ಶಿವಮೊಗ್ಗ, ಡಿ.14:
ಹೊಸನಗರ ತಾಲೂಕಿನ ಹುಂಚಾ ಮತ್ತು ಕುಂಭತ್ತಿ ಗ್ರಾಮಗಳಲ್ಲಿ ರದ್ದಾಗಿರುವ ಕಲ್ಲುಗಣಿ ಗುತ್ತಿಗೆಗಳನ್ನು ನಿಯಮಾನುಸಾರ ವಿಲೇ ಮಾಡಲು ನಿರಾಪೇಕ್ಷಣಾ ಪ್ರಮಾಣಪತ್ರ ನೀಡಿದ ಅಂದಿನ ಅರಣ್ಯಾಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ಅರಣ್ಯಾಧಿಕಾರಿಗಳಿಗೆ ಪತ್ರ ಬರೆಯುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹಿರಿಯ ಭೂವಿಜ್ಞಾನಿ ಹಾಗೂ ಜಿಲ್ಲಾ ಮರಳು ಸಮಿತಿಯ ಸದಸ್ಯ ಕಾರ್ಯದರ್ಶಿ ರಾನಜಿನಾಯ್ಕ್ ಅವರಿಗೆ ಸೂಚಿಸಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಟಾಸ್ಕ್‍ಫೋರ್ಸ್ ಸಮಿತಿ ಹಾಗೂ ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಪರವಾನಿಗೆ ಹಾಗೂ ನಿಯಂತ್ರಣ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸದರಿ ಗ್ರಾಮಗಳಲ್ಲಿ ಕಲ್ಲುಗಣಿಗಾರಿಕೆಗೆ ಅನುಮತಿ ನೀಡಲು ಪರವಾನಿಗೆ ನೀಡಿ, ಹಿಂಪಡೆದ ಕಾರಣಕ್ಕೆ ಕಲ್ಲುಗಣಿಗಾರಿಕೆ ನಡೆಸದಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿತ್ತು. ಗುತ್ತಿಗೆ ರದ್ದುಪಡಿಸಿದ ಆದೇಶದ ಹಿನ್ನೆಲೆಯಲ್ಲಿ ಗಣಿಗಾರಿಕೆಗೆ ಗುತ್ತಿಗೆ ಪಡೆದ ಗುತ್ತಿಗೆದಾರರು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು.
ಜಿಲ್ಲೆಯಾದ್ಯಂತ ಇರುವ ಮರಳು ಕ್ವಾರಿಗಳಲ್ಲಿ ಗಣಿಗಾರಿಕೆಯನ್ನು ಮಾನ್ಸೂನ್ ಮುಕ್ತಾಯಗೊಳ್ಳುವವರೆಗೆ ಸ್ಥಗಿತಗೊಳಿಸುವಂತೆ ಸೂಚಿಸಲಾಗಿತ್ತು. ಪ್ರಸ್ತುತ ಮಾನ್ಸೂನ್ ಮುಕ್ತಾಯಗೊಂಡಿರುವುದರಿಂದ ಗಣಿಗಾರಿಕೆ ಆರಂಭಿಸಲು ಅನುಮತಿ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಅದಕ್ಕಾಗಿ ಗಣಿಗಾರಿಕೆ ನಡೆಸುವ ಸ್ಥಳಗಳಲ್ಲಿ ಹಾಗೂ ಚೆಕ್‍ಪೋಸ್ಟ್‍ಗಳಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಿರುವ ಬಗ್ಗೆ, ರಸ್ತೆ ಸಂಪರ್ಕ ಸಮರ್ಪಕವಾಗಿರುವ ಬಗ್ಗೆ ಆಯಾ ತಾಲೂಕಿನ ತಹಶೀಲ್ದಾರರು ಖುದ್ದು ಭೇಟಿ ನೀಡಿ ಪರಿಶೀಲಿಸಿ ಅನುಮತಿ ನೀಡುವಂತೆ ಸೂಚಿಸಿದ ಅವರು, ಕ್ಯಾಮರಾ ಅಳವಡಿಕೆಗೆ ಮುನ್ನ ಪೊಲೀಸ್ ಇಲಾಖೆಯ ತಾಂತ್ರಿಕ ತಜ್ಞರ ನೆರವು ಪಡೆಯುವಂತೆ ಅವರು ಸೂಚಿಸಿದರು. ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣೆ ಕುರಿತು ನಿಯಂತ್ರಣ ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ಸಕ್ಷಮ ಅಧಿಕಾರಿಗಳಿಗೆ ಬಾಡಿಗೆ ವಾಹನಗಳನ್ನು ಪಡೆದುಕೊಳ್ಳುವಂತೆ ಹಾಗೂ ಉಪವಿಭಾಗಾಧಿಕಾರಿಗಳು ತಹಶೀಲ್ದಾರರ ಸಭೆ ಕರೆದು ಕೂಡಲೆ ಕ್ರಮವಹಿಸುವಂತೆ ಅವರು ಸೂಚಿಸಿದರು.
ಹೊಸ ಮರಳು ನೀತಿ-2020 ಅನ್ವಯ ಮೊದಲನೆ, ಎರಡನೇ ಹಾಗೂ ಮೂರನೇ ಶ್ರೇಣಿಯ ಹಳ್ಳ, ತೊರೆಗಳಲ್ಲಿ ಮತ್ತು ಕೆರೆಗಳಲ್ಲಿ ಲಭ್ಯವಿರುವ ಮರಳು ನಿಕ್ಷೇಪಗಳನ್ನು ಗುರುತಿಸಿ ನಿಯಮಾನುಸಾರ ವಿಲೇ ಮಾಡಲು ಸೂಚಿಸಲಾಗಿತ್ತು. ಅದರಂತೆ ಶಿಕಾರಿಪುರ ತಾಲೂಕಿನ ಆರು ಸ್ಥಳಗಳಲ್ಲಿ ನಿಕ್ಷೇಪಗಳನ್ನು ಗುರುತಿಸಲಾಗಿದ್ದು, ಮರಳನ್ನು ವಿಲೇ ಮಾಡಲು ಸ್ಥಳೀಯ ಸಮಿತಿ ಅನುಮತಿ ನೀಡಿದ್ದು, ಅನುಮೋದನೆಗಾಗಿ ಜಿಲ್ಲಾ ಸಮಿತಿಗೆ ರವಾನಿಸಿದ್ದಾರೆ. ಉಳಿದ ತಾಲೂಕುಗಳಲ್ಲಿಯೂ ನಿಕ್ಷೇಪಗಳನ್ನು ಗುರುತಿಸಿ, ನಿಯಮಾನುಸಾರ ವಿಲೇ ಮಾಡಲು ಗಮನಹರಿಸುವಂತೆ ಅವರು ತಹಶೀಲ್ದಾರರಿಗೆ ಸೂಚಿಸಿದರು.
ಹೊಸ ಮರಳು ನೀತಿಯನ್ವಯ ತೀರ್ಥಹಳ್ಳಿ ತಾಲೂಕು ಲಿಂಗಾಪುರ ಗ್ರಾಮದ ವ್ಯಾಪ್ತಿಯ ತುಂಗಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ 30ಎಕರೆ ವಿಸ್ತೀರ್ಣದಲ್ಲಿ ಮರಳು ಗಣಿಗಾರಿಕೆಗೆ ಬದಲಾಗಿ ಶೇಖರಣೆಗೊಂಡಿರುವ ಹೂಳಿನಲ್ಲಿ ದೊರಕುವ ಮರಳು ತೆಗೆದು ವಿಲೇವಾರಿ ಮಾಡುವ ಸಲುವಾಗಿ ಹಾಗೂ ಹೊಸ ಮರಳು ನೀತಿ ಅನುಷ್ಠಾನಕ್ಕೂ ಪೂರ್ವದಲ್ಲಿ ಮೊದಲ, ದ್ವಿತೀಯ ಹಾಗೂ ತೃತೀಯ ಹಂತದ ಹರಾಜು ಪ್ರಕ್ರಿಯೆಯಲ್ಲಿ ಯಶಸ್ವಿಯಾಗದ ಮರಳು ಬ್ಲಾಕ್‍ಗಳನ್ನು ಕೆ.ಎಸ್.ಎಂ.ಸಿ.ಎಲ್. ಬೆಂಗಳೂರು ಇವರಿಗೆ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಉಪವಿಭಾಗಾಧಿಕಾರಿಗಳಾದ ಟಿ.ವಿ.ಪ್ರಕಾಶ್, ಪ್ರಸನ್ನಕುಮಾರ್ ಸೇರಿದಂತೆ ಎಲ್ಲಾ ತಾಲೂಕುಗಳ ತಹಶೀಲ್ದಾರರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.