ಶಿವಮೊಗ್ಗ : ಡಿಸೆಂಬರ್ ೨೩ : : ಮುಂದಿನ ಶೈಕ್ಷಣಿಕ ಸಾಲಿನಿಂದ ಅನ್ವಯಗೊಳ್ಳುವಂತೆ ರಾಜ್ಯದ ಪ್ರಾಥಮಿಕ ಹಂತದಿಂದ ಆರಂಭಗೊಂಡು ಯಾವುದೇ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತುಕೊಳ್ಳದಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು ಹೇಳಿದರು.
ಅವರು ಇಂದು ಭದ್ರಾವತಿ ತಾಲೂಕು ಎರೆಹಳ್ಳಿ ಸರ್ಕಾರಿ ಶಾಲೆಯ ಅಮೃತ ಮಹೋತ್ಸವ ಸಂಭ್ರಮಾಚರಣೆ ಹಾಗೂ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೆಪಿಎಸ್ ಮಾದರಿ ಶಾಲೆಗಳನ್ನು ಆರಂಭಿಸಲಾಗುತ್ತಿದ್ದು, ಆ ಶಾಲೆಗಳಲ್ಲಿ ಕಲಿಕೆ, ದೈಹಿಕ ಶಿಕ್ಷಣ ಸಹಿತ ನೃತ್ಯ, ಸಂಗೀತ ಮತ್ತಿತರ ಎಲ್ಲ ರೀತಿಯ ಶಿಕ್ಷಣಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಅಗತ್ಯವಾಗಿರುವ ಅನುದಾನವನ್ನು ರಾಜ್ಯದಾದ್ಯಂತ ಇರುವ ವ್ಯವಹಾರಸ್ಥರು ದೇಣಿಗೆ ಮೂಲಕ ಸುಮಾರು ೧೯೦೦ ಕೋಟಿ ರೂಪಾಯಿಗಳನ್ನು ನೀಡಲು ಆಸಕ್ತಿ ವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದವರು ನುಡಿದರು.
ಕೆಲವೇ ದಶಕಗಳ ಹಿಂದೆ ಬಹುಸಂಖ್ಯಾತ ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗುವುದು ಸಾಧ್ಯವಾಗುತ್ತಿರಲಿಲ. ಅಲ್ಲದೆ ನಿರೀಕ್ಷಿಸಿದಷ್ಟು ಮಟ್ಟದ ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯಗಳು ಕೂಡ ಇರಲಿಲ್ಲ. ದೇವರು-ದೇವಸ್ಥಾನಕ್ಕಿಂತ ಶಾಲಾ ಶಿಕ್ಷಣಕ್ಕೆ ಶ್ರಮಿಸುವುದೇ ದೇವರ ಕೆಲಸ ನಂಬಿರುವ ನಾನು ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ತಿಳಿಸಿದರು.
ರಾಜ್ಯದ ಮಾಜಿ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಎಸ್.ಬಂಗಾರಪ್ಪನವರ ಅವಧಿಯಲ್ಲಿ ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿತು. ಅಂದು ಮಕ್ಕಳನ್ನು ಶಾಲೆಗೆ ತರಲು ದಿನಕ್ಕೆ ಒಂದು ರೂ.ನಂತೆ ಹಣ ನೀಡುತ್ತಿದ್ದರು. ಗ್ರಾಮೀಣ ಕೃಪಾಕ ಸೌಲಭ್ಯವು ಕೂಡ ಬಂಗಾರಪ್ಪ ಅವರ ವಿಶೇಷ ಕೊಡುಗೆಗಳಲ್ಲಿ ಒಂದಾಗಿದೆ ಎಂದವರು ನುಡಿದರು.
ತಮ್ಮ ಅಸ್ಮಿತತೆಯ ಹಿಂದಿನ ಶಕ್ತಿಯನ್ನು ಅರಿತು, ತಾವು ಓದಿದ ಶಾಲೆಯ ಋಣ ತೀರಿಸುವ ಸದುದ್ದೇಶದಿಂದ ಹಳೆಯ ವಿದ್ಯಾರ್ಥಿಗಳೆಲ್ಲರೂ ಸಂಘಟಿತರಾಗಿ ಶಾಲೆಯ ಸವಾಂಗೀಣ ವಿಕಾಸಕ್ಕೆ ಶ್ರಮಿಸುವ, ಆ ಮೂಲಕ ಭಾವನಾತ್ಮಕ ಸಂಬಂಧಗಳನ್ನು ಬೆಸೆಯುವ, ಅಂದಿನ ಶಿಕ್ಷಕರನ್ನು ನೆನಪಿಸಿಕೊಂಡು ಅವರನ್ನು ಗೌರವಿಸುವ, ಹಳೆಯ ನೆನಪುಗಳನ್ನು ಮೆಲುಕು ಹಾಕುವ, ಹಳೆಯ ವಿದ್ಯಾರ್ಥಿಗಳ ಶ್ರಮಕ್ಕೆ ಅನಂತ ಧನ್ಯವಾದ ಅರ್ಪಿಸುವುದಾಗಿ ನುಡಿದರು.
ಮಕ್ಕಳಿಗೆ ಬಿಸಿ ಊಟದ ಜೊತೆಗೆ ವಾರಕ್ಕೊಮ್ಮೆ ಮೊಟ್ಟೆಗಳನ್ನು ವಿತರಿಸಲಾಗುತ್ತಿದೆ ಮೊಟ್ಟೆ ಸೇವಿಸದ ಮಕ್ಕಳಿಗೆ ಚಿಕ್ಕೆ ಅಥವಾ ಬಾಳೆಹಣ್ಣನ್ನು ವಿತರಿಸಲಾಗುತ್ತಿದೆ. ಎಂಟನೇ ತರಗತಿಯವರೆಗಿನ ಮಕ್ಕಳಿಗೆ ಮಾತ್ರವಾಗಿದ್ದ ಈ ಯೋಜನೆಯನ್ನು ಪ್ರಸ್ತುತ ೯ ಮತ್ತು ೧೦ನೇ ತರಗತಿಯವರೆಗೆ ವಿಸ್ತರಿಸಲು ಉದ್ದೇಶಿಸಲಾಗಿದ್ದು, ಅದಕ್ಕಾಗಿ ಸರ್ಕಾರ ಕೋಟ್ಯಾಂತರ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ ಎಂದ ಅವರು, ಸರ್ಕಾರಿ ಶಾಲೆಗಳಿಗೆ ಈಗಾಗಲೇ ಉಚಿತ ನೀರು ಮತ್ತು ವಿದ್ಯುತ್ ಸೌಲಭ್ಯ ಕಲ್ಪಿಸಿರುವುದಾಗಿ ಅವರು ನುಡಿದರು.
ಭದ್ರಾವತಿ ತಾಲೂಕಿನಲ್ಲಿ ೨೦೦ ಶಾಲೆಗಳ ಅಡುಗೆ ಕೋಣೆ ಮತ್ತು ೧೬೦ ಶಾಲಾ ನೂತನ ಕೊಠಡಿಗಳ ಅಗತ್ಯವಿದೆ ಇವೆಲ್ಲವನ್ನು ಹಂತಹಂತವಾಗಿ ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಇದರೊಂದಿಗೆ ಭದ್ರಾವತಿ ತಾಲೂಕಿನಲ್ಲಿ ಏಳು ಕೆಪಿಎಸ್ ಮಾದರಿಯ ಶಾಲೆಗಳನ್ನು ಆರಂಭಿಸಲು ಕ್ರಮ ವಹಿಸಲಾಗುವುದು. ಕೋರಿಕೆಯಂತೆ ಭದ್ರಾವತಿ ತಾಲೂಕಿನ ದೊಡ್ಡೇರಿ ಗ್ರಾಮಕ್ಕೆ ಹೊಸದಾಗಿ ಪ್ರೌಢಶಾಲೆಯನ್ನು ಮಂಜೂರು ಮಾಡಲಾಗುವುದು. ಈ ಶಾಲೆಗೆ ಹೆಚ್ಚಿನ ಸಂಖ್ಯೆಯ ಹೆಣ್ಣುಮಕ್ಕಳು ದಾಖಲಾಗುವಂತಾಗಬೇಕು ಎಂದವರು ಆಶಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸದ ಬಿ.ವೈ.ರಾಘವೇಂದ್ರ ಅವರು ಶಾಲೆಯ ಅಮೃತ ಮಹೋತ್ಸವದ ಅಂಗವಾಗಿ ಹೊರತರಲಾದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಭವ್ಯ ಭವಿಷ್ಯವನ್ನು ಸೃಷ್ಠಿಸುವ ಹೊಂಗನಸಿನೊಂದಿಗೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸುವ ಪ್ರತಿ ಪೋಷಕರು ತಮ್ಮ ಮಕ್ಕಳಿಗೆ ಮಾದರಿಯಾಗಿರುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಕಿವಿಮಾತು ಹೇಳಿದರು.
ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮನ್ನು ಪರಿಚಯಿಸಿದ ಶಾಲೆ ಎಂಬ ಹಿರಿಮೆಯಿಂದ ಹಳೆಯ ವಿದ್ಯಾರ್ಥಿಗಳು ಒಗ್ಗೂಡಿ ಶಾಲೆಯ ಅಮೃತ ಮಹೋತ್ಸವದ ಆಚರಣೆಗೆ ಮುಂದಾಗಿರುವುದು ಹರ್ಷದ ಸಂಗತಿ. ಈ ಸಂದರ್ಭದಲ್ಲಿ ಅಮೃತ ಮಹೋತ್ಸವದ ಆಚರಣೆಯಲ್ಲಿ ಗ್ರಾಮಸ್ಥರ ಸಹಕಾರ, ಶಿಕ್ಷಕರ ಅಮೂಲ್ಯ ಸೇವೆ, ಸಾಧಕ ವಿದ್ಯಾರ್ಥಿಗಳಿಂದಾಗಿ ಶಾಲೆಗೆ ಗೌರವ ಹೆಚ್ಚಾಗಿದೆ. ಇದರಿಂದಾಗಿ ಗ್ರಾಮದ ಪ್ರತಿಯೊಬ್ಬರೂ ಅಭಿನಂದನಾರ್ಹರು ಎಂದ ಅವರು ಶಾಲೆಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಶಾಲೆಯ ಉನ್ನತಿಗಾಗಿ ೫ಲಕ್ಷ ರೂ.ಗಳ ಧನಸಹಾಯ ಮಾಡುವುದಾಗಿ ಅವರು ನುಡಿದರು.
ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಕುಮಾರ್, ಹಳೆಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ವಿಠಲ್‌ರಾವ್ ಕೆ., ಆನಂದಪ್ಪ, ಅಧ್ಯಕ್ಷ ಚಂದ್ರಶೇಖರ್ ಈ., ಬಿ.ರಮೇಶ್, ಕೃಷ್ಣಮೂರ್ತಿ ವೈ.ಕೆ., ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಶಾಂತಾಬಾಯಿ ರಮೇಶ್, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ, ಡಯಟ್ ಉಪನಿರ್ದೇಶಕ ಬಸವರಾಜಪ್ಪ ಬಿ.ಆರ್., ನೌಕರರ ಸಂಘದ ಅಧ್ಯಕ್ಷ ಬಿ.ಸಿದ್ಧಬಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಪಂಚಾಕ್ಷರಿ ವಿ.ಹೆಚ್. ಸೇರಿದಂತೆ ಅನೇಕ ಗಣ್ಯರು, ದಾನಿಗಳು ಉಪಸ್ಥಿತರಿದ್ದರು.