ಶಿವಮೊಗ್ಗ,ಡಿ.೨೨: ಸೊರಬ ತಾಲ್ಲೂಕು ಆನವಟ್ಟಿ ಹೋಬಳಿಯ ಹುರುಳಿ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ (ನರೇಗ)ಸಾಕಷ್ಟು ಭ್ರಷ್ಟಚಾರವಾಗಿದೆ ಎಂದು ಕೆಆರ್ ಎಸ್ ಪಕ್ಷದ ಮಂಜುನಾಥ್ ಹಿರೇಚೌಟಿ ಆರೋಪಿಸಿದರು.
ಅವರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೊಸ ಅಡಿಕೆ ತೋಟ ನಿರ್ಮಾಣದ ವೇಳೆ ಸೊರಬ ತಾಲೂಕು ಹುರಳಿ ಗ್ರಾ.ಪಂ. ಕಂಪ್ಯೂಟರ್ ಆಪರೇಟರ್ ಗುರುನಾಥ್ ಅವರು ಭ್ರಷ್ಟಾಚಾರ ಎಸಗಿದ್ದಾರೆ. ಅವರು ತಮ್ಮ ಹೆಂಡತಿ ಕೂಲಿ ಕೆಲಸ ಮಾಡದಿದ್ದರೂ ಕೂಡ ೩೫೭ಕ್ಕೂ ಹೆಚ್ಚು ಮಾನವ ದಿನಗಳ ಹಣವನ್ನು ಜಮೆ ಮಾಡಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಒಂಬಡ್ಸಮನ್ ನಿಂದ ಸ್ಥಳ ಪರಿಶೀಲನೆ ಆಗಿದೆ. ತನಿಖೆಯ ವರದಿ ಬರಬೇಕಿದೆ. ಓಂಬಡ್ಸಮನ್ ವರದಿ ಖಚಿತತೆಯಾಗಿ ಬರುವ ನಿರೀಕ್ಷೆ ಇಲ್ಲ. ಹಾಗಾಗಿ ಜಾಗೃತಿ ಅವಶ್ಯಕತೆ ಇದೆ ಎಂದರು.
೭೫ ಸಾವಿರ ರೂ. ಹಣ ದುರುಪಯೋಗವಾಗಿದೆ. ಆದರೆ ಫಲಾನುಭವಿಗಳಿಗೆ ಹಣ ಹೋಗಿಲ್ಲದ ಕಾರಣ ಈ ಕುರಿತು ಫಲಾನುಭವಿಗಳ ಜಾಗೃತ ಅಭಿಯಾನ ಆರಂಭಿಸಲಾಗುವುದು. ಸಾಮಾಗ್ರಿ ವೆಚ್ಚ ಮತ್ತುಕೂಲಿ ವೆಚ್ವಗಳೆರಡು ಈ ಉದ್ಯೋಗ ಖಾತ್ರಿಯಲ್ಲಿ ಬಂದಿದೆ.
ಅಲ್ಲದೇ ಹೊಸ ಅಡಿಕೆ ತೋಟ ನಿರ್ಮಾಣಕ್ಕೆ ಸಂಬಂಧಿಸಿದಂತೆ ಫಲಾನುಭವಿಗಳನ್ನು ಸಂದರ್ಶನ ನಡೆಸಿದಾಗ ಸುಮಾರು ೩೦ಕ್ಕೂ ಹೆಚ್ಚು ಫಲಾನುಭವಿಗಳು ತಾವು ಮೊದಲೇ ಹಣ ಕೊಟ್ಟಿರುವುದಾಗಿ ತಿಳಿಸಿರುತ್ತಾರೆ. ಇಡೀ ರಾಜ್ಯದಲ್ಲಿಯೇ ಇಂತಹ ಘಟನೆಗಳು ನಡೆದಿರುತ್ತವೆ ಎಂದರು.
ಈ ಬಗ್ಗೆ ಜಿ.ಪಂ. ಸಿಇಓರವರಿಗೆ ದೂರು ನೀಡಿದ್ದೇವೆ. ಇದೊಂದು ಬಹಳ ಅವ್ಯವಹಾರವಾಗಿದ್ದು, ಲಕ್ಷಾಂತರ ರೂ. ಹಗರಣವಾಗಿದೆ. ರೈತರ , ಬಡವರ ಜೀವ ಹಿಂಡುವ ಇಂತಹ ಭ್ರಷ್ಟ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಬೇಕು ಮತ್ತು ಇಡೀ ಘಟನೆಯನ್ನು ಸಿಇಡಿ ತನಿಖೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಆರ್.ಎಸ್. ಪಕ್ಷದ ಜಿಲ್ಲಾಧ್ಯಕ್ಷ ಪ್ರಭು ಎಸ್.ಕೊಮ್ಮನಾಳ್, ಸಮೀರ್ ಇದ್ದರು.