Site icon TUNGATARANGA

ಡಿ.26 ರಂದು ಬಂಗಾರಧಾಮದಲ್ಲಿ ಬಡವರ ಪಾಲಿನ ಆಶಾಕಿರಣ /ಎಸ್.ಬಂಗಾರಪ್ಪ ಸವಿ ನೆನಪು ಕಾರ್ಯಕ್ರಮ: ವಿಚಾರ ವೇದಿಕೆಯ ಮುಖ್ಯಸ್ಥ ನಾಗರಾಜ್ ಮೂರ್ತಿ ವಿವರ

ಶಿವಮೊಗ್ಗ,ಡಿ.೨೩: ಎಸ್.ಬಂಗಾರಪ್ಪ ಪೌಂಡೇಶನ್, ಬಂಗಾರಪ್ಪ ವಿಚಾರ ವೇದಿಕೆ, ಅಭಿಮಾನಿ ಬಳಗ ಇವರ ಸಂಯುಕ್ತಾಶ್ರಯದಲ್ಲಿ ಡಿ.೨೬ರಂದು ಸಂಜೆ ೪ಕ್ಕೆ ಸೊರಬದ ಬಂಗಾರಧಾಮದಲ್ಲಿ ಎಸ್.ಬಂಗಾರಪ್ಪ ಸವಿ ನೆನಪು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಚಾರ ವೇದಿಕೆಯ ಮುಖ್ಯಸ್ಥ ನಾಗರಾಜ್ ಮೂರ್ತಿ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಸ್.ಬಂಗಾರಪ್ಪನವರು ಸಮಾಜವಾದಿ ಚಿಂತಕರಾಗಿದ್ದರು. ರಾಜ್ಯದ ರಾಜಕಾರಣಕ್ಕೆ ಸ್ಪಷ್ಟ ದಿಕ್ಕು ತೋರಿಸಿದವರು. ಬಡವರ ಪಾಲಿನ ಆಶಾಕಿರಣವಾಗಿದ್ದರು.

ಶಾಂತವೇರಿ ಗೋಪಾಲಗೌಡರ ಕುಲುಮೆಯಲ್ಲಿ ಬೆಂದು ನೊಂದವರ ಕಣ್ಣೀರು ಹೊರಿಸಿದ ಧೀಮಂತ ವ್ಯಕ್ತಿ, ಸುಸಂಸ್ಕೃತ ರಾಜಕಾರಣಿ ಇಂತಹ ಮಹಾನ್ ವ್ಯಕ್ತಿಯ ೧೨ನೇ ವರ್ಷದ ಪುಣ್ಯ ಸ್ಮರಣೆ ನೆನಪಿನ ಕಾರ್ಯಕ್ರಮವನ್ನು ಸೊರಬದಲ್ಲಿಯೇ ಆಯೋಜಿಸಲಾಗಿದೆ ಎಂದರು.


ಈಗಾಗಲೇ ಬಂಗಾರಪ್ಪ ಸ್ಮಾರಕ ಆರಂಭವಾಗಿದೆ. ಅದರ ಮೂಲಕ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು, ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗುವುದು. ಈಗಾಗಲೇ ಬಂಗಾರಪ್ಪ ಪೌಂಡೇಶನ್ ಮತ್ತು ವಿಚಾರ ವೇದಿಕೆಯಿಂದ ಕಲಾ ಕ್ರೀಡೆ ಹೆಸರಿನಲ್ಲಿ ಕಾರ್ಯಕ್ರಮ ಆಯೋಜನೆ ಮತ್ತು ಪ್ರಶಸ್ತಿಗಳನ್ನು ನೀಡುತ್ತ ಬಂದಿದ್ದೇವೆ ಎಂದರು.


೨೬ರ ಸಂಜೆ ೪ಕ್ಕೆ ಬಂಗಾರಧಾಮದಲ್ಲಿ ಹಮ್ಮಿಕೊಂಡಿರುವ ಸಭಾ ಕಾರ್ಯಕ್ರಮವನ್ನು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಯವರು ಉದ್ಘಾಟಿಸುವರು. ಸಚಿವ ಎಚ್.ಕೆ. ಪಾಟೀಲ್ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಉಪಸ್ಥಿತರಿರುವರು. ಗೀತಾ ಶಿವರಾಜ್‌ಕುಮಾರ್ ಅಭಿನಂದನ ನುಡಿಗಳನ್ನಾಡುವರು. ಮತ್ತು ಡಾ. ಅನೀಶ್ ವಿದ್ಯಾಶಂಕರ್‌ರವರಿಂದ ಸಂಗೀತ ಕಾರ್ಯಕ್ರಮ ಇರುತ್ತದೆ ಎಂದರು.


ವಿಚಾರ ವೇದಿಕೆಯ ಅಧ್ಯಕ್ಷ ವೇಣುಗೋಪಾಲ್ ನಾಯಕ್ ಮಾತನಾಡಿ, ಬಂಗಾರಪ್ಪ ವರ್ಣಮಯ ವ್ಯಕ್ತಿ ಬರಗಾಲದಂತಹ ಸಂದರ್ಭದಲ್ಲಿ ರೈತರಿಗೆ ಬೀಜಗೊಬ್ಬರ ಕೊಟ್ಟವರು, ಮುಖ್ಯಮಂತ್ರಿಯಾಗಿದ್ದಾಗ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದು ಬಡವರ ಕಲ್ಯಾಣಕ್ಕಾಗಿ ದುಡಿದವರು. ಇಂತವರ ಪುಣ್ಯ ಸ್ಮರಣೆಯನ್ನು ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಿ.ಡಿ.ಮಂಜುನಾಥ್, ಗೋಪಾಲಕೃಷ್ಣ ಟಿ.ವಿ., ಶಮಂತ್, ಗೀರೀಶ್, ಹರೀಶ್ ಇದ್ದರು.

Exit mobile version