ಶಿವಮೊಗ್ಗ,ಡಿ.27: ನಮ್ಮ ಆಹಾರ ಪದ್ಧತಿಯನ್ನು ಸರಿಪಡಿಸಿಕೊಂಡರೇ ಆರೋಗ್ಯ ಉತ್ತಮವಾಗಿರುತ್ತದೆ. ಹಿಂದಿನ ಕಾಲದ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳನ್ನು ಹೆಚ್ಚಾಗಿ ಬಳಸುತ್ತಿದ್ದರು. ಹಾಗಾಗಿ ಆರೋಗ್ಯವಂತರಾಗಿದ್ದರು ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಅವರು ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಜಿಲ್ಲಾ ಕೃಷಿಕ ಸಮಾಜ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಿರಿಧಾನ್ಯ ಹಬ್ಬ 2023 ಉದ್ಘಾಟಿಸಿ ಮಾತನಾಡಿದರು.
ಬೆಳಗಾಂ ಅಧಿವೇಶನದಲ್ಲಿ ಕೂಡ ಎಲ್ಲಾ ಜನಪ್ರತಿನಿಧಿಗಳಿಗೆ ಸಿರಿಧಾನ್ಯದ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಸಿರಿದಾನ್ಯ ಹಬ್ಬವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿದರು. ನಾವು ರುಚಿಗೆ ಪ್ರಾಮುಖ್ಯತೆ ಕೊಡುತ್ತ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುತ್ತಾ ಇದ್ದೇವೆ. ಮಧುಮೇಹಿಗಳ ಸಂಖ್ಯೆ ಜಾಸ್ತಿ ಆಗಿದೆ. ಸಣ್ಣ ವಯಸ್ಸಿನಲ್ಲಿ ಅನೇಕ ರೋಗಗಳಿಗೆ ಗುರಿಯಾಗುತ್ತಿದ್ದೇವೆ. ಆಹಾರ ಸೇವನೆಯ ಬಗ್ಗೆ ಜನರಿಗೆ ಮಾಹಿತಿಯ ಕೊರತೆ ಇದೆ. ಆಹಾರದ ವಿಚಾರವನ್ನು ತಿಳಿಯದಿದ್ದರೆ, ಮುಂದೆ ದೇಹಕ್ಕೆ ತೊಂದರೆಯಾಗುತ್ತದೆ. ಜನರಿಗೆ ತಿಳುವಳಿಕೆ ಕೊಡುವ ದೃಷ್ಟಿಯಿಂದ ಮತ್ತು ಸಿರಿಧಾನ್ಯ ಬಳಕೆಯಿಂದ ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ತಿಳಿಯಪಡಿಸುವುದಕ್ಕಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಿರಿಧಾನ್ಯಗಳ ಬಳಕೆಯಿಂದ ಆಸ್ಪತ್ರೆಗೆ ಹೋಗುವುದನ್ನು ತಪ್ಪಿಸಬಹುದು. ರೈತರಿಗೂ ಬೆಳೆಯಲು ಪ್ರೋತ್ಸಾಹ ಸಿಗುತ್ತದೆ. ಇನ್ನೂ ಬೇಡಿಕೆ ಬರಬೇಕಾಗಿದೆ. ಸಿರಿಧಾನ್ಯಗಳ ಬಳಕೆಯನ್ನು ಹೆಚ್ಚಿಸಿ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು 2023ನೇ ಸಾಲನ್ನು ಅಂತರ್‍ರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಗುರಿತಿಸಲಾಗಿದೆ. ಪ್ರಪಂಚದಲ್ಲಿ ಆರು ಸಾವಿರ ಸಿರಿಧಾನ್ಯ ತಳಿಗಳಿವೆ. ಶುಷ್ಕ ಹಾಗೂ ಅರೆಶುಷ್ಕ ವಾತಾವರಣದಲ್ಲಿ ಸಿರಿಧಾನ್ಯ ಬೆಳೆಯಬಹುದು. ಬರಗಾಲದಲ್ಲೂ ಕೂಡ ಇದನ್ನು ಬೆಳೆಯಲು ಸಾಧ್ಯ. ಹೊಟ್ಟೆಗೆ ಹಿತ ಜೀರ್ಣಕ್ಕೆ ಸುಲಭ. ರಕ್ತದ ಕೊರತೆಯನ್ನು ನೀಗಿಸುತ್ತದೆ. ರಾಗಿ, ಸಜ್ಜೆ, ಜೋಳ, ನವಣೆ ಮುಂತಾದ 9 ಬಗೆಯ ಸಿರಿಧಾನ್ಯಗಳು ನವರತ್ನಗಳು ಎಂದು ಪರಿಗಣಿಸಲ್ಪಟ್ಟಿವೆ. ಬರಗಾಲದಲ್ಲಿ ಇವೆಲ್ಲ ಆಪತ್‍ದ್ಭಾಂದವ ಧಾನ್ಯಗಳು. ಇದೇ ಸಂದರ್ಭದಲ್ಲಿ ಜಿಲ್ಲೆಯ ಕೃಷಿಯಲ್ಲಿ ಸಾಧನೆ ಮಾಡಿದ 45 ಜನ ರೈತರನ್ನು ಸನ್ಮಾನಿಸಲಾಗುವುದು. ಮಾಜಿ ಪ್ರಧಾನಿ ಚರಣ್‍ಸಿಂಗ್‍ರವರು ಭಾವಚಿತ್ರಕ್ಕೆ ನಮನ ಸಲ್ಲಿಸುವುದರೊಂದಿಗೆ ಈ ಸಿರಿಧಾನ್ಯ ಹಬ್ಬವನ್ನು ಅವರ ಹುಟ್ಟುಹಬ್ಬದ ದಿನದಂದು ಆಚರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರೇಮಗಳೂರು ಕಣ್ಣನ್ ಉಪನ್ಯಾಸ ನೀಡಿದರು. ಶಾಸಕಿ ಶಾರದಾ ಪೂರ್ಯನಾಯ್ಕ್ ಜಿಲ್ಲಾ ಪಂಚಾಯತ್ ಸಿ.ಇ.ಓ. ಲೋಖಂಡೆ, ಡಾ. ಜಗದೀಶ್, ನಗರದ ಮಹಾದೇವಪ್ಪ, ಹೆಚ್.ಎನ್. ನಾಗರಾಜ್, ಯೋಗೇಶ್ ಅಪ್ಪಾಜಯ, ದಿಲೀಪ್ ಕುಮಾರ್, ಡಿ.ಟಿ. ಮಂಜುನಾಥ್, ಬಸವರಾಜ್ ಡಿ.ಎಂ., ರೈತನಾಯಕ ಕೆ.ಟಿ.ಗಂಗಾಧರ್, ಆರ್.ಪ್ರಸನ್ನಕುಮಾರ್, ಕಲಗೋಡು ರತ್ನಾಕರ್, ಬಸವರಾಜಪ್ಪ ಮತ್ತಿತರರು ಇದ್ದರು.