಳಲ್ಲಿ ಮುಕ್ತವಾಗಿ ಭಾಗವಹಿಸಿ.

ಮನುಷ್ಯ ಸ್ವತಂತ್ರನಾಗಿದ್ದರು ಮೊಬೈಲ್ ಗೆ ಬಂಧಿಯಾಗಿದ್ದಾನೆ.‌ ಸಂಬಂಧಗಳ ಕರೆಯೋಲೆಗಳು ವಾಟ್ಸ್ ಅಪ್ ಮಾತ್ರಕ್ಕೆ ಸೀಮಿತವಾಗಿದೆ. ಇದರಿಂದ ಮಾನವೀಯ ಸಂಬಂಧಗಳು ಕಣ್ಮರೆಯಾಗುತ್ತಿದೆ. ಇಂತಹ ಹೊತ್ತಿನಲ್ಲಿ ಮೆದುಳಿನ ಶಿಕ್ಷಣದ ಜೊತೆಗೆ ಹೃದಯಕ್ಕು ಶಿಕ್ಷಣ ನೀಡಬೇಕಿದೆ. ಅದರಿಂದಲೇ ಮನುಷ್ಯ ಅಲ್ಪ ಮಾನವನಿಂದ ವಿಶ್ವ ಮಾನವನಾಗುತ್ತಾನೆ ಎಂದು ಹೇಳಿದರು.

ಮನುಷ್ಯನಿಗೆ ನಿಜವಾದ ಗೌರವ ಸಿಗುವುದು ತಿಳುವಳಿಕೆಯ ಜೊತೆಗೆ ಉತ್ತಮ ನಡವಳಿಕೆಯಿದ್ದಾಗ ಮಾತ್ರ. ಪಠ್ಯ ಚಟುವಟಿಕೆ ಜ್ಞಾನ ನೀಡಿದರೇ ಪಠ್ಯೇತರ ಚಟುವಟಿಕೆಗಳು ಬದುಕನ್ನು ರೂಪಿಸುತ್ತದೆ. ಆಕರ್ಷಣೆಗಳಿಗಿಂತ ಆದರ್ಶಯುತ ಜೀವನಕ್ಕೆ ಹೆಚ್ಚು ಮಾನ್ಯತೆ ನೀಡಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜೆಪಿಎನ್ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಇಮ್ತಿಯಾಜ್ ಅಹಮದ್ ಅಧ್ಯಕ್ಷತೆ ವಹಿಸಿದ್ದರು. ಬಿಬಿ ರಸ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಬೇಬಿ.ಬಿ.ಎಸ್, ಪ್ರಾಂಶುಪಾಲರಾದ ಕೆ.ಕೆಂಚಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

Exit mobile version