ಸಾಗರ : ಸ್ಥಳೀಯವಾಗಿರುವ ವಿದ್ಯಾಸಂಸ್ಥೆಗಳನ್ನು ಜೋಪಾನ ಮಾಡಿಕೊಳ್ಳುವ ಮೂಲಕ ಶೈಕ್ಷಣಿಕ ಚಟುವಟಿಕೆಗಳನ್ನು ಅಭಿವೃದ್ದಿಪಡಿಸಲು ಎಲ್ಲರೂ ಮುಂದಾಗಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ತಾಲ್ಲೂಕಿನ ಹೆಗ್ಗೋಡಿನ ಕೇಡಲಸರದಲ್ಲಿ ವಿದ್ಯಾಭಿವೃದ್ಧಿ ಸಂಘದಿಂದ ನಡೆಸುತ್ತಿರುವ ವಿ.ಸಂ.ಪ್ರೌಢಶಾಲೆಯ ವಜ್ರ ಮಹೋತ್ಸವ, ಎಸ್.ರೂಪಶ್ರೀ ಪದವಿಪೂರ್ವ ಕಾಲೇಜಿನ ರಜತ ಮಹೋತ್ಸವ ಹಾಗೂ ಕಾಕಾಲ್ ಪದವಿ ಕಾಲೇಜಿನ ದಶಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕಾಲೇಜಿನ ನೂತನ ಕೊಠಡಿ ಉದ್ಘಾಟಿಸಿ, ಸಂಸ್ಥೆಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಶಿಕ್ಷಣ ಮಾತ್ರದಿಂದಲೇ ವ್ಯಕ್ತಿಯ ಹಾಗೂ ದೇಶದ ಅಭಿವೃದ್ಧಿ ಸಾಧ್ಯ. ನನ್ನ ಶಾಲೆ ನನ್ನ ಊರು ಎಂಬ ಅಭಿಮಾನವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಈ ಶಿಕ್ಷಣ ಸಂಸ್ಥೆಯಿಂದ ಕಲಿತು ಉನ್ನತ ಹುದ್ದೆಗೆ ಹೋದಾಗ ತಾನು ಕಲಿತ ಶಾಲೆಯ ಪ್ರಗತಿಯ ಬಗ್ಗೆ ಕಾಳಜಿ ತೋರಿಸಬೇಕು. ನಮ್ಮೂರ ದೇವಸ್ಥಾನ ಎಂದು ಅಭಿವೃದ್ಧಿಗೆ ದಾನ ಕಾರ್ಯ ಮಾಡಬೇಕು. ಸರ್ಕಾರವೂ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಹಿಂದೆ ನಾವು ಓದುವ ಹೊತ್ತಿನಲ್ಲಿ ಶಾಲೆಗಳಲ್ಲಿ ಸರಿಯಾದ ಸೌಲಭ್ಯಗಳಿಲಿಲ್ಲ. ಈಗ ಸಾಕಷ್ಟು ಸುಧಾರಣೆಗಳಾಗಿವೆ. ಅವಕಾಶಗಳು ತೆರೆದುಕೊಂಡಿವೆ. ಕೂಲಿಕಾರ್ಮಿಕರ ಮಕ್ಕಳೂ ವೈದ್ಯರು, ಎಂಜಿನಿಯರ್, ಕೆ.ಎ.ಎಸ್. ಮಾಡಬಹುದು. ಜೀವನದಲ್ಲಿ ಶಿಕ್ಷಣ ಮುಖ್ಯ ಘಟ್ಟ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಭವಿಷ್ಯದ ನಾಯಕರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಮಾತನಾಡಿ, ಸಾರ್ವಜನಿಕ ಕ್ಷೇತ್ರದಲ್ಲಿ ನಂಬಿಕೆ ಮುಖ್ಯ. ಹಿಂದೆ ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗ, ಬಿ.ವೈ.ರಾಘವೇಂದ್ರ ಅವರು ಸಂಸದರ ನಿಧಿಯಿಂದ ಹಾಗೂ ಎಂಎಡಿಬಿಯಿಂದ ಈ ಸಂಸ್ಥೆಗೆ ಅನುದಾನ ನೀಡಿ ಪ್ರಗತಿಗೆ ನಮ್ಮ ನೆರವು ನೀಡಿದ್ದೇವೆ. ೬೦ ವರ್ಷದ ಹಿಂದೆ ಈ ಸಂಸ್ಥೆ ಕಟ್ಟಿದ ಹಿರಿಯರು ಸಮಾಜದ ಮೇಲಿನ ಕಳಕಳಿಯಿಂದ ವಿದ್ಯೆಗೆ ಮಹತ್ವ ಕೊಟ್ಟು ದಾನಿಗಳಿಂದ ಹಣ ಸಂಗ್ರಹಿಸಿ ಈ ಸಂಸ್ಥೆ ಕಟ್ಟಿದ್ದಾರೆ. ಅವರ‍್ಯಾರಿಗೂ ಸ್ವಾರ್ಥದ ಚಿಂತನೆ ಇರಲಿಲ್ಲ. ರಾಜಕೀಯ ಬೆರೆಸದೇ ಶಿಕ್ಷಣ ಸಂಸ್ಥೆ ಕಟ್ಟಿದರು. ಕೊಡುವ ಕೈಗಳಿದ್ದರೆ ಅದು ಸದುಪಯೋಗವಾಗಬೇಕು. ಆದರೆ ಇಂದು ತಮ್ಮದೇ ಶಿಕ್ಷಣ ಸಂಸ್ಥೆ ಕಟ್ಟಿಕೊಳ್ಳುವುದಕ್ಕೆ, ಸ್ವಂತಕ್ಕೆ ಬಳಕೆ ಮಾಡಿಕೊಳ್ಳುವ ಪ್ರವೃತ್ತಿ ಬೆಳೆಯುತ್ತಿದೆ ಎಂದು ವಿಷಾದಿಸಿದರು.
ಇದೇ ಸಂದರ್ಭದಲ್ಲಿ ಶ್ರೇಷ್ಠ ದಾನಿಗಳಾದ ಚಂದ್ರಶೇಖರ್ ಕಾಕಾಲ್ ದಂಪತಿ, ಪಿ.ಡಿ.ಶ್ರೀಧರ ದಂಪತಿ, ಶಾರದಾ ಮೋಹನ್ ಪೈ ದಂಪತಿ, ದೇವಕಮ್ಮ ಮಂಕಳಲೆ ಅವರನ್ನು ಸನ್ಮಾನಿಸಲಾಯಿತು. ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಭಾಗಿ ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು.
ಕರ್ಣಾಟಕ ಬ್ಯಾಂಕ್ ಪ್ರಾದೇಶಿಕ ಕಚೇರಿ ಉಪ ಪ್ರಬಂಧಕ ನಾಗಭೂಷಣ ಭಟ್, ಭೀಮನಕೋಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಕೆ.ಮಂಜುನಥ ಶೆಟ್ಟಿ, ಹೆಗ್ಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಎಂ.ಎಲ್., ಪುರಪ್ಪೇಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಾ ದಿನೇಶ್,
ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಕೇಶವ ಸಂಪೆಕೈ, ದಾನಿ ಪಿ.ಡಿ.ಶ್ರೀಧರರಾವ್, ವಿದ್ವಾನ್ ನರಹರಿ ಭಟ್, ಸಂಸ್ಥೆ ನಿರ್ದೇಶಕರಾದ ಎಂ.ಎಸ್.ನಾಗರಾಜ್, ನಾಗರಾಜ ಸಭಾಹಿತ್, ಬಿ.ಎನ್.ನಾಗರಾಜ್ ಮತ್ತಿತರರು ಹಾಜರಿದ್ದರು. ನಾಗೇಂದ್ರ ಗುಮ್ಮಾನಿ ಸ್ವಾಗತಿಸಿದರು. ಕೇಶವ ಸಂಪೆಕೈ ಪ್ರಾಸ್ತಾವಿಕ ಮಾತನಾಡಿದರು. ವಿಷ್ಣು ಶರ್ಮ ನಿರೂಪಿಸಿದರು