ಶಿವಮೊಗ್ಗ,ಡಿ.೨೧: ಕೇಂದ್ರ ಮತ್ತು ರಾಜ್ಯ ಸರ್ಕಾರದ ಅವೈಜ್ಞಾನಿಕ ಕೃಷಿ ನೀತಿಗಳಿಂದಾಗಿ ರೈತರ ಕೃಷಿ ಭೂಮಿ ಹೋಯಿತು. ಆಹಾರ ಉತ್ಪಾದನೆಯೂ ಹೋಯಿತು. ಎ.ಪಿ.ಎಂ.ಸಿ. ಕಾಯಿದೆಯಿಂದ ಮಾರಾಟ ಪ್ರಕ್ರಿಯೆ ಹಾಳಾಯಿತು. ರೈತರ ಬದುಕೆ ಹಾಳಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವರಿಷ್ಠರಾದ ಕೆ.ಟಿ. ಗಂಗಾಧರ್ ಹೇಳಿದ್ದಾರೆ.
ಅವರು ಇಂದು ಡಿ.ಸಿ.ಸಿ. ಬ್ಯಾಂಕ್ ಆವರಣದಲ್ಲಿ ರೈತರ ನಾಯಕ ಎನ್.ಡಿ.ಸುಂದರೇಶ್‌ರವರ ೩೧ನೇ ವರ್ಷದ ಪುಣ್ಯ ಸ್ಮರಣೆ ಹಾಗೂ ರೈತರ ಜಾಗ್ರತೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಬಹುರಾಷ್ಟ್ರೀಯ ಕಂಪನಿಗಳು ಭಾರತಕ್ಕೆ ದಾಳಿ ಇಟ್ಟಿದೆ. ಭಾರತದ ಆಹಾರದ ಸಾರ್ವಭೌಮತೆಯನ್ನು ಕೇಂದ್ರ ಸರ್ಕಾರ ಖಾಸಗಿ ಕಂಪನಿಗಳಿಗೆ ಕೊಡುವ ಹುನ್ನಾರವನ್ನು ಕಾನೂನತ್ಮಾಕವಾಗಿ ತರುತ್ತದೆ. ಇದರಿಂದ ರೈತರ ಬಳಿ ಇರುವ ತುಂಡು ಭೂಮಿಯೂ ಇರಲ್ಲ. ಮಧ್ಯವರ್ತಿಗಳ ಮತ್ತು ಬಂಡವಾಳ ಶಾಹಿಗಳ ದಾಸರಾಗುವ ಪರಿಸ್ಥಿತಿ ಬರುತ್ತದೆ. ರೈತನಾದವನು ಭೂಮಿಯ ಬಳಿ ಹೋಗಿ ಹುತ್ತುವುದು, ಬಿತ್ತುವುದು ಮರೆತ್ತಿದ್ದಾನೆ. ರೈತರಿಗೆ ಭೂಮಿಯ ಜ್ಞಾನ ಹೋದರೆ, ಕೃಷಿ ಜ್ಞಾನ ಮರೆತು ಹೋದರೆ, ಎಲ್ಲವೂ ಕಳಕೊಂಡಾಗೆ.
ಶೇ.೭೫ರಷ್ಟು ಹಳ್ಳಿಗಳಿರುವ ಭಾರತ ದೇಶದಲ್ಲಿ ೭೦% ಜನ ಕೃಷಿ ಅವಲಂಭನೆ ಮಾಡಿದ್ದರು ಕೂಡ ರೈತರು ತಮ್ಮ ಕೃಷಿ ವ್ಯವಸಾಯದ ಬಗ್ಗೆ ಅಸಡ್ಡೆ ತೋರಿಸಬಾರದು. ನಮ್ಮ ಹಿರಿಯರು ಬೀಜ ಸಂಗ್ರಹಣೆ ವಿಧಾನವನ್ನು ಮತ್ತು ಕೃಷಿಯ ಎಲ್ಲಾ ಜ್ಞಾನವನ್ನು ಹೊಂದಿದ್ದರು. ಸುಂದರೇಶ್ ಸ್ಮರಣೆಯಂದು ನಾವು ಪ್ರತಿಜ್ಞೆ ಮಾಡಬೇಕಾಗಿದೆ. ನಮ್ಮ ಕೃಷಿ ಭೂಮಿಯನ್ನು ಬಿಡುವುದಿಲ್ಲ. ನಮ್ಮ ಮಕ್ಕಳಿಗೆ ಕೃಷಿ ಜ್ಞಾನವನ್ನು ನೀಡಿ ಉತ್ತಮ ಕೃಷಿಕರನ್ನಾಗಿ ಮಾಡುತ್ತೇವೆ. ಮನೆಯ ಹೆಣ್ಣು ಮಕ್ಕಳಿಗೂ ವ್ಯವಸಾಯದಲ್ಲಿ ತೊಡಗಿಸಿಕೊಳ್ಳಬೇಕು.
ರೈತರಿಗೆ ಅನ್ಯಾಯವಾದರೆ ಹೋರಾಟವನ್ನು ಮುಂದುವರೆಸುತ್ತೇವೆ. ಮೂರು ಕೃಷಿ ಕಾಯಿದೆಯನ್ನು ವಾಪಸ್ಸು ಪಡೆಯಲೇಬೇಕು. ಕನಿಷ್ಟ ಬೆಲೆ ನೀಡುವುದಷ್ಟೆ ಅಲ್ಲ, ಕೃಷಿ ಉತ್ಪನ್ನಗಳಲ್ಲಿ ೨೭ ಉತ್ಪನ್ನಗಳನ್ನು ಕನಿಷ್ಟ ಬೆಲೆಯಿಂದ ಹೊರಗಿಡಲಾಗಿದೆ. ಈ ದೇಶದಲ್ಲಿ ರೈತ ಬೆಳೆದ ಬೆಲೆಗೆ ವೈಜ್ಞಾನಿಕ ಬೆಲೆಯನ್ನು ಸರ್ಕಾರವೇ ನಿಗದಿ ಮಾಡಬೇಕು. ಕಡಿಮೆ ಬೆಲೆಗೆ ಕೃಷಿ ಉತ್ಪನ್ನಗಳನ್ನು ರೈತರಿಂದ ಖರೀದಿ ಮಾಡಿದರೆ, ಶಿಕ್ಷಾರ್ಹ ಅಪರಾಧ ಎಂಬ ಕಾಯಿದೆಯನ್ನು ತಂದು ರೈತರಿಗೆ ಕಾನೂನು ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೂ ಮುನ್ನ ರೈತನಾಯಕ ಸುಂದರೇಶ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ವಿವಿಧ ನಾಯಕರು ರೈತರ ವಿವಿಧ ಬೇಡಿಕೆಗಳ ಬಗ್ಗೆ ಜಾಗೃತಿ ಮೂಡಿಸಿದರು.
ವೇದಿಕೆಯಲ್ಲಿ ಪ್ರಮುಖರಾದ ರಾಮಣ್ಣ, ಹಾಲೇಶಪ್ಪ ಗೌಡರು, ಯಶವಂತರಾವ್ ಘೋರ್ಪಡೆ, ಡಿ.ವಿ. ವಿರೇಶ್, ಬಿ.ಆರ್.ಸಣ್ಣರಂಗಪ್ಪ, ಕೆ.ಆರ್. ರಂಗಣ್ಣ, ಜಗದೀಶ್ ನಾಯಕ್, ಸಿ.ಎಸ್. ಮಂಜಣ್ಣ ಮತ್ತಿತರರು ಇದ್ದರು